Advertisement

Udupi: ಗೀತಾರ್ಥ ಚಿಂತನೆ-61: ಶ್ವೇತ ವರ್ಣಕ್ಕೂ, ಶುಕ್ಲ ವರ್ಣಕ್ಕೂ ಸೂಕ್ಷ್ಮ ವ್ಯತ್ಯಾಸ

05:28 PM Oct 10, 2024 | Team Udayavani |

ಶ್ವೇತವೆಂದರೂ ಬಿಳಿ, ಶುಕ್ಲವೆಂದರೂ ಬಿಳಿ. ಆದರೂ ಇವೆರಡು ಶಬ್ದಗಳ ನಡುವೆ ತುಸು ವ್ಯತ್ಯಾಸವಿದೆ. ಶ್ವೇತ ದ್ವೀಪವೆಂದೂ, ಶುಕ್ಲ ಪಕ್ಷವೆಂದೂ ಕರೆಯುತ್ತೇವೆ ವಿನಾ ಶ್ವೇತ ಪಕ್ಷ, ಶುಕ್ಲ ದ್ವೀಪವೆನ್ನುವುದಿಲ್ಲ. ಇವೆರಡನ್ನೂ ಬೇರೆ ಬೇರೆ ಸಂದರ್ಭಗಳಲ್ಲಿ ಉಪಯೋಗಿಸುತ್ತೇವೆ.

Advertisement

ಶ್ವೇತವೆಂದರೆ ಸಂಪೂರ್ಣ ಬಿಳಿಯಲ್ಲ, ಅದು ಬೆಣ್ಣೆಯಂತಹ ಬಣ್ಣ, ಕ್ರೀಮ್‌ ತರಹದ ಬಿಳಿ. ಶುಕ್ಲವೆಂದರೆ ಕಣ್ಣು ಕುಕ್ಕುವ ಸಂಪೂರ್ಣ ಬಿಳಿ. ಶ್ವೇತ ಶುಭ ಲಕ್ಷಣ. ದನಗಳಲ್ಲಿ ಕಪಿಲೆಗೆ ಸ್ಥಾನವಿರುವಂತೆ ಕುದುರೆಗಳಲ್ಲಿ ಶ್ವೇತ ಅಶ್ವಗಳಿಗೆ ಸ್ಥಾನವಿದೆ. ಇಂತಹ ಬೆಣ್ಣೆಯ ಬಣ್ಣದ ಮಂಗಳಕರವಾದ ಕುದುರೆಗಳನ್ನು ಹೊಂದಿದ ರಥವನ್ನು ಕೃಷ್ಣಾರ್ಜುನರು ಹೊಂದಿದ್ದರು. ಹಯ ಶಬ್ದಕ್ಕೆ ವೇದಗಳೆಂಬ ಅರ್ಥವೂ ಇದೆ. ಹಯವನ್ನು (ಕುದುರೆ) ವೇದಗಳಿಗೆ ಹೋಲಿಸುತ್ತಾರೆ. ನಾಲ್ಕು ವೇದಗಳು ಹಯಗ್ರೀವ ದೇವರ ನಾಸಿಕದಿಂದ ಬಂದವು. ನಾಲ್ಕು ಹಯಗಳನ್ನು ಹೊಂದಿದ ರಥದಲ್ಲಿ ಶಂಖ ನಾದವನ್ನು ಕೃಷ್ಣಾರ್ಜುನರು ಹೊಮ್ಮಿಸಿದರು.

ಭಗವದ್ಗೀತೆ ಎಂದಾಗ ಮನಃಪಟಲದಲ್ಲಿ ಮೂಡುವುದು ಪಾರ್ಥಸಾರಥಿಯ ಚಿತ್ರಣ. ನಾಲ್ಕು ವೇದಗಳನ್ನು ಪ್ರತಿನಿಧಿಸುವ ನಾಲ್ಕು ಹಯಗಳನ್ನು ಹೊಂದಿದ ಶರೀರವೆಂಬ ರಥದಲ್ಲಿ ನರನು (ರಥಿಕ) ನಾರಾಯಣನನ್ನು ಕುಳ್ಳಿರಿಸಿ ಜೀವನವೆಂಬ ಯುದ್ಧರಂಗದಲ್ಲಿ (ಪ್ರಯಾಣ) ಮುಂದುವರಿದರೆ ಜಯ ನಿಶ್ಚಿತ ಎನ್ನುವುದು ಗೀತೆಯ ಸಂದೇಶ. ಆಧ್ಯಾತ್ಮಿಕ ವಿವರಣೆ ಇದು.

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next