Advertisement

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

07:19 PM Dec 27, 2024 | Team Udayavani |

“… 1984 ರಲ್ಲಿ ನಡೆದಿರುವುದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ರಾಷ್ಟ್ರೀಯತೆಯ ಪರಿಕಲ್ಪನೆಯ ನಿರಾಕರಣೆಯಾಗಿದೆ” ಎಂದು ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು 2005 ಆಗಸ್ಟ್ 11 ರಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿ ಸಿಖ್ ವಿರೋಧಿ ದಂಗೆಯ ಕುರಿತಾಗಿ ಕ್ಷಮೆಯಾಚಿಸಿದ್ದರು.

Advertisement

1984 ರಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಾಯಕರಿಂದ ಪ್ರಚೋದಿಸಲ್ಪಟ್ಟು ಸಂಭವಿಸಿದ್ದ ಸಿಖ್-ವಿರೋಧಿ ದಂಗೆಗಳಿಗೆ ಕ್ಷಮೆಯಾಚಿಸುವುದಕ್ಕಾಗಿ ಸಿಖ್ ಸಮುದಾಯವು ದಶಕಗಳ ಕಾಲ ಕಾದಿತ್ತು. ಆದರೂ, ಗಲಭೆಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅಥವಾ ಗಾಂಧಿ ಕುಟುಂಬ ಅಲ್ಪಸಂಖ್ಯಾಕ ಸಮುದಾಯದ ಬಳಿ ವಿಷಾದ ವ್ಯಕ್ತಪಡಿಸಿರಲಿಲ್ಲ. ಕಾಂಗ್ರೆಸ್ ಮೂಲಕವೇ ಭಾರತದ ಮೊದಲ ಸಿಖ್ ಪ್ರಧಾನಿಯಾದ ಮನಮೋಹನ್ ಸಿಂಗ್ ಅವರು ಕ್ಷಮೆಯಾಚಿಸಿ ಗಮನ ಸೆಳೆದು ಹೊಸ ಬದಲಾವಣೆಗೆ ದಾರಿ ಮಾಡಿಕೊಟ್ಟಿದ್ದರು.

ಸಿಖ್ ವಿರೋಧಿ ಎಂದು ಆಕ್ರೋಶಕ್ಕೆ ಗುರಿಯಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಮನಮೋಹನ್ ಸಿಂಗ್ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಿಸಿದ್ದು ಹೊಸ ಬದಲಾವಣೆಯ ಭಾವನೆ ತರುವಲ್ಲಿ ಯಶಸ್ವಿಯಾಗಿತ್ತು.

ಡಾ.ಸಿಂಗ್ ಕ್ಷಮೆಯಾಚಿಸಿದ ಮರುದಿನವೇ, ನವದೆಹಲಿಯಲ್ಲಿನ ಅಮೆರಿಕನ್ ರಾಯಭಾರ ಕಚೇರಿಯ ಡೆಪ್ಯುಟಿ ಚೀಫ್ ಆಫ್ ಮಿಷನ್ ರಾಬರ್ಟ್ ಓ’ಬ್ಲೇಕ್ ಅವರು ಮನಮೋಹನ್ ಸಿಂಗ್ ಅವರು “20 ವರ್ಷಗಳಲ್ಲಿ ಯಾವುದೇ ಭಾರತೀಯ ನಾಯಕ ಮಾಡಲು ಸಿದ್ಧರಿಲ್ಲದ ಕೆಲಸ ಮಾಡಿದ್ದಾರೆ ” ಎಂದು ಹೇಳಿಕೆ ನೀಡಿದ್ದರು.

ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರನ್ನು ಒಳಗೊಂಡ ಸಿಖ್ಖರ ವಿರುದ್ಧದ ಹಿಂಸಾಚಾರ ಪ್ರಕಾರಣಕ್ಕೆ ಸಂಬಂಧಿಸಿ ನಾನಾವತಿ ಆಯೋಗದ ವರದಿಯ ಬೆನ್ನಲ್ಲೇ ಡಾ.ಸಿಂಗ್ ಕ್ಷಮೆಯಾಚಿಸಿದ್ದರು.

Advertisement

ವರದಿಯ ಉತ್ತರದಾಯಿತ್ವ ಮತ್ತು ನ್ಯಾಯಕ್ಕಾಗಿ ಬೇಡಿಕೆಗಳನ್ನು ವಿಶೇಷವಾಗಿ ಬಿಜೆಪಿ ಮತ್ತು ಇತರ ವಿರೋಧ ಪಕ್ಷಗಳು ಪುನರುಜ್ಜೀವನಗೊಳಿಸಿದ್ದವು.

ಇಂದಿರಾ ಗಾಂಧಿಯವರು ಸಿಖ್ ಅಂಗರಕ್ಷಕರಿಂದ ಹತ್ಯೆಯಾದ ನಂತರ ಭಾರತದಲ್ಲಿ ಸಿಖ್ಖರ ವಿರುದ್ಧದ ಸರಣಿ ದಾಳಿಗಳು ನಡೆದಿದ್ದವು. 1984 ರ ಸಿಖ್ ಹತ್ಯಾಕಾಂಡ ಎಂದೂ ಕರೆಯಲಾದ ಕಹಿ ಘಟನೆಗಳಲ್ಲಿ ದೆಹಲಿಯಲ್ಲಿ ಸುಮಾರು 2,800 ಮತ್ತು ದೇಶಾದ್ಯಂತ 3,350 ಸಿಖ್ಖರ ಹತ್ಯೆಯಾಗಿತ್ತು ಎಂದು ಸರಕಾರದ ಅಂದಾಜುಗಳು ಸೂಚಿಸಿವೆ, ಆದರೆ ಇತರ ಮೂಲಗಳು 8,000 ದಿಂದ 17,000 ಡಾ ಮೇಲೆ ಸಾವಿನ ಸಂಖ್ಯೆಯನ್ನು ಸೂಚಿಸಿವೆ.

ದೆಹಲಿಯಲ್ಲಷ್ಟೇ ಅಲ್ಲ, ಹರಿಯಾಣ, ಯುಪಿ, ಬಿಹಾರ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಿಗೆ ಗಲಭೆ ಹಬ್ಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next