ಕಲಬುರಗಿ: ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರು ಮತ್ತು ಅಂಗವಿಕಲರು ಮತದಾನದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮತಗಟ್ಟೆಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಮತದಾನದ ದಿನದಂದು ಕಡ್ಡಾಯವಾಗಿ ಮತಗಟ್ಟೆಗೆ ಆಗಮಿಸಿ ಉತ್ಸಾಹದಿಂದ ಮತದಾನ ಮಾಡಬೇಕೆಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ ಮತದಾರರಲ್ಲಿ
ಮನವಿ ಮಾಡಿದರು.
ಶುಕ್ರವಾರ ಸಂಜೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಎಸ್.ವಿ.ಪಿ. ವೃತ್ತದಿಂದ ಜಗತ್ ವೃತ್ತದವರೆಗೆ ತೃತೀಯ ಲಿಂಗಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರಿಂದ ಹಮ್ಮಿಕೊಂಡಿದ್ದ ಕ್ಯಾಂಡಲ್ ಲೈಟ್ ಜಾಥಾ ಉದ್ಘಾಟಿಸಿ ಮಾತನಾಡಿ, ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ವಿಶೇಷವಾದ ಸ್ಥಾನಮಾನವಿದೆ. ಅವರಿಗೂ ಸಹಿತ ಮತದಾನದ ಹಕ್ಕಿದೆ. ತಮ್ಮ ಹಕ್ಕನ್ನು ಚಾಚೂ ತಪ್ಪದೇ ಚಲಾಯಿಸಬೇಕು ಎಂದರು.
ಮತದಾನದ ಹಕ್ಕು ಸಂವಿಧಾನಾತ್ಮಕವಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ದೊರೆತಿದೆ. ಪ್ರತಿನಿಧಿಗಳನ್ನು ಚುನಾವಣೆಗಳ ಮೂಲಕ ಆಯ್ಕೆ ಮಾಡುವಾಗ ಮತವನ್ನು ಹಣ ಅಥವಾ ಬೇರೆ ಯಾವುದೇ ಆಮಿಷಕ್ಕೆ ಒಳಗಾಗದೇ ಮತವನ್ನು ಮಾರಿಕೊಳ್ಳದೇ ನೈತಿಕವಾಗಿ ಮತದಾನ ಮಾಡಬೇಕು ಎಂದರು.
ಮತದಾನದ ಚೀಟಿ ಹೊಂದಿರುವ ಎಲ್ಲರೂ ಮತ ಚಲಾಯಿಸಿದ್ದಲ್ಲಿ ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಇದುವೇ ಚುನಾವಣಾ ಆಯೋಗದ ಗುರಿಯಾಗಿದೆ ಎಂದರು.
ಜಾಥಾದಲ್ಲಿ ಜಿ. ಪಂ. ಉಪ ಕಾರ್ಯದರ್ಶಿ ಮಹ್ಮದ್ ಯುಸೂಫ್, ಜಿ. ಪಂ. ಮುಖ್ಯ ಯೋಜನಾಧಿಕಾರಿ ಸುನೀಲ ಬಿಸ್ವಾಸ್, ಜಿ. ಪಂ. ಸಹ ಕಾರ್ಯದರ್ಶಿ ಸಂಪತ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಆರ್. ರೆಡ್ಡಿ, ಯೋಜನಾ ನಿರ್ದೇಶಕ ಸೂರ್ಯಕಾಂತ, ಕೃಷಿ ಸಹಾಯಕ ನಿರ್ದೇಶಕ ಅನೀಲ ರಾಠೊಡ, ಕ್ಷೇತ್ರ ಶಿಕ್ಷಣಾಧಿ ಕಾರಿ ಚನ್ನಬಸಪ್ಪ ಮುಧೋಳ, ತೃತೀಯ ಲಿಂಗಿಗಳ ಸ್ನೇಹಾ ಸೊಸೈಟಿಯ ಅಧ್ಯಕ್ಷೆ ಮನೀಷಾ ಚವ್ಹಾಣ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.