Advertisement

Vijayendra ಬಿಜೆಪಿ ಸಾರಥ್ಯ; ಕಾಂಗ್ರೆಸ್‌ಗೆ ಹೆಚ್ಚಿನ ಲೋಕಸಭಾ ಸ್ಥಾನ:ಸಚಿವ ತಂಗಡಗಿ

05:49 PM Nov 13, 2023 | Team Udayavani |

ಗಂಗಾವತಿ: ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನ ಗೆಲ್ಲುವ ಬಿಜೆಪಿ ಹೈಕಮಾಂಡ್ ಉದ್ದೇಶ ಈಡೇರುವುದಿಲ್ಲ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರನ್ನು ಕೆಳಗಿಳಿಸಿದ ತತ್ ಕ್ಷಣವೇ ರಾಜ್ಯದ ವೀರಶೈವ ಲಿಂಗಾಯತರು ಬಿಜೆಪಿಗೆ ವಿಮುಖರಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ರಾಜ್ಯದ ಸಮಗ್ರ ಪ್ರಗತಿಗೆ ಕೈಜೋಡಿಸಿದ್ದು ಇದು ಲೋಕಸಭಾ ಚುನಾವಣೆಯವರೆಗೂ ಮುಂದುವರಿಯಲಿದೆ ಎಂದು ಕನ್ನಡ ಸಂಸ್ಕೃತಿ  ಸಚಿವ ಶಿವರಾಜ್ ಎಸ್.  ತಂಗಡಗಿ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭಾ ಚುನಾವಣೆ ನಡೆದು 6 ತಿಂಗಳು ಕಳೆದರೂ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನನ್ನು ನೇಮಕ ಮಾಡದಷ್ಟು ರಾಜ್ಯ ಬಿಜೆಪಿ ಮೇಲೆ ಪ್ರಧಾನಮಂತ್ರಿ ಮತ್ತು ಗೃಹ ಸಚಿವರು ಹಾಗೂ ಪಕ್ಷದ ಹೈಕಮಾಂಡ್ ನಿರ್ಲಕ್ಷ್ಯ ಹೊಂದಿದ್ದಾರೆ. ಕಾಂಗ್ರೆಸ್ ಒತ್ತಾಯದ ಹಿನ್ನೆಲೆಯಲ್ಲಿ ಮುಜುಗರದಿಂದ ತಪ್ಪಿಸಿಕೊಳ್ಳಲು ಇದೀಗ ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಈ ನೇಮಕ ಮುಖಂಡರಾದ ಸಿ.ಟಿ.ರವಿ, ಬಸನಾಗೌಡ ಪಾಟೀಲ್ ಯತ್ನಾಳ, ಬಿ.ಎಲ್.ಸಂತೋಷ್, ಶೋಭಾ ಕರಂದ್ಲಾಜೆ, ರಮೇಶ ಜಿಗಜಿಣಗಿ, ಚಂದ್ರಕಾಂತ ಬೆಲ್ಲದ್, ಕೆ.ಎಸ್.ಈಶ್ವರಪ್ಪ, ಬಿ.ಸೋಮಣ್ಣ ಸೇರಿ ಬಹುತೇಕ ಹಿರಿಯರಿಗೆ ಇಷ್ಟವಿಲ್ಲ. ಸ್ವತಃ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ನೇಮಕ 3 ವರ್ಷಕ್ಕೆ ಸೀಮಿತ ಎಂದು ಹೇಳುವ ಮೂಲಕ ಅಪಸ್ವರವೆತ್ತಿದ್ದಾರೆ. ಪ್ರಧಾನಮಂತ್ರಿಗಳು ತಮ್ಮ ಸ್ಥಾನದ ಪರಿವೆ ಇಲ್ಲದೇ ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ 46 ಭಾರಿ ಭೇಟಿ ನೀಡಿ ಪ್ರಚಾರ ಮಾಡಿದರೂ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ವಿಫಲರಾದ ಸಂದರ್ಭದಲ್ಲಿಯೇ ಕೇಂದ್ರ ಬಿಜೆಪಿ ಹೈಕಮಾಂಡ್ ಹಾಗೂ ಸಂಘ ಪರಿವಾರದವವರು ಸ್ಥಳೀಯ ನಾಯಕರ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದು ವಿಪಕ್ಷ ನಾಯಕನ ಸ್ಥಾನಕ್ಕೆ ಜೆಡಿಎಸ್ ನ ಎಚ್.ಡಿ.ಕುಮಾರ ಸ್ವಾಮಿಯನ್ನು ಬಿಜೆಪಿಯವರು ಒಪ್ಪಿಕೊಂಡರೂ ಆಶ್ಚರ್ಯವಿಲ್ಲ ಎಂದರು.

ಬಿ.ಎಸ್.ಯಡಿಯೂರಪ್ಪನವರ ಹೋರಾಟದ ಜೀವನದ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತರು ಸೇರಿ ಅನೇಕ ವರ್ಗಗಳ ಬೆಂಬಲವಿತ್ತು. ವಿಜಯೇಂದ್ರ ಬಿಎಸ್‌ವೈ ಅವರ ಪುತ್ರ ಎನ್ನುವ ಮಾತ್ರಕ್ಕೆ ರಾಜ್ಯಾಧ್ಯಕ್ಷರಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನ ಗೆಲ್ಲಲಿದ್ದು ಬಿಜೆಪಿ ಏನೇ ಮಾಡಿದರೂ ನಮ್ಮ ಗ್ಯಾರಂಟಿ ಯೋಜನೆಗಳ ಮುಂದೆ ಗೆಲ್ಲಲು ಸಾಧ್ಯವಿಲ್ಲ. ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರು ಕಾಂಗ್ರೆಸ್ ಪಕ್ಷದಲ್ಲಿ ಸಮುದಾಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸಿದಂತೆ ಲೋಕಸಭಾ ಚುನಾವಣೆಯಲ್ಲೂ ಬೆಂಬಲಿಸುವ ನಿರೀಕ್ಷೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next