Advertisement

Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…

05:24 PM Jan 02, 2025 | ಶ್ರೀರಾಮ್ ನಾಯಕ್ |

ಕಾಲ ಬದಲಾದಂತೆ ಜನರ ಆಚಾರ ವಿಚಾರಗಳೂ ಬದಲಾದರೂ ಆಹಾರದ ವಿಚಾರ ಬಂದಾಗ ಹೆಚ್ಚಿನ ಜನರು ಹಳೆಯ ಕಾಲದ ಆಹಾರ ಪದ್ದತಿಗಳನ್ನೇ ಇಷ್ಟ ಪಡುತ್ತಾರೆ. ಆದರೆ ಈಗಿನ ಕಾಲಘಟ್ಟದಲ್ಲಿ ಕೆಲ ಮಕ್ಕಳಿಗೆ ಜಂಕ್ ಫುಡ್ ಬಿಟ್ಟರೆ ಮನೆಯಲ್ಲಿ ಮಾಡಿದ ಆಹಾರ ಪದಾರ್ಥಗಳು ಬಾಯಿಗೆ ಹಿಡಿಸುವುದಿಲ್ಲ, ಆರೋಗ್ಯದ ದೃಷ್ಟಿಯಿಂದ ನೋಡಿದರೆ ಜಂಕ್ ಫುಡ್ ಗಳು ಬಾಯಿಗೆ ರುಚಿಯಾದರೂ ಆರೋಗ್ಯಕ್ಕೆ ಅಷ್ಟೇ ಮಾರಕ.

Advertisement

ಹಾಗಾಗಿ ಹಳೆಯ ಕಾಲದ ಆಹಾರ ಪದಾರ್ಥಗಳನ್ನು ವರ್ಷಕ್ಕೊಮ್ಮೆಯಾದರೂ ಮನೆಯಲ್ಲಿ ಮಾಡಿದರೆ ಮಕ್ಕಳ ಆರೋಗ್ಯಕ್ಕೂ ಉತ್ತಮ ಜೊತೆಗೆ ಹಿಂದಿನ ಕಾಲದ ಆಹಾರ ಪದಾರ್ಥಗಳ ಪರಿಚಯವೂ ಮಕ್ಕಳಿಗೆ ಆದಂತಾಗುತ್ತದೆ.

ಹಾಗಾಗಿ ಇಂದು ನಾವು ನಿಮಗೆ ಹಳೆಯ ಕಾಲದ ರೆಸಿಪಿಯಾದ ‘ನುಚ್ಚಿನುಂಡೆ’ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತೇವೆ.

ನುಚ್ಚಿನುಂಡೆ(Nuchinunde)
ಬೇಕಾಗುವ ಸಾಮಗ್ರಿಗಳು
ತೊಗರಿಬೇಳೆ-ಅರ್ಧಕಪ್‌, ಕಡ್ಲೆಬೇಳೆ-ಅರ್ಧ ಕಪ್‌, ತೆಂಗಿನ ತುರಿ-ಅರ್ಧ ಕಪ್‌, ಸಬ್ಬಸಿಗೆ ಸೊಪ್ಪು-ಅರ್ಧ ಕಪ್‌, ಕೊತ್ತಂಬರಿ ಸೊಪ್ಪು-ಸ್ವಲ್ಪ, ಜೀರಿಗೆ-2ಚಮಚ, ಶುಂಠಿ ಪೇಸ್ಟ್‌-1ಚಮಚ, ಹಸಿಮೆಣಸು-2, ಕರಿಬೇವಿನ ಎಲೆ, ಇಂಗು-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ಕಡ್ಲೆಬೇಳೆ ಹಾಗೂ ತೊಗರಿ ಬೇಳೆ ಯನ್ನು ಚೆನ್ನಾಗಿ ತೊಳೆದು ಸುಮಾರು 3 ಗಂಟೆ ಗಳ ಕಾಲ ನೀರಿನಲ್ಲಿ ನೆನೆಸಿರಿ. ನಂತರ ಒಂದು ಮಿಕ್ಸಿಜಾರಿಗೆ ನೆನೆಸಿಟ್ಟ ಬೇಳೆಕಾಳು ಮತ್ತು ಹಸಿಮೆಣಸನ್ನು ಹಾಕಿ ನೀರನ್ನು ಬಳಸದೇ ನುಣ್ಣಗೆ ರುಬ್ಬಿಕೊಳ್ಳಿ. ತದನಂತರ ಒಂದು ಪಾತ್ರೆಗೆ ಹಾಕಿ, ಅದಕ್ಕೆ ತುರಿದಿಟ್ಟ ತೆಂಗಿನಕಾಯಿ, ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪು,ಕೊತ್ತಂಬರಿ ಸೊಪ್ಪು, ಜೀರಿಗೆ, ಶುಂಠಿ ಪೇಸ್ಟ್‌, ಕರಿಬೇವಿನ ಎಲೆ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಆಮೇಲೆ ನಿಮಗೆ ಬೇಕಾಗುವ ರೀತಿಯಲ್ಲಿ ಉಂಡೆಗಳನ್ನು ಮಾಡಿ,ಇಡ್ಲಿ ಪಾತ್ರೆಯಲ್ಲಿಟ್ಟು ಮುಚ್ಚಳವನ್ನು ಮುಚ್ಚಿ ಸುಮಾರು 20 ನಿಮಿಷಗಳ ಕಾಲ ಬೇಯಿಸಿದರೆ ಮೃದುವಾದ ಸ್ವಾದಿಷ್ಟಕರ ನುಚ್ಚಿನುಂಡೆ ಸವಿಯಲು ಸಿದ್ಧ.

Advertisement

ಬಿಸಿ-ಬಿಸಿಯಾಗಿರುವ ನುಚ್ಚಿನುಂಡೆಯನ್ನು ತುಪ್ಪದೊಂದಿಗೆ ತಿಂದರೆ ಇದರ ರುಚಿ ಮರೆಯೋಕೆ ಸಾಧ್ಯವೇ ಇಲ್ಲ ಅಷ್ಟು ರುಚಿ. ಹಾಗೆಯೇ ತೆಂಗಿನಕಾಯಿ ಚಟ್ನಿ ಅಥವಾ ಯಾವುದೇ ಚಟ್ನಿಯೊಂದಿಗೂ ಸಹ ಸವಿಯಬಹುದು.

– ಶ್ರೀರಾಮ್ ಜಿ.ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next