ಅಮೆರಿಕದ ನ್ಯೂ ಓರ್ಲೀಯನ್ಸ್ ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜನರ ಮೇಲೆ ಟ್ರಕ್ ಹರಿಸಿ, ಬಂದೂಕಿನಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ 15ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 35ಕ್ಕೂ ಅಧಿಕ ಜನರು ಗಾಯಗೊಂಡಿದ್ದ ಘಟನೆ ಅಮೆರಿಕದ ಜನರಲ್ಲಿ ಭೀತಿ ಹುಟ್ಟಿಸಿದೆ. ಇದೊಂದು ಭಯೋ*ತ್ಪಾದಕ ಕೃತ್ಯ ಎಂದು ಶಂಕಿಸಲಾಗಿದೆ. ಹಾಗಾದರೆ ಈ ಕೃತ್ಯ ಎಸಗಿದ ವ್ಯಕ್ತಿ ಯಾರು? ಆತನ ಹಿನ್ನೆಲೆ ಏನು ಎಂಬ ವಿವರಣೆ ಇಲ್ಲಿದೆ…
ಅಮೆರಿಕದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ವ್ಯಕ್ತಿಯಿಂದ ದಾಳಿ!
ಹೌದು ಅಮೆರಿಕದ ನ್ಯೂ ಓರ್ಲೀಯನ್ಸ್ ನಲ್ಲಿ ಟ್ರಕ್ ಹರಿಸಿ, ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಅಮೆರಿಕದ ನಿವಾಸಿ ಶಂಶುದ್ದೀನ್ ಜಬ್ಬಾರ್ (42) ಎಂಬುದಾಗಿ ಎಫ್ ಬಿಐ ಗುರುತು ಪತ್ತೆ ಹಚ್ಚಿದೆ.
ಪೆಂಟಾಗಾನ್ ನೀಡಿರುವ ಮಾಹಿತಿ ಪ್ರಕಾರ, ಜಬ್ಬಾರ್ 2007ರಿಂದ 2015ರವರೆಗೆ ಅಮೆರಿಕ ಸೇನೆಯಲ್ಲಿ ಮಾನವ ಸಂಪನ್ಮೂಲ ತಜ್ಞನಾಗಿ ಕರ್ತವ್ಯ ನಿರ್ವಹಿಸಿದ್ದು, ನಂತರ 2020ರವರೆಗೆ ಮೀಸಲು ಸೇನೆಯಲ್ಲಿ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿದೆ. 2009ರ ಫೆಬ್ರವರಿಯಿಂದ 2010ರ ಜನವರಿವರೆಗೆ ಜಬ್ಬಾರ್ ಅಫ್ಘಾನಿಸ್ತಾನದಲ್ಲಿ ಕರ್ತವ್ಯ ನಿರ್ವಹಿಸಿದ್ದು, ತನ್ನ ಸೇವೆಯ ಕೊನೆಯ ಅವಧಿಯಲ್ಲಿ ಸ್ಟಾಫ್ ಸಾರ್ಜೆಂಟ್ ಆಗಿ ಗೌರವಯುತವಾಗಿ ನಿವೃತ್ತಿಯಾಗಿದ್ದ ಎಂದು ಎಫ್ ಬಿಐ ತಿಳಿಸಿದೆ.
ಜಬ್ಬಾರ್ ಮೇಲಿನ ಎರಡು ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವುದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 2003ರಲ್ಲಿ ಕಳ್ಳತನದ ಆರೋಪ ಹಾಗೂ 2005ರಲ್ಲಿ ಅಕ್ರಮ ಚಾಲನಾ ಪರವಾನಿಗೆ ಹೊಂದಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಶಂಶುದ್ದೀನ್ ಜಬ್ಬಾರ್ ಎರಡು ವಿವಾಹವಾಗಿದ್ದ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ವಿವರಿಸಿದ್ದು, 2022ರಲ್ಲಿ 2ನೇ ವಿವಾಹ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ಪತ್ನಿ ವಕೀಲರಿಗೆ ಕಳುಹಿಸಿದ್ದ ಇ ಮೇಲ್ ನಲ್ಲಿ ಜಬ್ಬಾರ್ ತನ್ನ ಆರ್ಥಿಕ ಸಮಸ್ಯೆ ಬಗ್ಗೆ ವಿವರವನ್ನು ನೀಡಿರುವುದಾಗಿ ವರದಿ ಬಹಿರಂಗಪಡಿಸಿದೆ.
“ ನನಗೆ ಮನೆಯ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ನನ್ನ ರಿಯಲ್ ಎಸ್ಟೇಟ್ ಕಂಪನಿ 28,000 ಡಾಲರ್ ನಷ್ಟು ನಷ್ಟ ಕಂಡಿದೆ. ಇದರಿಂದಾಗಿ ಕ್ರೆಡಿಟ್ ಕಾರ್ಡ್ ಮೂಲಕ ಸಾವಿರಾರು ರೂಪಾಯಿ ಸಾಲ ಪಡೆದಿದ್ದೇನೆ ಎಂದು” ಜಬ್ಬಾರ್ ಇ-ಮೇಲ್ ನಲ್ಲಿ ವಿವರಿಸಿದ್ದ.
ಇಸ್ಲಾಂಗೆ ಮತಾಂತರಗೊಂಡಿದ್ದ…
ನನ್ನ ಅಣ್ಣ ಚಿಕ್ಕ ಪ್ರಾಯದಲ್ಲೇ ಕ್ರಿಶ್ಚಿಯನ್ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದ ಎಂದು ಟೆಕ್ಸಾಸ್ ನಲ್ಲಿರುವ ಸಹೋದರ ಅಬ್ದುರ್ ಜಬ್ಬಾರ್ ದ ನ್ಯೂಯಾರ್ಕ್ ಟೈಮ್ಸ್ ಜತೆ ಮಾತನಾಡುತ್ತ ತಿಳಿಸಿದ್ದ. ಆದರೆ ಅಣ್ಣ ಇಸ್ಲಾಂ ಅನ್ನು ಪ್ರತಿನಿಧಿಸುತ್ತಿರಲಿಲ್ಲ. ಇದೊಂದು ಆಕ್ರೋಶದ ಕೃತ್ಯವೇ ವಿನಃ, ಧಾರ್ಮಿಕವಾದದ್ದಲ್ಲ ಎಂದು ಅಬ್ದುರ್ ಸಮಜಾಯಿಷಿ ನೀಡಿದ್ದಾನೆ.
ಐಸಿಸ್ ನಿಂದ ಪ್ರಭಾವಿತನಾಗಿದ್ದ!
ಟ್ರಕ್ ಹರಿಸಿ, ಗುಂಡಿನ ದಾಳಿ ನಡೆಸಿದ್ದ ಜಬ್ಬಾರ್ ದಾಳಿಗೂ ಕೆಲ ಗಂಟೆ ಮೊದಲು ಆನ್ ಲೈನ್ ನಲ್ಲಿ ವಿಡಿಯೋಗಳನ್ನು ಹಂಚಿಕೊಂಡಿದ್ದ. ಇದರಲ್ಲಿ ತಾನು ಐಸಿಸ್ ನಿಂದ ಪ್ರಭಾವಿತಗೊಂಡಿರುವ ಸೂಚನೆ ನೀಡಿದ್ದ ಎಂದು ವರದಿ ತಿಳಿಸಿದೆ. ಅಷ್ಟೇ ಅಲ್ಲ ದಾಳಿ ನಡೆಸಿದ ಟ್ರಕ್ ನಲ್ಲಿ ಐಸಿಸ್ ಸಂಘಟನೆಯ ಕಪ್ಪು ಬಾವುಟ ಪತ್ತೆಯಾಗಿದೆ ಎಂದು ಎಫ್ ಬಿಐ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ನ್ಯೂ ಓರ್ಲೇಯನ್ಸ್ ನಲ್ಲಿ ದಾಳಿ ನಡೆಸಿದ್ದ ಜಬ್ಬಾರ್ ನ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಎಫ್ ಬಿಐ ಅಧಿಕಾರಿಗಳು ತಿಳಿಸಿದ್ದಾರೆ.