ಉಳ್ಳಾಲ: ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಸಾರ್ವಜನಿಕ ಕೋಟಿ ಶಿವ ಪಂಚಾಕ್ಷರಿ ನಾಮಜಪ ಯಜ್ಞ ಸಮಿತಿ ಆಶ್ರಯದಲ್ಲಿ ಐದು ದಿನಗಳ ಕಾಲ ನಡೆದ ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಗುರುವಾರ ಸಂಪನ್ನಗೊಂಡಿತು.
5 ದಿನಗಳಲ್ಲಿ ಸುಮಾರು 12 ಸಾವಿರ ಭಕ್ತರು ಯಜ್ಞದಲ್ಲಿ ಪಾಲ್ಗೊಂಡು ಸುಮಾರು 1.40 ಕೋಟಿ ಮಂತ್ರ ಜಪಿಸಿದ್ದು, ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿವರ್ಯರು ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞದ ಕುರಿತು ಮಾತನಾಡಿ, ಐದು ದಿನಗಳ ಈ ಕಾರ್ಯಕ್ರಮದಲ್ಲಿ ಮೊದಲ ನಾಲ್ಕು ದಿನಗಳಲ್ಲಿ ದಿನವೊಂದಕ್ಕೆ 25 ಲಕ್ಷ ನಾಮ ಜಪ ಮಾಡುವ ಉದ್ದೇಶ ಇಟ್ಟುಕೊಂಡು ಎರಡು ಅವಧಿಯಲ್ಲಿ ಭಕ್ತರಿಗೆ ಅವಕಾಶ ಮಾಡಲಾಗಿತ್ತು. ಆದರೆ ದೇವರು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಕರೆಸಿಕೊಳ್ಳುತ್ತಾನೆ ಎನ್ನುವುದು ಸೋಮೇಶ್ವರದಲ್ಲಿ ನಡೆದ ನಾಮಜಪದಲ್ಲಿ ಸಾಬೀತಾಗಿದೆ. ಭಕ್ತರು ತಂಡೋಪತಂಡವಾಗಿ ಭಾಗವಹಿಸಿ ನಾಲ್ಕು ದಿನದ ಕೋಟಿ ನಾಮಜಪವನ್ನು ಮೂರೇ ದಿನಗಳಲ್ಲಿ ಪೂರೈಸಿರುವುದು ವಿಶೇಷವಾಗಿದೆ ಎಂದರು.
ಯಾಗದಲ್ಲಿ ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಸ್ಪೀಕರ್ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಹರೀಶ್ ಕುಮಾರ್, ಆರೆಸ್ಸೆಸ್ ಮುಖಂಡರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಪಿ.ಎಸ್. ಪ್ರಕಾಶ್ ಸಹಿತ ಹಲವಾರು ಗಣ್ಯರು ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಸೋಮೇಶ್ವರದ ವ್ಯವ ಸ್ಥಾಪನ ಸಮಿತಿ ಅಧ್ಯಕ್ಷ ಬಿ.ರವೀಂದ್ರನಾಥ್ ರೈ, ಲಕ್ಷ ಬಿಲ್ವಾರ್ಚನೆ ಸಮಿತಿ ಅಧ್ಯಕ್ಷ ದೀಪಕ್ ಪಿಲಾರ್, ವ್ಯವಸ್ಥಾಪನ ಸಮಿತಿ ಸದಸ್ಯರು, ಕೋಟಿ ಶಿವ ಪಂಚಾಕ್ಷರಿ ನಾಮಜಪ ಯಜ್ಞ, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಐದು ದಿನಗಳ ಕಾಲ ನಡೆದ ಸಾರ್ವಜನಿಕ ಕೋಟಿ ಶಿವ ಪಂಚಾಕ್ಷರಿ ನಾಮಜಪ ಯಜ್ಞದಲ್ಲಿ ನಿರೀಕ್ಷೆಗೂ ಮೀರಿ ಭಕ್ತರು ಭಾಗವಹಿಸಿದ್ದು, ಒಂದೂವರೆ ಕೋಟಿವರೆಗೆ ಶಿವ ಪಂಚಾಕ್ಷರಿ ನಾಮಜಪ ಪಠಣೆ ಮೂಲಕ ಸಾರ್ವತ್ರಿಕ ದಾಖಲೆ ಬರೆದಿದೆ. ಯಾಗದ ಯಶಸ್ಸಿಗೆ ಕಾರಣರಾದ ಭಕ್ತರು, ಸ್ವಯಂಸೇವಕರ ಕಾರ್ಯ ಶ್ಲಾಘನೀಯ. ಸಂತೋಷ್ ಕುಮಾರ್ ರೈ ಬೋಳಿಯಾರ್ ಅಧ್ಯಕ್ಷರು, ಕೋಟಿ ಶಿವ ಪಂಚಾಕ್ಷರಿ, ನಾಮಜಪ ಯಜ್ಞ ಸಮಿತಿ