ಯುದ್ಧದಲ್ಲಿ ಪುರುಷರೆಲ್ಲ ಸತ್ತು ವರ್ಣಸಂಕರವಾಗುತ್ತದೆ ಎಂಬ ಅರ್ಜುನನ ವಾದವನ್ನು ಹೀಗೆ ವಿಶ್ಲೇಷಿಸಬಹುದು. ಎರಡು ಬಗೆಯ ವಂಶವಾಹಿನಿಗಳು ಮಿಶ್ರವಾದರೆ ಎರಡೂ ವಂಶವಾಹಿಗಳು ನಷ್ಟವಾಗಿ, ಅನಪೇಕ್ಷಿತ ವಂಶವಾಹಿಗಳು ಜನ್ಮತಳೆಯುತ್ತವೆ ಎಂಬ ಆತಂಕವಿದೆ.
ವಂಶವಾಹಿಯಲ್ಲಿ ಬಂದ ಕೆಲವು ಗುಣಗಳು ಸ್ವಾಭಾವಿಕವಾಗಿರುತ್ತದೆ. ಇದನ್ನು ಸ್ವಭಾವ ಧರ್ಮ ಎಂದೂ ಕರೆಯಬಹುದು. ಮನುಷ್ಯನ ವ್ಯಕ್ತಿತ್ವದಲ್ಲಿ ಪರಿಣಾಮ ಬೀರುವುದು ಒಂದು ಸ್ವಭಾವ ಧರ್ಮವಾದರೆ, ಇನ್ನೊಂದು ಪ್ರಭಾವತಃ ಧರ್ಮ.
ಸಮಾಜದ ಪರಿಸರವೂ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಬಹಳ ಕಡೆ ಶ್ರೀಕೃಷ್ಣನನ್ನು ಜನಾರ್ದನ ಎಂದು ಸಂಬೋಧಿಸಲಾಗಿದೆ. ಇದಕ್ಕೆ ಕಾರಣ ಗತಿಸಿ ಹೋದ ಸಂದರ್ಭ, ಮಹಾಲಯ, ಶ್ರಾದ್ಧಾದಿಗಳ ಸಂದರ್ಭ ಪಿಂಡೋದಕವನ್ನು ಬಿಡುವಾಗ ಜನಾರ್ದನರೂಪಿ ಭಗವಂತನಿಗೇ ಸಮರ್ಪಣೆ ಮಾಡಬೇಕು. ಎಲ್ಲರೂ ಗತಿಸಿ ಹೋದಾಗ ಪಿಂಡೋದಕ ಬಿಡುವವರಾರು ಎಂದು ಜನಾರ್ದನನನ್ನೇ ಉದ್ದೇಶಿಸಿ ಅರ್ಜುನ ಕೇಳುತ್ತಾನೆ. ಯುದ್ಧಕ್ಕಾಗಿ ಸಿದ್ಧಗೊಂಡು ಬಂದ ಅರ್ಜುನ ತನ್ನನ್ನು ಇತರರು ಯಾರಾದರೂ ಕೊಂದರೆ ಒಳಿತು ಎನ್ನುತ್ತಾನೆ. ಆತ್ಮಹತ್ಯೆ ಪಾಪಕರ. ಇನ್ನೊಬ್ಬ ಕೊಂದರೆ ಪಾಪ ಬರುವುದಿಲ್ಲವಲ್ಲ! ಸ್ವಧರ್ಮ ಬಿಟ್ಟರೆ ನರಕಪ್ರಾಪ್ತಿ ಎಂದು ನಂಬಿದ್ದರೂ ಕ್ಷತ್ರಿಯನಾಗಿಯೂ ಇನ್ನೊಬ್ಬರು ಕೊಂದರೆ ಆದೀತು ಎನ್ನುತ್ತಾನೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ
– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811