ಬೆಂಗಳೂರು: ಬಿಜೆಪಿಯವರು ಏನಾದರೂ ಹೋರಾಟ ಮಾಡಿಕೊಳ್ಳಿ, ಚೀರಾಡಿ, ಬಟ್ಟೆ ಹರಿದುಕೊಳ್ಳಲಿ. ಐ ಡೋಂಟ್ ಕೇರ್ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ರವಿವಾರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಇಲ್ಲಸಲ್ಲದ್ದನ್ನು ಮಾತನಾಡಿ ಮರ್ಯಾದೆ ಕಳೆದುಕೊಳ್ಳಬಾರದು. ಅವರು ಮಾಡಿರುವ ಯಾವ ಆರೋಪಗಳನ್ನು ತಾನೆ ಸಾಬೀತು ಮಾಡಿದ್ದಾರೆ ಎಂದು ಮರುಪ್ರಶ್ನೆ ಮಾಡಿದರು.
ಅವರು ಎಷ್ಟೇ ಸತ್ಯಶೋಧನಾ ಸಮಿತಿ ಮಾಡಿ, ಬೀದರ್‌ನಿಂದ ಚಾಮರಾಜನಗರವರೆಗೆ ಏನಾದರೂ ಹೋರಾಟ ಮಾಡಿಕೊಳ್ಳಲಿ. ನಾವು ಎಂದಿಗೂ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. 3ನೇ ಬಾರಿ ಮಂತ್ರಿ ಆಗಿದ್ದೇನೆ. ಒಂದು ರೂಪಾಯಿ ಭ್ರಷ್ಟಾಚಾರವನ್ನೂ ನನ್ನ ಅವಧಿಯಲ್ಲಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಿಮ್ಮ ಸಿದ್ಧಾಂತ, ಆರ್‌ಎಸ್‌ಎಸ್, ಮನುಸ್ಮತಿಯ ಮನೋಭಾವವನ್ನು ವಿರೋಧಿಸುತ್ತೇವೆ ಎಂದು ನಮ್ಮನ್ನು ಗುರಿ ಮಾಡಿಕೊಂಡಿದ್ದೀರಿ. ನೀವು ಎಷ್ಟೇ ಹೆದರಿಸಿದರೂ ನಮ್ಮ ಮನೋಭಾವ ಬದಲಾಗಲ್ಲ. ಐಟಿ, ಇ.ಡಿ., ಸಿಬಿಐ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಯಾರ ಬಳಿಯಾದರೂ ದೂರು ಕೊಡಿ. ರಾಜ್ಯಪಾಲರ ಮೂಲಕ ಕೆಲಸ ಸಾಧಿಸಿಕೊಳ್ಳುತ್ತೀರಾ? ಅದನ್ನೂ ಮಾಡಿ. ಪ್ರಾಮಾಣಿಕವಾಗಿ ಸಾರ್ವಜನಿಕ ವಲಯದಲ್ಲಿದ್ದೇವೆ. ಇರುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ನನಗೆ ನೈತಿಕತೆ ಇರುವುದರಿಂದಲೇ ಮಾಧ್ಯಮಗಳ ಮುಂದೆ ಬಂದಿದ್ದೇನೆ. ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದೇನೆ. ನಾನು ಎಲ್ಲೋ ಹೋಗಿ ಅಡಗಿ ಕುಳಿತಿಲ್ಲ. ತನಿಖೆ ಆಗಲಿ ಎಂದೇ ನಾನೂ ಹೇಳುತ್ತಿದ್ದೇನೆ. ಪ್ರಿಯಾಂಕ್ ಖರ್ಗೆ ಟೆಂಡರ್ ಕೊಡಿಸುವುದಾಗಿ ಆತ್ಮಹತ್ಯೆ ಮಾಡಿಕೊಂಡ ಸಚಿನ್ ಮರಣಪತ್ರದಲ್ಲಿ ಇದೆಯೇ? ಟೆಂಡರ್‌ಗೆ ನೆರವು ಕೊಡಿಸಿದ್ದಾಗಿ ಆರೋಪಿಗಳೂ ಒಪ್ಪಿಕೊಂಡಿದ್ದಾರೆ, ಆತ್ಮಹತ್ಯೆ ಮಾಡಿಕೊಂಡವರೂ ಈ ವ್ಯವಹಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದರಲ್ಲಿ ನನ್ನ ಪಾತ್ರ ಏನಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ರಾಜು ಕಪನೂರು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷನಾಗಿದ್ದ: ಸಚಿವ
ರಾಜು ಕಪನೂರು ಹೆಸರು ಡೆತ್‌ನೋಟ್‌ನಲ್ಲಿದೆ, ಆತ ನನ್ನ ಆಪ್ತ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆತ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷನಾಗಿದ್ದ. ಕಾರ್ಪೋರೇಟರ್ ಕೂಡ ಆಗಿದ್ದ. ಎಫ್ಎಸ್‌ಎಲ್ ವರದಿ ಬರಲಿ, ಸ್ವತಂತ್ರ ತನಿಖೆಯಾಗಲಿ. ಹಾಗೆ ನೋಡಿದರೆ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ನ್ಯಾ| ಕುನ್ಹಾ ವರದಿಯಲ್ಲಿ ಸ್ಪಷ್ಟವಾಗಿದೆ.
ಮುನಿರತ್ನ ವಿರುದ್ಧ ಚಾರ್ಜ್‌ಶೀಟ್ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಇವರದ್ದೆಲ್ಲ ರಾಜೀನಾಮೆ ಕೇಳುವುದು ಬಿಟ್ಟು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಕಲಬುರಗಿಯಲ್ಲಿ ಬಿಜೆಪಿಯ ಯಾವ ನಾಯಕರು ಬೆಟ್ಟಿಂಗ್ ದಂಧೆ, ಮರಳು ಮಾಫಿಯಾ, ಅಕ್ಕಿ ಕಳ್ಳತನ ಮಾಡುತ್ತಿದ್ದಾರೆ ಎಂಬ ಇತಿಹಾಸ ತಿಳಿದು ಬನ್ನಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.