Advertisement

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

09:09 PM Dec 30, 2024 | Team Udayavani |

ಬೆಂಗಳೂರು: ಬೀದರ್‌ನ ಯುವ ಗುತ್ತಿಗೆದಾರ ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಆತ್ಮಹತ್ಯೆ ಪ್ರಕರಣ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಬೇಕು. ಇಲ್ಲದಿದ್ದರೆ ಜ.4ರಂದು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಬಿಜೆಪಿ ಎಚ್ಚರಿಕೆ ನೀಡಿದೆ.

Advertisement

ಸೋಮವಾರ ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರಕರಣ ಸಿಬಿಐಗೆ ವಹಿಸಲು ರಾಜ್ಯ ಸರಕಾರ ವಿಫಲವಾದಲ್ಲಿ ಜ.4 ರಂದು ಕಲಬುರಗಿಯಲ್ಲಿ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಿ ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೂ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಕೈಗೊಂಡರೆ ದಿಲ್ಲಿಯಿಂದ ನಿಮಗೆ ಕರೆ ಬರುತ್ತದೆ ಮತ್ತು ನಿಮ್ಮ ಕುರ್ಚಿಗೆ ಕುತ್ತು ಬರುತ್ತದೆ ಎಂದು ಹೆದರಬೇಡಿ. ಯಾವುದಕ್ಕೂ ಹೆದರಬೇಡಿ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಿ. ಹಿಂದುಳಿದ ವರ್ಗಗಳ ಚಾಂಪಿಯನ್ ಆಗಿರುವುದಾಗಿ ನೀವೆ ಹೇಳಿಕೊಂಡಿದ್ದೀರಿ. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ’ ಎಂದರು.

‘ಆಂದೋಲನದ ಸಿದ್ಧಲಿಂಗ ಸ್ವಾಮೀಜಿ ಮತ್ತು ಬಿಜೆಪಿ ನಾಯಕರನ್ನು ಹತ್ಯೆ ಮಾಡಲು ಮಹಾರಾಷ್ಟ್ರದ ಸೋಲಾಪುರದ ಹಂತಕರ ನೇಮಿಸಲಾಗಿದೆ ಎಂದು ಗುತ್ತಿಗೆದಾರ ಸಚಿನ್ ತಮ್ಮ ಡೆತ್ ನೋಟ್‌ನಲ್ಲಿ ತಿಳಿಸಿದ್ದಾರೆ. ಇದು ಗಂಭೀರ ವಿಷಯವಾಗಿದ್ದು, ರಾಜ್ಯ ಬಿಜೆಪಿ ಜ. 3ರವರೆಗೆ ಕಾಯಲಿದೆ. ಪ್ರಕರಣವನ್ನು ಸಿಬಿಐಗೆ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ದೇವರು ಬುದ್ಧಿ ನೀಡಲಿ’ ಎಂದು ಹೇಳಿದರು.

ಫೋಟೋ ಬಿಡುಗಡೆಗೊಳಿಸಿದ ವಿಜಯೇಂದ್ರ: 
‘ಸಂತ್ರಸ್ತನಿಗೆ ಬೆದರಿಕೆ ಹಾಕಿರುವ ಆರೋಪಿ ರಾಜು ಕಾಪನೂರ ಪ್ರಿಯಾಂಕ್ ಖರ್ಗೆ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆಪ್ತ. ಆರೋಪಿ ಸಾಮಾನ್ಯ ವ್ಯಕ್ತಿಯಲ್ಲ ಮತ್ತು ಹೆಚ್ಚು ಪ್ರಭಾವಶಾಲಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣ ಸಿಬಿಐಗೆ ವಹಿಸಬೇಕು’ ಎಂದು ಒತ್ತಾಯಿಸಿದರು. ರಾಜು ಕಾಪನೂರ ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇರುವ ಫೋಟೊಗಳ ಬಿಡುಗಡೆ ಮಾಡಿದರು.

Advertisement

ಪ್ರಕರಣ ಸಿಬಿಐಗೆ ವಹಿಸಬೇಕೆಂಬುದು ಮೃತ ಸಚಿನ್ ಕುಟುಂಬದವರ ಬೇಡಿಕೆಯಾಗಿದೆ. ಈ ಹಿಂದೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು. ಸರ್ಕಾರ ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದು, ಮೃತ ಗುತ್ತಿಗೆದಾರರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next