Advertisement

ಉಡುಪಿ: ನೀರಿನ ಸಮಸ್ಯೆ ಉಲ್ಬಣ

02:20 PM Apr 29, 2017 | Team Udayavani |

ಉಡುಪಿ: ಉಡುಪಿ ನಗರಕ್ಕೆ ನೀರುಣಿಸುವ ಬಜೆ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ತೀವ್ರ ಕುಸಿತ ಕಾಣುತ್ತಿದ್ದು, ಇನ್ನು ಕೇವಲ 3-4 ದಿನಗಳಿಗಾಗುವಷ್ಟು ಮಾತ್ರ ನೀರಿದೆ. ಶುಕ್ರವಾರ ನೀರಿನ ಮಟ್ಟ 1.80 ಮೀ. ಇದ್ದರೆ, ಕಳೆದ ವರ್ಷ ಇದೇ ದಿನ (ಎ.28) 3.19 ಮೀ. ನೀರಿನ ಸಂಗ್ರಹ ಇತ್ತು. ಅಂದರೆ ಸುಮಾರು 1. 39 ಮೀ. ನೀರಿನ ಮಟ್ಟ ಕಡಿಮೆ ಇದೆ. ಈಗಿರುವ 1.80 ಮೀಟರ್‌ ನೀರಿನ ಮಟ್ಟವು ಕಳೆದ ವರ್ಷದ ಮೇ 10ರಂದು ಇತ್ತು. ಅಂದರೆ ಸುಮಾರು 10ರಿಂದ 13 ದಿನಗಳಷ್ಟು ಕಡಿಮೆ ಇದೆ. ಡ್ರೆಜ್ಜಿಂಗ್‌ ಮಾಡಿ, ಬಾವಿ, ಕೊಳವೆ ಬಾವಿಗಳಿಂದ ಸುಮಾರು 20 ದಿನಗಳವರೆಗೆ ನೀರು ಕೊಡುವ ಭರವಸೆಯನ್ನು ನಗರಸಭೆ ನೀಡಿದೆ.

Advertisement

15 ಗಂಟೆ ಪಂಪಿಂಗ್‌
ಬಜೆ ಜಲಾಶಯದಲ್ಲಿ ಈಗ 15 ಗಂಟೆಗಳ ಕಾಲ ಪಂಪಿಂಗ್‌ ಮಾಡಲಾಗುತ್ತಿದ್ದು, ಪ್ರತಿನಿತ್ಯ 12 ದಶಲಕ್ಷ ಲೀಟರ್‌ ನೀರು ತೆಗೆಯಲಾಗುತ್ತಿದೆ. ಕಳೆದ ವರ್ಷ ಜೂನ್‌ ಆರಂಭದವರೆಗೂ ನಿರಂತರ 24 ಗಂಟೆಗಳ ಕಾಲ ಪಂಪಿಂಗ್‌ ಮಾಡಲಾಗುತ್ತಿತ್ತು.

9 ಬೋರ್‌, 7 ಬಾವಿ ಬಳಕೆ
ಪರ್ಯಾಯ ನೀರಿನ ಮೂಲಗಳತ್ತ ನಗರಸಭೆ ಗಮನಹರಿಸಿದ್ದು, ಸದ್ಯ 9 ಬೋರ್‌ವೆಲ್‌ ಹಾಗೂ 7 ಬಾವಿಗಳಿಂದ ನೀರು ತೆಗೆಯಲಾಗುತ್ತಿದ್ದು, ಅದನ್ನು ಟ್ಯಾಂಕರ್‌ ಮೂಲಕ ಪ್ರತಿನಿತ್ಯ ನೀರಿನ ಸಮಸ್ಯೆ ಇರುವ ಕಡೆ ಪೂರೈಸಲಾಗುತ್ತಿದೆ. ವಿಪುಲ ನೀರಿನ ಸಂಗ್ರಹವಿರುವ 15 ಸರಕಾರಿ ಬಾವಿಗಳನ್ನು ಅಭಿವೃದ್ಧಿಪಡಿಸಿದ್ದು, ವಡಭಾಂಡೇಶ್ವರ, ಕೊಡವೂರು, ಉದ್ದಿನಹಿತ್ಲು, ಬಾಚನಬೈಲು, ಗುಂಡಿಬೈಲು, ಕೊಡಂಕೂರು, ದೊಡ್ಡಣಗುಡ್ಡೆ, ಕರಂಬಳ್ಳಿ, ಕುಂಜಿಬೆಟ್ಟು, ಅಜ್ಜರಕಾಡು, ಪದ್ಮನಾಭನಗರ, ಚಿಟಾ³ಡಿ, ಬೀಡಿನಗುಡ್ಡೆ, ಇಂದ್ರಾಳಿಯಲ್ಲಿರುವ ತೆರೆದ ಬಾವಿಗಳನ್ನು ದುರಸ್ತಿಗೊಳಿಸುವ ಕಾರ್ಯ ನಡೆಯುತ್ತಿದೆ. 

ಶೀಘ್ರ ಡ್ರೆಜ್ಜಿಂಗ್‌ ಆರಂಭ
ಬಜೆ ಅಣೆಕಟ್ಟು ನೀರು ಹರಿಸುವ ಸಲುವಾಗಿ ಅಲ್ಲಲ್ಲಿ ಡ್ರೆಜ್ಜಿಂಗ್‌ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಹಿರಿಯಡ್ಕ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಣಾಯಿ, ಭಂಡಾರಿಬೆಟ್ಟು, ಪುತ್ತಿಗೆ ಮಠದ ಬಳಿಯ ನೀರಿನ ಅಣೆಕಟ್ಟು ಪ್ರದೇಶಗಳಲ್ಲಿ ನೀರಿನ ಸಂಗ್ರಹವಿದ್ದು, ಅದನ್ನು ಕೂಡ ಪರಿಶೀಲಿಸಿ ಅಲ್ಲಿಂದಲೇ ಪಂಪಿಂಗ್‌ ಮಾಡಿ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳುವತ್ತ ಗಮನಹರಿಸಿದೆ. 4 ಬೋಟ್‌ಗಳಲ್ಲಿ 100 ಎಚ್‌ಪಿ ಪಂಪ್‌ ಮೂಲಕ ಡ್ರೆಜ್ಜಿಂಗ್‌ ಮಾಡಲಾಗುವುದು ಎಂದು ನಗರಸಭೆಯ ನಾಮನಿರ್ದೇಶಿತ ಸದಸ್ಯ ಜನಾರ್ದನ ಭಂಡಾರ್ಕರ್‌ ಹೇಳಿದ್ದಾರೆ. ಡ್ರೆಜ್ಜಿಂಗ್‌ ನಡೆಸಿ ದೂರದಲ್ಲಿರುವ ನೀರನ್ನು ಬಜೆಗೆ ಹರಿಸಿದರೂ ಅಬ್ಟಾಬ್ಟಾ ಅಂದರೆ 20 ದಿನಗಳವರೆಗೆ ಸುಧಾರಿಸಬಹುದು ಎಂದು ಮೂಲಗಳು ತಿಳಿಸಿವೆ. ಅಷ್ಟರೊಳಗೆ ಮಳೆ ಬಾರದಿದ್ದರೆ ಪರಿಸ್ಥಿತಿ ತೀರಾ ಬಿಗಡಾಯಿಸಲಿದೆ.

1,700 ಮಂದಿಗೆ ಎಚ್ಚರಿಕೆ ನೋಟಿಸ್‌
ನೀರಿನ ಸಮಸ್ಯೆ ತೀವ್ರಗೊಂಡ ಬಳಿಕ ನಗರಸಭೆ ನೀರು ಪೋಲು ಮಾಡಬಾರದೆಂದು ಸಾರಿ ಸಾರಿ ಹೇಳಿದ ನಂತರವೂ ನೀರು ಪೋಲು ಮಾಡಿದ 1,700 ಮಂದಿಗೆ ಎಚ್ಚರಿಕೆ ನೋಟಿಸ್‌ ನೀಡಲಾಗಿದೆ. ಅನಧಿಕೃತ ಸಂಪರ್ಕ ಹೊಂದಿದವರಿಗೂ ಅಂತಿಮ ನೋಟಿಸ್‌ ಜಾರಿ ಮಾಡಲಾಗಿದೆ. ನಗರಸಭೆಯ ತಂಡ ನೀರು ಪೋಲು ಮಾಡುವವರ ಮೇಲೆ ನಿಗಾ ಇರಿಸಿದೆ. ಹಠಾತ್‌ ದಾಳಿ ನಡೆಸಿ ಇಂಥವರನ್ನು ಪತ್ತೆ ಹಚ್ಚಲಾಗುತ್ತದೆ. ನೀರು ಪೋಲು ಮಾಡುವವರ ಸಂಪರ್ಕವನ್ನು ಆ ಕೂಡಲೇ ಕಡಿತಗೊಳಿಸಲಾಗುವುದು ಎಂದು ನಗರಸಭೆ ತಿಳಿಸಿದೆ. ಯಾರಾದರೂ ನೀರು ಪೋಲು ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ನಗರಸಭೆಯ ಜಲಹಿತ ಸಹಾಯವಾಣಿ 0820- 208108108 ಸಂಖ್ಯೆಯನ್ನು ಸಂಪರ್ಕಿಸಿ ದೂರು ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ತಿಳಿಸಿದೆ.

Advertisement

ಬಜೆಯಲ್ಲಿ  ಇನ್ನು 3-4 ದಿನಗಳಿಗಾಗುವಷ್ಟು ಮಾತ್ರ ನೀರು!
ಡ್ರೆಜ್ಜಿಂಗ್‌ ಮಾಡಿ 20 ದಿನಗಳಿಗೆ ನೀರು ಕೊಡಲು ನಗರಸಭೆ ಪ್ರಯತ್ನ
ಪರ್ಯಾಯ ಮೂಲಗಳತ್ತ ನಗರಸಭೆ ಚಿತ್ತ

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next