Advertisement

ನಗರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ

12:51 PM Aug 25, 2018 | |

ಬೆಂಗಳೂರು: ರಾಜಧಾನಿಯಲ್ಲಿ ವರಮಹಾಲಕ್ಷ್ಮಿ ಹಬ್ಬ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸಿಲಿಕಾನ್‌ ಸಿಟಿಯ ಮನೆಗಳಲ್ಲಿ ಮಾವು-ಸೇಬು, ಮಲ್ಲಿಗೆ, ಸುಗಂಧ, ಕೇದಗೆಗಳಿಂದ ಅಲಕೃಂತಗೊಂಡಿದ್ದ ಲಕ್ಷ್ಮೀ ಶುಕ್ರವಾರ ಕಳೆಗಟ್ಟಿದಳು. ನಗರದ ಬಹುತೇಕ ದೇವಾಲಯಗಳಲ್ಲಿ ಧೈರ್ಯ ಲಕ್ಷ್ಮಿ, ಸಂತಾನ ಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿಯ ವಿವಿಧ ಅಲಂಕಾರಗಳಲ್ಲಿ ದೇವಿಯ ಮೂರ್ತಿಗಳು ಜನರಲ್ಲಿ ಭಕ್ತಿ ಮೂಡಿಸಿತ್ತು.

Advertisement

ಹಬ್ಬದ ಪ್ರಯುಕ್ತ  ಮನೆಗಳಲ್ಲಿ ಕಳಸ ಪ್ರತಿಷ್ಠಾಪಿಸಿ ಲಕ್ಷ್ಮಿ ಮುಖವಾಡಗಳನ್ನು ಕಟ್ಟಿ , ತ್ರಾಮದ ಬಿಂದಿಗೆ ಇರಿಸಿ ಸೀರೆ ಉಡಿಸಿಲಾಯಿತು. ಕೆಲವು ಮನೆಗಳಲ್ಲಿ ಬೆಳ್ಳಿಯ ಲಕ್ಷ್ಮೀ ಮುಖವಾಡ ಕೊಬ್ಬರಿ ಅಥವಾ ತೆಂಗಿನಕಾಯಿಯಲ್ಲಿ ಅಥವಾ ಅರಿಶಿಣದಲ್ಲಿ ಮಾಡಿದ ಮುಖವಾಡಗಳನ್ನು ಕಳಸಕ್ಕೆ ಕಟ್ಟಿದ್ದರು. ಅದಕ್ಕೆ ಆಭರಣಗಳನ್ನು ತೊಡಿಸಿ ಅಲಂಕಾರ ಮಾಡಲಾಗಿತ್ತು. ಕೆಲವು ಮನೆಗಳಲ್ಲಿ ವಿವಿಧ ನೋಟುಗಳಿಂದ ಶೃಂಗಾರಿಸಿದ್ದರು.

ಅಲ್ಲದೆ ದೇವರಿಗೆ ವಿವಿಧ ಸಿಹಿ ಪದಾರ್ಥಗಳ ನೈವೇದ್ಯ ಸಮರ್ಪಿಸಿ ಭಕ್ತಿ ಭಾವದಿಂದ ಪೂಜಿಸಲಾಯಿತು. ಸಂಜೆ ವೇಳೆಗೆ ಶ್ಲೋಕ ಪಠಿಸಿ ಹಾಡು ಹಾಡಿ ಲಕ್ಷ್ಮಿಗೆ ಆರತಿ ಬೆಳಗಿದರು. ರೇಷ್ಮೆ ಸೀರೆ ಧರಿಸಿದ ಮುತ್ತೈದೆಯರು, ಬಣ್ಣ ಬಣ್ಣದ ಫ್ಯಾನ್ಸಿ ಡ್ರೆಸ್‌ ತೊಟ್ಟ ಯುವತಿಯರು, ಮಕ್ಕಳು ತಮ್ಮ ನೆರೆಹೊರೆಯವರ ಮನೆಗಳಿಗೆ ತೆರಳಿ ಲಕ್ಷ್ಮಿಗೆ ನಮಿಸಿದರು. ನಂತರ ಅರಿಶಿನ ಕುಂಕುಮ ಮತ್ತು ಬಾಗೀನ ಪಡೆದುಕೊಂಡು ಬಂದರು.

ದೇವಾಲಯಗಳಲ್ಲೂ ವಿಶೇಷ ಪೂಜೆ: ಗವಿಪುರದ ಅಂಬಾಭವಾನಿ ದೇವಸ್ಥಾನ, ಬಂಡೆಮಹಾಕಾಳಿ ದೇವಸ್ಥಾನ, ಚಾಮರಾಜಪೇಟೆಯ ಅಂಬಾ ಭವಾನಿ, ಹನುಮಂತನಗರದ ಬಲಮುರಿ ಗಣಪತಿ ದೇವಾಲಯದಲ್ಲಿ ಪದ್ಮಾವತಿ, ಧರ್ಮರಾಯರಾಯಸ್ವಾಮಿ ದೇವಸ್ಥಾನದಲ್ಲಿ ದ್ರೌಪದಿ, ಬನಶಂಕರಿಯ ಬನಶಂಕರಮ್ಮ,

ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನ ಸೇರಿದಂತೆ ನಗರದ ವಿವಿಧ ದೇವಿ ದೇವಾಲಯಗಳಲ್ಲಿ  ಲಕ್ಷ್ಮಿ, ಮಹಾಲಕ್ಷ್ಮಿ, ಗಜಲಕ್ಷ್ಮಿ, ಅಷ್ಟಲಕ್ಷ್ಮಿ ಹೀಗೆ ನಾನಾ ಲಕ್ಷ್ಮಿಯರ ಅಲಂಕಾರ ಮಾಡಲಾಗಿತ್ತು. ಅರಿಶಿನ ಕುಂಕುಮ ಅಲಂಕಾರ, ಧಾನ್ಯದ ಅಲಂಕಾರ, ಡ್ರೈಫ್ರೂಟ್ಸ್‌ ಅಲಂಕಾರ, ಹಣ್ಣಿನ ಅಲಂಕಾರ, ನೋಟು ಮತ್ತು ಕಾಸಿನ ಅಲಂಕಾರ ಹೀಗೆ ನಾನಾ ಅಲಂಕಾರಗಳನ್ನು ಮಾಡಲಾಗಿತ್ತು. 

Advertisement

ಟಿ.ಆರ್‌. ಮಿಲ್‌ ಬಳಿಯಿರುವ ಲಕ್ಷ್ಮೀ ದೇವಸ್ಥಾನ, ಶ್ರೀನಗರದ ಲಕ್ಷ್ಮೀ ದೇವಸ್ಥಾನ, ದೇವಗಿರಿ ವೆಂಕಟರಮಣ ಲಕ್ಷ್ಮೀ ದೇವಸ್ಥಾನ, ಮಹಾಲಕ್ಷ್ಮಿ ಲೇಔಟ್‌ ಲಕ್ಷ್ಮೀ ದೇವಸ್ಥಾನ, ಶೇಷಾದ್ರಿಪುರಂನ ಮಹಾಲಕ್ಷ್ಮಿ ಮಂದಿರ, ಹೆಬ್ಟಾಳದ ಕೆಂಪಾಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಹೋಮ ಹವನ ನಡೆಯಿತು. ಮುಂಜಾನೆಯಿಂದ ರಾತ್ರಿಯವರೆಗೆ ಭಕ್ತರು ಸಾಲುಗಟ್ಟಿ ಆಗಮಿಸಿದ್ದರು.

ಲಕ್ಷ್ಮಿ ವಿಗ್ರಹಕ್ಕೆ ವಿಶೇಷ ಅಲಂಕಾರ: ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಪದ್ಮನಾಭನಗರ ಲಕ್ಷ್ಮೀಕಾಂತ ದೇವಸ್ಥಾನದಲ್ಲಿರುವ 8 ಅಡಿ ಎತ್ತರದ ಲಕ್ಷ್ಮಿ ವಿಗ್ರಹಕ್ಕೆ ಅಲಂಕಾರ ಮತ್ತು ಪೂಜೆ ನೆರವೇರಿಸಲಾಯಿತು. ಧನ್ವಂತರಿ ರಸ್ತೆಯ ಲಕ್ಷ್ಮಿ ಹಯಗ್ರೀವ ಸನ್ನಿ ಯಲ್ಲಿ ಪುಟಾಣಿ ಲಕ್ಷ್ಮಿ ವಿಗ್ರಹವಿದೆ. ಇದು ಪುಟಾಣಿಯಾದರೂ ಭಕ್ತರ ನಂಬಿಕೆ ದೊಡ್ಡದು. ಹೀಗಾಗಿ ಇಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರು ಸಾಲುಗಟ್ಟಿ ದೇವಿಗೆ ಭಕ್ತಿ ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next