Advertisement

Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ

03:01 AM Dec 26, 2024 | Team Udayavani |

ಬೆಂಗಳೂರು: ಶಾಸಕ ಮುನಿರತ್ನ ಮೇಲೆ ನಡೆದಿರುವ ಮೊಟ್ಟೆ ಎಸೆತ ಪ್ರಕರಣದಿಂದ ಬಿಜೆಪಿ ಕೆಂಡಾಮಂಡಲವಾಗಿದ್ದು, ಘಟನೆಯನ್ನು ಖಂಡಿಸಿರುವುದೂ ಅಲ್ಲದೆ, ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

Advertisement

ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಅಧಿಕಾರ ಇದೆಯೆಂದು ಜನಪ್ರತಿನಿಧಿ ಮೇಲೆ ದಬ್ಟಾಳಿಕೆ ಮಾಡುವುದು, ಅವಮಾನಿಸುವುದು ಖಂಡನೀಯ. ಇದನ್ನು ಯಾರೂ ಒಪ್ಪಲಾಗದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಖಾನಾಪುರ ಇನ್‌ಸ್ಪೆಕ್ಟರ್‌ ಅಮಾನತು ಕುರಿತು ಪ್ರತಿಕ್ರಿಯಿಸಿದ ಅವರು, ಒಂದೆಡೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ನಡೆದಿದೆ; ಅಧಿಕಾರದ ದರ್ಪ, ಮದ ನೆತ್ತಿಗೇರಿದರೆ ಯಾವ ರೀತಿ ನಡೆದುಕೊಳ್ಳಬಹುದು ಎಂಬುದನ್ನು ಇದು ತೋರಿಸಿ ಕೊಡುತ್ತಿದೆ ಎಂದು ಆಕ್ಷೇಪಿಸಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದವರ ಮೇಲೆ ನೀವು ಕ್ರಮ ಕೈಗೊಳ್ಳಲಿಲ್ಲ; ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿರಬೇಕಾದರೆ ಶಾಸಕರ ಮೇಲೆ ಹಲ್ಲೆ ಮಾಡಲು ಗೂಂಡಾಗಳು ನುಗ್ಗಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡಿಲ್ಲ. ಸರಕಾರವು ಅಧಿಕಾರ ಇದೆಯೆಂದು ಮನ ಬಂದಂತೆ ನಡೆದುಕೊಳ್ಳುತ್ತಿದೆ. ಇದು ಖಂಡನೀಯ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾನೂನು ಕೈಗೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡುವುದು ನಿಮಗೆ ಶೋಭೆಯಲ್ಲ. ಮುನಿರತ್ನ ಅವರ ಮೇಲೆ ಆರೋಪಗಳಿದ್ದರೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಭಯ ಹುಟ್ಟಿಸುವ ಕೆಲಸ ನಡೆದಂತಿದೆ. ನಿಮ್ಮ ಪೂರ್ವಜರಂತೆ ತುರ್ತು ಪರಿಸ್ಥಿತಿ ಹೇರಬೇಡಿ.
– ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

ಪೊಲೀಸರು ಬುದ್ಧಿ ಇಲ್ಲದವರಾಗಿದ್ದಾರೆ. ಸಿ.ಟಿ. ರವಿ ಮೇಲಿನ ಹಲ್ಲೆ ಪ್ರಕರಣದಲ್ಲಿ ದೂರು ಕೊಟ್ಟರೂ 5 ಗಂಟೆ ಕಾಯಿಸಿ ಕೊನೆಗೆ ಸ್ವೀಕೃತಿ ನೀಡಿದ್ದಾರೆ. ಸುರಕ್ಷತೆಗಾಗಿ ಕಬ್ಬಿನ ಗದ್ದೆ, ಕ್ವಾರಿ ಬಳಿ ಕರೆದೊಯ್ದಿದ್ದಾಗಿ ಪೊಲೀಸರು ಹೇಳುತ್ತಾರೆ. ಹಾಗಿದ್ದರೆ ಪೊಲೀಸ್‌ ಠಾಣೆಗಳಿಗಿಂತ ಕಬ್ಬಿನ ಗದ್ದೆ ಸುರಕ್ಷಿತವೇ? ಮುನಿರತ್ನ ಮೇಲೆ ಮೊಟ್ಟೆ ಎಸೆದಿರುವುದು ಖಂಡನೀಯ.
– ಆರ್‌. ಅಶೋಕ್‌, ವಿಧಾನಸಭೆ ವಿಪಕ್ಷ ನಾಯಕ

Advertisement

ಕಾಂಗ್ರೆಸಿಗರ ಅಸಹನೆ, ದುರಾಡಳಿತ ಮಿತಿ ಮೀರುತ್ತಿದೆ. ಕಾನೂನು ಕೈಗೆ ತೆಗೆದುಕೊಳ್ಳ ಬಾ ರ ದು ಎಂಬ ಕನಿಷ್ಠ ಜ್ಞಾನವೂ ಅವರಿಗಿಲ್ಲ. ಈ ಸರಕಾರವು ಸಂಪೂರ್ಣ ಪೊಲೀಸ್‌ ಇಲಾಖೆಯ ನೈತಿಕತೆ ಕುಸಿಯುವಂತೆ ಮಾಡಿದೆ. ಪಕ್ಷಗಳ ಆಧಾರದ ಮೇಲೆ ಪೊಲೀಸ್‌ ವ್ಯವಸ್ಥೆಯನ್ನು ಈ ಸರಕಾರ ವಿಭಜಿಸುತ್ತಿದೆ.
– ಬಸವರಾಜ ಬೊಮ್ಮಾಯಿ, ಸಂಸದ, ಮಾಜಿ ಸಿಎಂ

ಆಸ್ಪತ್ರೆಗೆ ಭೇಟಿ ನೀಡಿದ ವಿಜಯೇಂದ್ರ
ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಮುನಿರತ್ನರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಡಾ| ಸಿ.ಎನ್‌. ಮಂಜುನಾಥ್‌ ಸೇರಿ ಪಕ್ಷದ ಹಲವು ನಾಯಕರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಮುನಿರತ್ನರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next