ಇಟಲಿ: ಕೋವಿಡ್ 19 ಅಟ್ಟಹಾಸದ ಪರಿಣಾಮವಾಗಿ ಈ ವರ್ಷ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಿನಿಮೋತ್ಸವ ರದ್ದಾಗಿತ್ತು. ಅಷ್ಟೇ ಅಲ್ಲ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎಂಬಂತೆ ಅಂತಾರಾಷ್ಟ್ರಿಯ ಫಿಲ್ಮ್ ಫೆಸ್ಟಿವಲ್ ಅನ್ನು ಆನ್ ಲೈನ್ ನಲ್ಲೇ ಪ್ರದರ್ಶಿಸಲು ಮುಂದಾಗಿದ್ದವು. ಏತನ್ಮಧ್ಯೆ ವೆನಿಸ್ ಫಿಲ್ಮ್ ಫೆಸ್ಟಿವಲ್ ಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.
ಹೌದು ವಿಶ್ವದ ಅತೀ ಪುರಾತನ ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಒಂದಾದ 77ನೇ ಆವೃತ್ತಿಯ ವೆನಿಸ್ ಫಿಲ್ಮ್ ಫೆಸ್ಟಿವಲ್ ಸೆಪ್ಟೆಂಬರ್ 2ರಿಂದ (2020) ಅಧಿಕೃತವಾಗಿ ಚಾಲನೆಗೊಳ್ಳಲಿದೆ. ಸಾರ್ವಜನಿಕರಿಗೆ ರೆಡ್ ಕಾರ್ಪೆಟ್ ಹಾಸಿ ಬರಮಾಡಿಕೊಳ್ಳಲು ನಿರ್ಬಂಧಿಸಲಾಗಿದೆ. ಹಾಲಿವುಡ್ ಸ್ಟಾರ್ ನಟರು ಗೈರು ಹಾಜರಾಗುತ್ತಿದ್ದಾರೆ. ಸಿನಿಮಾ ವೀಕ್ಷಣೆಗೆ ಆಗಮಿಸುವ ಸಿನಿ ಪ್ರಿಯರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಿದೆ.
ಜಗತ್ತಿನಲ್ಲಿ ಮೂರು ಫಿಲ್ಮ್ ಫೆಸ್ಟಿವಲ್ ಗಳು ಜಗದ್ವಿಖ್ಯಾತಿ ಹೊಂದಿದ್ದು, ಅವುಗಳಲ್ಲಿ ಕಾನ್, ಬರ್ಲಿನ್ ಮತ್ತು ವೆನಿಸ್ ಫಿಲ್ಮ್ ಫೆಸ್ಟಿವಲ್ ಪ್ರಮುಖವಾಗಿವೆ. ಕೋವಿಡ್ ನಿಂದಾಗಿ ಈ ಬಾರಿಯ 70ನೇ ಆವೃತ್ತಿಯ ಬರ್ಲಿನ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಮತ್ತು ಕಾನ್ ಫಿಲ್ಮ್ ಫೆಸ್ಟಿವಲ್ ರದ್ದುಗೊಂಡಿದೆ.
ಫೆಬ್ರುವರಿ ತಿಂಗಳಿನಲ್ಲಿ ವೆನಿಸ್ ಮತ್ತು ಸುತ್ತಮುತ್ತಲಿನ ವೆನೆಟೋ ಪ್ರದೇಶದಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಲಾಗೂನ್ ನಗರದಲ್ಲಿ ಮೊದಲ ಬಾರಿಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿತ್ತು. ನಂತರ ಲೋಂಬಾರ್ಡೈ ಕೋವಿಡ್ 19ನ ಎಪಿಕ್ ಸೆಂಟರ್ ಆಗಿಬಿಟ್ಟಿತ್ತು. ಸ್ಥಳೀಯ ಲಾಕ್ ಡೌನ್ ಹಾಗೂ ವೈರಸ್ ಪರೀಕ್ಷೆಯ ಮೂಲಕ ವೆನೆಟೋ ಮತ್ತು ಯುರೋಪ್ ನಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
“ಫಿಲ್ಮ್ ಫೆಸ್ಟಿವಲ್ ನಡೆಸುವ ಬಗ್ಗೆ ನಿರ್ಧಾರ ಕೈಗೊಂಡ ಮುಖ್ಯ ಉದ್ದೇಶ ವೆನಿಸ್ ನಗರದ ಮತ್ತು ಸಿನಿಮಾ ಇಂಡಸ್ಟ್ರಿಗೆ ಪುನರ್ ಜೀವನ ನೀಡುವುದಾಗಿತ್ತು ಎಂದು ಲಾ ಬೈನ್ನಾಲ್ ಮುಖ್ಯಸ್ಥ ರೋಬರ್ಟ್ ಸಿಕ್ಯುಟ್ಟೋ ತಿಳಿಸಿದ್ದಾರೆ. ಇದರಿಂದಾಗಿ ಭವಿಷ್ಯದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೆಚ್ಚಿನ ಅನುಭವ ನೀಡಲಿದೆ ಎಂದು ತಿಳಿಸಿದ್ದಾರೆ.
ಕೋವಿಡ್ 19 ಕಾಲಘಟ್ಟದಲ್ಲಿ ಇದು ಎಷ್ಟೊಂದು ಮುಖ್ಯವಾದ ಮತ್ತು ಫೆಸ್ಟಿವಲ್ ಅನ್ನು ಹೇಗೆ ಎದುರಿಸಬಹುದು ಎಂಬ ಹೊಸ ಅನುಭವ ನೀಡಲಿದೆ ಎಂದು ವೆನಿಸ್ ಫೆಸ್ಟಿವಲ್ ಕುರಿತು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
2ರಿಂದ 12ರವರೆಗೆ ವೆನಿಸ್ ಫಿಲ್ಮ್ ಫೆಸ್ಟಿವಲ್:
ಸೆಪ್ಟೆಂಬರ್ 2ರಿಂದ 12ರವರೆಗೆ ವೆನಿಸ್ ಫಿಲ್ಮ್ ಫೆಸ್ಟಿವಲ್ ನಡೆಯುವ ಮೂಲಕ ಕೋವಿಡ್ 19 ಭಯದ ನಡುವೆಯೇ ಇಟಲಿಯಲ್ಲಿ ಜಾಗತಿಕವಾಗಿ ಚಿತ್ರೋತ್ಸವ ನಡೆಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಗ್ಲ್ಯಾಮರಸ್ ಫಿಲ್ಮ್ ಫೆಸ್ಟಿವಲ್ ವಿನಾಯ್ತಿ ಇಲ್ಲ. ಯುರೋಪ್ ಹೊರತುಪಡಿಸಿ ಬೇರೆ ದೇಶ, ಪ್ರದೇಶದಿಂದ ಬಂದವರನ್ನು ಪರೀಕ್ಷೆ ನಡೆಸಲಾಗುವುದು. ಸೀಟು ಕಾಯ್ದಿರಿಸುವಿಕೆ ಕೂಡಾ ಸೀಮಿತವಾಗಿರಲಿದೆ. ಸಿನಿಮಾ ವೀಕ್ಷಿಸುವಾಗ ಮತ್ತು ಹೊರಗೆ ತಿರುಗಾಡುವಾಗಲೂ ಮಾಸ್ಕ್ ಕಡ್ಡಾಯ ಎಂದು ತಿಳಿಸಿದೆ.
“ನಾವು ಕೋವಿಡ್ ನಿಗ್ರಹ ಕ್ರಮಕ್ಕೆ ಸ್ಪಷ್ಟವಾಗಿ ಬದ್ಧವಾಗಿದ್ದೇವೆ ಎಂದು ವೆನಿಸ್ ಸಾಂಸ್ಕೃತಿಕ ಮುಖ್ಯಸ್ಥ ಪಾಆಲೋ ಮಾರ್ ತಿಳಿಸಿದ್ದು, ಪ್ರತಿಯೊಬ್ಬ ವ್ಯಕ್ತಿಯೂ ಹೊಣೆಗಾರರಾಗಿದ್ದು, ನಾವೆಲ್ಲರೂ ಸಮಸ್ಯೆಯನ್ನು ಕಡಿಮೆ ಮಾಡಬೇಕಾದ ಜವಾಬ್ದಾರಿ ಇದೆ ಎಮದು ತಿಳಿಸಿದ್ದಾರೆ.