ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ (92ವರ್ಷ) ಅವರು ಗುರುವಾರ (ಡಿ.26) ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. 1990ರ ದಶಕದಲ್ಲಿ ಭಾರತದ ಆರ್ಥಿಕ ಉದಾರೀಕರಣದ ನಿರ್ಮಾತೃರಾಗಿದ್ದು, 2004ರಿಂದ 2014ರವರೆಗೆ ಸತತ ಎರಡು ಬಾರಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಆದರೆ ರಾಜಕೀಯ ಮತ್ತು ಆರ್ಥಿಕ ಗುರಿ ಸಾಧನೆಯ ಹೊರತಾಗಿಯೂ ಡಾ.ಸಿಂಗ್ ಅವರು ಸರಳ, ಸಜ್ಜನಿಕೆಗೆ ಹೆಸರಾಗಿದ್ದರು…ಅಷ್ಟೇ ಅಲ್ಲ ಅವರ ಆಹಾರ ಪದ್ಧತಿಯೂ ಸರಳವಾಗಿತ್ತು….
ಒಮ್ಮೆ ಎನ್ ಡಿಟಿವಿ ಜತೆ ತಮ್ಮ ಆಹಾರ ಕ್ರಮದ ಕುರಿತ ದೃಷ್ಟಿಕೋನವನ್ನು ಡಾ.ಸಿಂಗ್ ಹಂಚಿಕೊಂಡಿದ್ದು ಹೀಗೆ…ನಾನು ಮಾಂಸಹಾರಿಯೋ ಅಥವಾ ಸಸ್ಯಹಾರಿಯೋ ಎಂಬ ಬಗ್ಗೆ ನೈತಿಕ ಸಂಹಿತೆಯನ್ನು ಹೇರಿಕೊಂಡವನಲ್ಲ. ನಾವು ತುಂಬಾ ಚತುರ ಆಯ್ಕೆಯನ್ನು ಮಾಡಿಕೊಳ್ಳಬೇಕೆಂದು ಆಲೋಚಿಸುತ್ತಿದ್ದೆ. ಯಾಕೆಂದರೆ ಮಾಂಸಹಾರಕ್ಕಿಂತ ಸಸ್ಯಹಾರ ಸೇವನೆ ತುಂಬಾ ಉತ್ತಮವಾದದ್ದು ಎಂಬುದಾಗಿ ವೈದ್ಯಕೀಯ ವಿಜ್ಞಾನವೂ ಕೂಡಾ ತಾರ್ಕಿಕ ನಿಲುವಿಗೆ ಬಂದಿದೆ” ಎಂದು ತಿಳಿಸಿದ್ದರು.
ಮೊಸರನ್ನ, ಹಪ್ಪಳ, ಉಪ್ಪಿನಕಾಯಿ ಹಾಗೂ ದಾಳಿಂಬೆ…ಇದು ಡಾ.ಸಿಂಗ್ ಅವರು ಹೆಚ್ಚು ಇಷ್ಟಪಡುತ್ತಿದ್ದ ಉತ್ತರ ಭಾರತ ಶೈಲಿಯ ಊಟದ ಮೆನು! ಸಿಂಗ್ ಅವರ ಅಚ್ಚುಮೆಚ್ಚಿನ ಖಾದ್ಯವೆಂದರೆ ಕಧಿ ಚಾವಲ್ (kadhi Chaval). ಇದನ್ನು ಮೊಸರು ಕಸರಿ, ಅನ್ನ ಹಾಗೂ ಕಡಲೆ ಹಿಟ್ಟು ಸೇರಿದಂತೆ ವಿವಿಧ ಮಸಾಲೆ ಬೆರೆಸಿ ತಯಾರಿಸಲಾಗುತ್ತದೆ. ಇದು ಉತ್ತರ ಭಾರತ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಜನಪ್ರಿಯವಾಗಿದೆ.
ಸಸ್ಯಹಾರಿ ಆಗಿದ್ದರೂ ಕೂಡಾ ಒಮ್ಮೆ:
ಡಾ.ಮನಮೋಹನ್ ಸಿಂಗ್ ಅವರು ಕಟ್ಟುನಿಟ್ಟಿನ ಸಸ್ಯಹಾರಿಯಾಗಿದ್ದರೂ ಕೂಡಾ ಒಮ್ಮೆ ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಿದ್ದ ವೇಳೆ ತಮ್ಮ ಸಸ್ಯಹಾರ ಸೇವನೆಗೆ ಬ್ರೇಕ್ ನೀಡಿದ್ದರು. ಹೌದು ಅಂದು ಡಾ.ಸಿಂಗ್ ಅವರು ಬೆಂಗಾಲಿಗಳ ಅಚ್ಚುಮೆಚ್ಚಿನ ಹಿಲ್ಸಾ ಮೀನಿನ ಖಾದ್ಯ ಸೇವಿಸುವ ಆಸೆ ವ್ಯಕ್ತಪಡಿಸಿದ್ದರಂತೆ!
“ ಇಂದು ನಾನು ನನ್ನ ವೆಜ್ ತಿನ್ನುವ ಪ್ರತಿಜ್ಞೆಯನ್ನು ಮುರಿಯಲು ಬಯಸಿದ್ದೇನೆ. ಯಾಕೆಂದರೆ ಇಲ್ಲಿ ತುಂಬಾ ರುಚಿಕಟ್ಟಾದ ಹಿಲ್ಸಾ ಮೀನಿನ ಖಾದ್ಯದ ಬಗ್ಗೆ ಕೇಳಲ್ಪಟ್ಟಿದ್ದೇನೆ. ಹಾಗಾಗಿ ಡಾ.ಸಿಂಗ್ ಅವರು ಸಸ್ಯಹಾರ ಖಾದ್ಯಕ್ಕೆ ವಿನಾಯ್ತಿ ಕೊಟ್ಟು, ಹಿಲ್ಸಾ ಮೀನಿನ ಖಾದ್ಯ ಸವಿದಿದ್ದರಂತೆ”!
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವಾದ್ಯಂತ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ. ಡಾ.ಸಿಂಗ್ ಅವರು ಭಾರತದ ಪ್ರತಿಷ್ಠಿತ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ಪತ್ನಿ ಗುರುಸರನ್ ಕೌರ್, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಕುಟುಂಬ ವರ್ಗದವರನ್ನು ಅಗಲಿದ್ದಾರೆ.