ವಾಮಂಜೂರು: ಮಂಗಳೂರು ಪಾಲಿಕೆ ವ್ಯಾಪ್ತಿಯ ವಾಮಂಜೂರು ದೇವರಪದವು ನಿವಾಸಿಗಳಿಗೆ ಒಳಚರಂಡಿಯ ಸಮಸ್ಯೆ ಕಾಡುತ್ತಿದೆ. ಪಾಲಿಕೆ ವತಿಯಿಂದ ಸುಸಜ್ಜಿತ ಒಳಚರಂಡಿ ನಿರ್ಮಾಣವಾಗಿದ್ದು, ನಿವಾಸಿಗಳ ಬಳಕೆಗೆ ಲಭ್ಯವಾಗಿಲ್ಲ. 2 ವರ್ಷಗಳ ಹಿಂದೆ ಕಾಮಗಾರಿ ಪೂರ್ಣಗೊಂಡಿದ್ದು, ಮನೆ ಶೌಚಾಲಯಗಳನ್ನು ಒಳಚರಂಡಿಗೆ ಜೋಡಿಸಿಲ್ಲ. ಇದರಿಂದಾಗಿ ಸುಸಜ್ಜಿತ ಡ್ರೈನೇಜ್ ಬಳಕೆಗೆ ಸಿಗದಂತಾಗಿದೆ. ಪಾಲಿಕೆ ವತಿಯಿಂದ ಒಳಚರಂಡಿ ನಿರ್ಮಿಸಿ ಅಲ್ಲಲ್ಲಿ ಮ್ಯಾನ್ ಹೋಲ್ ಸ್ಥಾಪಿಸಲಾಗಿದೆ. ಆದರೆ ಮನೆಯ ಪೈಪ್‌ಗ್ಳನ್ನು ಇನ್ನೂ ಅವುಗಳಿಗೆ ಸೇರಿಸಿಲ್ಲ. ಈ ಬಗ್ಗೆ ಪಾಲಿಕೆಗೆ ಮನವಿ ಮಾಡಲಾಗಿದ್ದು, ಕಾಮಗಾರಿ ಬಾಕಿ ಉಳಿದಿದೆ ಎಂದು ತಿಳಿಸಿದ್ದು, ಲೈನ್ ಜೋಡಿಸುವ ಕಾರ್ಯ ವಿಳಂಬವಾಗಿದೆ.
ಬಾವಿಗಳಿಗೆ ಸೇರುತ್ತಿದೆ ಕೊಳಚೆ ನೀರು
ಪ್ರಸ್ತುತ ಮನೆ ವಠಾರಗಳಲ್ಲಿ ಪಿಟ್‌ಗಳನ್ನು ಮಾಡಿ ಅವುಗಳಿಗೆ ಶೌಚಾಲಯದ ಕೊಳಚೆ ನೀರನ್ನು ಸೇರಿಸಲಾಗುತ್ತಿದೆ. ಮಳೆಗಾಲದಲ್ಲಿ ಇವುಗಳು ತುಂಬಿ ತುಳುಕುತ್ತಿವೆ. ಮತ್ತೂಂದೆಡೆ ಪಾತ್ರೆಗಳನ್ನು ತೊಳೆದ ನೀರನ್ನು ಮನೆಯಂಗಳದಲ್ಲಿರುವ ತೆಂಗಿನ ಮರಗಳ ಬುಡಕ್ಕೆ ಸೇರಿಸಲಾಗುತ್ತಿದೆ. ಈ ಭಾಗದ ಕೆಲವು ಮನೆಗಳ ಬಾವಿಗೆ ಶೌಚಾಲಯ, ಕೊಳಚೆ ನೀರು ಸೇರುತ್ತಿದೆ. ಇದರಿಂದಾಗಿ ಮನೆ ಪಕ್ಕದಲ್ಲಿರುವ ಬಾವಿಯ ನೀರು ಕಲುಷಿತಗೊಳ್ಳುವ ಅನುಮಾನವಿದ್ದು ಸೇವಿಸಲು ಭೀತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.
200ಕ್ಕೂ ಅಧಿಕ ಮನೆಗಳು
ಈ ಪರಿಸರದಲ್ಲಿ 200ಕ್ಕೂ ಅಧಿಕ ಮನೆಗಳಿವೆ. ಬಹುತೇಕ ಎಲ್ಲ ಮನೆಗಳ ಕೊಳಚೆ ನೀರು ಮನೆಯ ಸುತ್ತಮುತ್ತಲಲ್ಲೇ ಪಿಟ್‌ಗಳಿಗೆ ಸೇರಿಸಲಾಗುತ್ತಿದೆ. ಇದರ ಬದಲು ಒಳ ಚರಂಡಿಗೆ ಸಂಪರ್ಕ ನೀಡುವಂತೆ ಇಲ್ಲಿನ ನಿವಾಸಿಗಳು ಆಗ್ರಹಿಸುತ್ತಿದ್ದಾರೆ. ಕಾಮಗಾರಿ ಮುಗಿದು ವರ್ಷ ಕಳೆದರೂ ಮನೆಯ ಲೈನ್‌ಗಳನ್ನು ಲಿಂಕ್ ಮಾಡದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ರಸ್ತೆಯಲ್ಲೇ ಮಳೆ ನೀರು ನಿಂತು ಸಂಕಷ್ಟ
ಇಲ್ಲಿ ಪ್ರತ್ಯೇಕ ಫುಟ್‌ಪಾತ್ ಇಲ್ಲದ ಕಾರಣ ಸ್ಥಳೀಯರು ರಸ್ತೆಯಲ್ಲೇ ನಡೆದಾಡುತ್ತಾರೆ. ಮತ್ತೂಂದೆಡೆ ಮಳೆ ನೀರು ಹರಿಯಲು ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಭಾರೀ ಮಳೆಯ ಸಂದರ್ಭ ರಸ್ತೆ ಸಂಪೂರ್ಣ ಜಾಲಾವೃತಗೊಳ್ಳುತ್ತದೆ. ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದು, ಮಳೆ ಬಂದಾಗ ಪರದಾಡುತ್ತಾರೆ.
ಮಳೆಯ ಕಾರಣ ಕಾಮಗಾರಿ ವಿಳಂಬ
ದೇವರಪದವು ಪ್ರದೇಶದಲ್ಲಿ ಮುಖ್ಯ ಲೈನ್ ಲಿಂಕ್ ಮಾಡುವ ಕೆಲಸ ಬಾಕಿ ಇದೆ. ಖಾಸಗಿಯವರ ಜಾಗದಲ್ಲಿ ಲೈನ್ ಹಾದು ಹೋಗುವ ಕಾರಣ ಅವರ ಮನ ವೊಲಿಸಿ ಅನುಮತಿ ಪಡೆಯಲಾಗಿದೆ. ಮಳೆಯ ಕಾರಣ ಕಾಮಗಾರಿ ನಡೆಸಲಾಗಿಲ್ಲ. ಶೀಘ್ರದಲ್ಲೇ ಲಿಂಕ್ ಮಾಡಿ ಮನೆಗಳ ಸಂಪರ್ಕ ಸೇರಿಸಲಾಗುವುದು.
-ಹೇಮಲತಾ ರಘು ಸಾಲ್ಯಾನ್,ಮಹಾನಗರ ಪಾಲಿಕೆ ಸದಸ್ಯೆ
– ಸಂತೋಷ್ ಮೊಂತೇರೊ