Advertisement

Explainer: Karnatakaದಿಂದ ಕಕ್ಷೆಗೆ-ಬಾಹ್ಯಾಕಾಶದಲ್ಲಿ ಡಾಕಿಂಗ್‌ ಕಸರತ್ತು…ISRO ಸಾಹಸ

10:00 AM Dec 30, 2024 | Team Udayavani |

ಇಸ್ರೋದ ಮಹತ್ವಾಕಾಂಕ್ಷಿ ಸ್ಪೇಡೆಕ್ಸ್ ಯೋಜನೆ ಉಡಾವಣೆಗೆ ಸನ್ನದ್ಧವಾಗಿದ್ದು, ಇದು ಬಾಹ್ಯಾಕಾಶ ವಲಯದಲ್ಲಿ ಹೆಚ್ಚುತ್ತಿರುವ ಕರ್ನಾಟಕದ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ. ಈ ಯೋಜನೆಯಡಿ ಬಾಹ್ಯಾಕಾಶಕ್ಕೆ ತೆರಳಲಿರುವ ಹತ್ತು ಸರ್ಕಾರೇತರ ಪೇಲೋಡ್‌ಗಳ ಪೈಕಿ, ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್, ಬಿಜಿಎಸ್ ಎಸ್‌ಜೆಸಿಐಟಿಗಳ ಪೇಲೋಡ್‌ಗಳು ಹಾಗೂ ಬೆಲಾಟ್ರಿಕ್ಸ್ ಏರೋಸ್ಪೇಸ್ ಸಂಸ್ಥೆಯ ರುದ್ರ ಪೇಲೋಡ್ ಸೇರಿವೆ. ಈ ಪೇಲೋಡ್‌ಗಳು ಸ್ಪೇಡೆಕ್ಸ್ ಯೋಜನೆಯೊಡನೆ ಬಾಹ್ಯಾಕಾಶಕ್ಕೆ ತೆರಳಿ, ಅಲ್ಲಿ ಸ್ವತಂತ್ರ ಪ್ರಯೋಗಗಳನ್ನು ಕೈಗೊಳ್ಳಲಿವೆ.

Advertisement

ಕರ್ನಾಟಕ: ಬಾಹ್ಯಾಕಾಶ ನಾವೀನ್ಯತೆಗಳ ಕೇಂದ್ರ

1. ಆರ್‌ವಿ ಇಂಜಿನಿಯರಿಂಗ್ ಕಾಲೇಜಿನ ಆರ್‌ವಿಸ್ಯಾಟ್-1

ಬೆಂಗಳೂರಿನ ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆರ್‌ವಿಸ್ಯಾಟ್-1 ಅನ್ನು ಅಭಿವೃದ್ಧಿ ಪಡಿಸಿದೆ. ಈ ಪೇಲೋಡ್, ಬಾಹ್ಯಾಕಾಶದಲ್ಲಿ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಅಧ್ಯಯನ ನಡೆಸಲಿದೆ. ಈ ಸಂಶೋಧನೆ ಗಗನಯಾತ್ರಿಗಳ ಆರೋಗ್ಯವನ್ನು ಉತ್ತಮಪಡಿಸುವ ಗುರಿಹೊಂದಿದ್ದು, ಆಧುನಿಕ ಆ್ಯಂಟಿಬಯಾಟಿಕ್‌ಗಳನ್ನು ತಯಾರಿಸಿ, ದೀರ್ಘಾವಧಿಯ ಬಾಹ್ಯಾಕಾಶ ಯಾತ್ರೆಗಳಲ್ಲಿ ಮರುಬಳಕೆಯ ವ್ಯವಸ್ಥೆಗಳನ್ನು ನಿರ್ಮಿಸುವ ಗುರಿ ಹೊಂದಿದೆ.

2. ಬೆಲಾಟ್ರಿಕ್ಸ್ ಏರೋಸ್ಪೇಸ್‌ನ ರುದ್ರ 1.0 ಎಚ್‌ಪಿಜಿಪಿ

Advertisement

ಬೆಂಗಳೂರು ಮೂಲದ ಬೆಲಾಟ್ರಿಕ್ಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ರುದ್ರ 1.0 ಎಂಬ ಸಮರ್ಥ, ಪರಿಸರ ಸ್ನೇಹಿ ಹಸಿರು ಪ್ರೊಪಲ್ಷನ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ. ಈ ಆಧುನಿಕ ಪ್ರೊಪಲ್ಷನ್ ತಂತ್ರಜ್ಞಾನ ಸುಸ್ಥಿರ ಬಾಹ್ಯಾಕಾಶ ಯೋಜನೆಗಳಿಗೆ ಹೊಸ ಮಾನದಂಡ ನಿಗದಿಪಡಿಸಲಿದೆ.

3. ಎಸ್‌ಜೆಸಿಐಟಿಯ ಬಿಜಿಎಸ್ ಅರ್ಪಿತ್

ಚಿಕ್ಕಬಳ್ಳಾಪುರದ ಎಸ್‌ಜೆಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಸ್‌ಜೆಸಿಐಟಿ) ತನ್ನ ಅಸಾಧಾರಣ ಬಿಜಿಎಸ್ ಅರ್ಪಿತ್ ಪೇಲೋಡ್ ಮೂಲಕ ಭಾರತದ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ (ಸ್ಪೇಡೆಕ್ಸ್) ಯೋಜನೆಯಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದೆ. ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಆಶೀರ್ವಾದ ಮತ್ತು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಯವರ ಮಾರ್ಗದರ್ಶನ ಹೊಂದಿರುವ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಈ ಕಾಲೇಜನ್ನು ನಿರ್ವಹಿಸುತ್ತಿದೆ.

ಬಿಜಿಎಸ್ ಅರ್ಪಿತ್ ಪೇಲೋಡ್ ಒಂದು ಅತ್ಯಾಧುನಿಕ ಟ್ರಾನ್ಸ್‌ಮಿಟರ್ ಆಗಿದ್ದು, ಧ್ವನಿ, ಅಕ್ಷರ, ಚಿತ್ರದ ಸಂದೇಶಗಳನ್ನು ಬಾಹ್ಯಾಕಾಶದಿಂದ ಎಫ್ಎಂ ಸಂಕೇತಗಳು ಮತ್ತು ವಿಎಚ್ಎಫ್ ಬ್ಯಾಂಡ್ ಬಳಸಿಕೊಂಡು ಭೂಮಿಗೆ ಕಳುಹಿಸುತ್ತದೆ. ಈ ನಾವೀನ್ಯತೆ ಜಾಗತಿಕ ಅಮೆಚೂರ್ ರೇಡಿಯೋ ಸೇವೆಗೂ ನೆರವಾಗಲಿದ್ದು, ಬಾಹ್ಯಾಕಾಶ ಸಂವಹನದ ಸೀಮೆಯನ್ನು ವಿಸ್ತರಿಸುವ ಎಸ್‌ಜೆಸಿಐಟಿಯ ಬದ್ಧತೆಯನ್ನು ಪ್ರದರ್ಶಿಸಿದೆ.

ಸ್ಪೇಡೆಕ್ಸ್: ಬಾಹ್ಯಾಕಾಶ ಮಹತ್ವಾಕಾಂಕ್ಷೆಯಲ್ಲಿ ಮಹತ್ತರ ಹೆಜ್ಜೆ

ಡಿಸೆಂಬರ್ 30, ಸೋಮವಾರದಂದು ಪಿಎಸ್ಎಲ್‌ವಿ-ಸಿ60 ರಾಕೆಟ್ ಮೂಲಕ ಉಡಾವಣೆಗೆ ಸನ್ನದ್ಧವಾಗಿರುವ ಸ್ಪೇಡೆಕ್ಸ್, ಬಾಹ್ಯಾಕಾಶದಲ್ಲಿ ಎರಡು ಪ್ರತ್ಯೇಕ ಬಾಹ್ಯಾಕಾಶ ನೌಕೆಗಳ ಡಾಕಿಂಗ್ ನಡೆಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಭವಿಷ್ಯದ ಬಾಹ್ಯಾಕಾಶ ಯೋಜನೆಗಳಾದ ಚಂದ್ರಯಾನ-4, ಹಾಗೂ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣವಾದ ಭಾರತೀಯ ಅಂತರಿಕ್ಷ ಸ್ಟೇಷನ್ ನಂತಹ ಯೋಜನೆಗಳಿಗೆ ಈ ಸಾಮರ್ಥ್ಯ ಅತ್ಯಂತ ಮಹತ್ವದ್ದಾಗಿದೆ.

ಈ ಯೋಜನೆ ಎರಡು ಉಪಗ್ರಹಗಳಾದ ಎಸ್‌ಡಿಎಕ್ಸ್01 (ಚೇಸರ್) ಹಾಗೂ ಎಸ್‌ಡಿಎಕ್ಸ್02 (ಟಾರ್ಗೆಟ್) ಗಳನ್ನು ಒಳಗೊಂಡಿದೆ. ಈ ಉಪಗ್ರಹಗಳನ್ನು 470 ಕಿಲೋಮೀಟರ್ ಎತ್ತರದಲ್ಲಿರುವ ಭೂಮಿಯ ಕೆಳಕಕ್ಷೆಗೆ (ಲೋ ಅರ್ತ್ ಆರ್ಬಿಟ್ – ಎಲ್ಇಒ) ಅಳವಡಿಸಲಾಗುತ್ತದೆ. ಇವೆರಡು ಉಪಗ್ರಹಗಳು ಡಾಕಿಂಗ್‌ಗಾಗಿ ಅತ್ಯಂತ ನಿಖರವಾದ ಚಲನೆಗಳನ್ನು ಪ್ರದರ್ಶಿಸಲಿವೆ. ಈ ತಂತ್ರಜ್ಞಾನ ಭವಿಷ್ಯದ ಅಂತರಗ್ರಹ ಯೋಜನೆಗಳು ಮತ್ತು ದೀರ್ಘಾವಧಿಯ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳಿಗೆ ಅತ್ಯಂತ ಮುಖ್ಯವಾಗಿದೆ.

ಡಾಕಿಂಗ್ ವಿಜ್ಞಾನ: ನಿಖರತೆ ಮತ್ತು ನಾವೀನ್ಯತೆ

ಡಾಕಿಂಗ್ ಪ್ರಕ್ರಿಯೆ ಅತ್ಯಂತ ಕರಾರುವಾಕ್ಕಾದ ಕಕ್ಷೀಯ ಹೊಂದಾಣಿಕೆ ಮತ್ತು ಚಲನೆಗಳನ್ನು ಒಳಗೊಂಡಿದೆ. ಜೊತೆಯಾಗಿ ಉಡಾವಣೆಗೊಂಡ ಬಳಿಕ, ಈ ಉಪಗ್ರಹಗಳು ಸರಿಯಾಗಿ ಲೆಕ್ಕಾಚಾರ ಹಾಕಿರುವ ವೇಗದ ವ್ಯತ್ಯಾಸವನ್ನು ಅನುಸರಿಸಿ, ಒಂದು ದಿನದ ಬಳಿಕ ಪರಸ್ಪರರ ನಡುವೆ 10-20 ಕಿಲೋಮೀಟರ್‌ಗಳ ಅಂತರವನ್ನು ಸೃಷ್ಟಿಸಲಿವೆ. ಟಾರ್ಗೆಟ್ ಉಪಗ್ರಹದ ಪ್ರೊಪಲ್ಷನ್ ವ್ಯವಸ್ಥೆ ‘ಫಾರ್ ರೆಂಡೆಜ್ವಸ್’ ಹಂತವನ್ನು ನಡೆಸಿ, ಈ ಅಂತರವನ್ನು ಸ್ಥಿರವಾಗಿರಿಸಲಿದೆ.

ಚೇಸರ್ ಉಪಗ್ರಹ ಬಳಿಕ ಹಂತಹಂತವಾಗಿ ಟಾರ್ಗೆಟ್ ಉಪಗ್ರಹದ ಬಳಿಗೆ ಸಾಗುತ್ತಾ, ಅವೆರಡರ ನಡುವಿನ ಅಂತರವನ್ನು 5 ಕಿಲೋಮೀಟರ್‌ನಿಂದ ಅಂತಿಮವಾಗಿ 3 ಮೀಟರ್‌ಗಳಿಗೆ ಇಳಿಸಲಿದೆ. ಪ್ರತಿ ಗಂಟೆಗೆ 28,000 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿರುವ ಹೊರತಾಗಿಯೂ, ಆಧುನಿಕ ಥ್ರಸ್ಟರ್‌ಗಳು ಮತ್ತು ಸೆನ್ಸರ್‌ಗಳು ಅವುಗಳ ನಡುವಿನ ಸಾಪೇಕ್ಷ ವೇಗವನ್ನು ಪ್ರತಿ ಸೆಕೆಂಡಿಗೆ 10 ಮಿಲಿಮೀಟರ್‌ಗಳಿಗೆ ಇಳಿಸಿ, ಡಿಕ್ಕಿಯಾಗದಂತೆ ಡಾಕಿಂಗ್ ನಡೆಸಲು ಸಾಧ್ಯವಾಗಿಸುತ್ತದೆ.

ಒಂದು ಬಾರಿ ಡಾಕಿಂಗ್ ಪ್ರಕ್ರಿಯೆ ನಡೆದ ಬಳಿಕ, ಈ ಉಪಗ್ರಹಗಳು ಪರಸ್ಪರ ವಿದ್ಯುತ್ ಹಂಚಿಕೆ ಮತ್ತು ಏಕೀಕೃತ ನಿಯಂತ್ರಣದ ಪರೀಕ್ಷೆಗಳನ್ನು ನಡೆಸಲಿವೆ. ಆ ಬಳಿಕ ಅವೆರಡು ಉಪಗ್ರಹಗಳು ಪ್ರತ್ಯೇಕಗೊಂಡು, ಸ್ವತಂತ್ರವಾಗಿ ಸಂಶೋಧನಾ ಗುರಿಗಳನ್ನು ಪೂರೈಸಲಿವೆ. ಈ ಉಪಗ್ರಹಗಳಲ್ಲಿ ಅಳವಡಿಸಿರುವ ಅತ್ಯುನ್ನತ ಗುಣಮಟ್ಟದ ಕ್ಯಾಮರಾ, ಮಲ್ಟಿ ಸ್ಪೆಕ್ಟ್ರಲ್ ಇಮೇಜಿಂಗ್ ಉಪಕರಣ, ಮತ್ತು ವಿಕಿರಣ ವೀಕ್ಷಕದಂತಹ ಉಪಕರಣಗಳು ಭೂಮಿಯ ನೈಸರ್ಗಿಕ ಸಂಪನ್ಮೂಲಗಳು, ಅರಣ್ಯ, ಬಾಹ್ಯಾಕಾಶ ವಿಕಿರಣಗಳ ಕುರಿತ ಅಮೂಲ್ಯ ಮಾಹಿತಿಗಳನ್ನು ಕಲೆಹಾಕಲಿವೆ.

ಡಾಕಿಂಗ್ ಪ್ರಕ್ರಿಯೆಯನ್ನೂ ಮೀರಿದ ಸಾಧನೆ: ಪಿಒಇಎಂ-4 ಪೇಲೋಡ್‌ಗಳು

ಪಿಎಸ್ಎಲ್‌ವಿ-ಸಿ60 ಯೋಜನೆಯ ಭಾಗವಾಗಿರುವ ಪಿಎಸ್ಎಲ್‌ವಿ ಆರ್ಬಿಟಲ್ ಎಕ್ಸ್‌ಪರಿಮೆಂಟಲ್ ಮಾಡ್ಯುಲ್ – 4 (ಪಿಒಇಎಂ-4) 24 ಸಣ್ಣ ಪೇಲೋಡ್‌ಗಳನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ. ಪಿಒಇಎಂ-4 ಒಂದು ವೇದಿಕೆಯ ರೀತಿಯಾಗಿದ್ದು, ಮೂರು ತಿಂಗಳ ಕಾಲ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಪ್ರಯೋಗಗಳನ್ನು ಕೈಗೊಳ್ಳಲಿದೆ.

ಈ 24 ಪೇಲೋಡ್‌ಗಳ ಪೈಕಿ, 14 ಪೇಲೋಡ್‌ಗಳನ್ನು ಇಸ್ರೋದ ತಂಡಗಳು ಅಭಿವೃದ್ಧಿ ಪಡಿಸಿದ್ದರೆ, ಇನ್ನುಳಿದ ಹತ್ತು ಪೇಲೋಡ್‌ಗಳನ್ನು ವಿಶ್ವವಿದ್ಯಾಲಯಗಳು ಮತ್ತು ಸ್ಟಾರ್ಟಪ್‌ಗಳು ನಿರ್ಮಿಸಿವೆ. ಆ ಮೂಲಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತ ಅನುಸರಿಸುವ ಸಹಯೋಗದ ವಿಧಾನಕ್ಕೆ ಸಾಕ್ಷಿಯಾಗಿವೆ. ಈ ಪೇಲೋಡ್‌ಗಳು ವೈಜ್ಞಾನಿಕ ಪ್ರಯೋಗಗಳು, ತಾಂತ್ರಿಕ ಪ್ರದರ್ಶನಗಳು ಮತ್ತು ಆಧುನಿಕ ಬಳಕೆಗಳನ್ನು ಒಳಗೊಂಡಿವೆ. ಆ ಮೂಲಕ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನಾಯಕನೆನ್ನುವ ಭಾರತದ ಹೆಗ್ಗಳಿಕೆಯನ್ನು ಇನ್ನಷ್ಟು ದೃಢಪಡಿಸಲಿವೆ.

ಆರ್‌ವಿ ಇಂಜಿನಿಯರಿಂಗ್ ಕಾಲೇಜಿನ ಆರ್‌ವಿಸ್ಯಾಟ್-1 ಪೇಲೋಡ್, ಮತ್ತು ಬೆಲಾಟ್ರಿಕ್ಸ್ ಏರೋಸ್ಪೇಸ್ ಸಂಸ್ಥೆಯ ರುದ್ರ 1.0ಗಳ ಜೊತೆಗೆ, ಎಸ್‌‌ಜೆಸಿಐಟಿಯ ಬಿಜಿಎಸ್ ಅರ್ಪಿತ್ ಸಹ ಈ 10 ಪೇಲೋಡ್‌ಗಳ ಭಾಗವಾಗಿವೆ. ಇವುಗಳು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತೀಯ ವಿದ್ಯಾರ್ಥಿ ಮತ್ತು ಶಿಕ್ಷಕ ಸಮುದಾಯದ ಆಸಕ್ತಿಯನ್ನು ಹೆಚ್ಚಿಸಲು ನೆರವಾಗಲಿವೆ.

ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಜಾಗತಿಕ ನಾಯಕತ್ವ

ಸ್ಪೇಡೆಕ್ಸ್ ಯೋಜನೆಯ ಮೂಲಕ, ಬಾಹ್ಯಾಕಾಶದಲ್ಲಿ ಡಾಕಿಂಗ್ ನಡೆಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವ ರಷ್ಯಾ, ಅಮೆರಿಕಾ ಮತ್ತು ಚೀನಾಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಲಿದೆ. ಈ ದೇಶಗಳು ತಮ್ಮ ತಂತ್ರಜ್ಞಾನ ವಿಧಾನವನ್ನು ರಹಸ್ಯವಾಗಿ ಕಾಯ್ದುಕೊಂಡರೆ, ಭಾರತದ ಸಹಯೋಗದ ವಿಧಾನ ನಾವೀನ್ಯತೆ ಮತ್ತು ಜ್ಞಾನ ಪಸರಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ.

ಸ್ಪೇಡೆಕ್ಸ್ ಯೋಜನೆ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೆಚ್ಚುತ್ತಿರುವ ಭಾರತದ ಪ್ರಾವೀಣ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಮಹತ್ವದ ಯೋಜನೆಗೆ ಕರ್ನಾಟಕದ ಸಂಸ್ಥೆಗಳಾದ ಎಸ್‌ಜೆಸಿಐಟಿ, ಆರ್‌ವಿ ಇಂಜಿನಿಯರಿಂಗ್ ಕಾಲೇಜ್, ಹಾಗೂ ಬೆಲಾಟ್ರಿಕ್ಸ್ ಏರೋಸ್ಪೇಸ್‌ಗಳು ಕೊಡುಗೆ ನೀಡಿರುವುದು ಬಾಹ್ಯಾಕಾಶ ತಂತ್ರಜ್ಞಾನದ ಸೀಮೆಗಳನ್ನು ವಿಸ್ತರಿಸುವಲ್ಲಿ ರಾಜ್ಯದ ಮಹತ್ವದ ಪಾತ್ರವನ್ನು ಸ್ಪಷ್ಟಪಡಿಸಿವೆ.

ಕಕ್ಷೀಯ ಹೊಂದಾಣಿಕೆ ಮತ್ತು ಡಾಕಿಂಗ್ ನಡೆಸುವ ತಂತ್ರಜ್ಞಾನವನ್ನು ನಡೆಸುವ ಮೂಲಕ, ಭಾರತ ತನ್ನ ಬಾಹ್ಯಾಕಾಶ ಸಾಮರ್ಥ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ, ಭಾರತೀಯ ಅಂತರಿಕ್ಷ ಸ್ಟೇಷನ್, ಮತ್ತು ಅಂತರಗ್ರಹ ಅನ್ವೇಷಣಾ ಯೋಜನೆಗಳಂತಹ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಹಾದಿ ಮಾಡಿಕೊಡಲಿದೆ. ಈ ಯೋಜನೆಯ ಉಡಾವಣೆಯ‌ ಸಮಯ ಹತ್ತಿರಾದಂತೆ, ಬಾಹ್ಯಾಕಾಶ ಯಾನದಲ್ಲಿ ಭಾರತದ ನೂತನ ಅನ್ವೇಷಣೆ, ಸಹಯೋಗಗಳಿಗೆ ಸ್ಪೇಡೆಕ್ಸ್ ಸಾಕ್ಷಿಯಾಗಿದೆ.

*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Advertisement

Udayavani is now on Telegram. Click here to join our channel and stay updated with the latest news.

Next