Advertisement
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂತಹ ಸ್ಥಿತಿಗಳು ಒಂದು ರೀತಿ ಆತಂಕದ ವಾತಾವರಣ ಹೌದು. ಆದರೆ, ಇದರಿಂದ ಮುಕ್ತರಾಗುತ್ತೇವೆ ಎಂದರು.
Related Articles
Advertisement
ಸಾಂದರ್ಭಿಕವಾಗಿ ಕೆಲ ಸಂಘಟನೆಗಳು ಅವರವರ ಭಾವನೆಗಳನ್ನು ವ್ಯಕ್ತಪಡಿಸಿದ ಉದಾಹರಣೆಗಳಿವೆ. ಸರ್ಕಾರವಾಗಿ ಪರಿಗಣಿಸುವಾಗ ಕಾಯ್ದೆ- ಕಾನೂನು ಗಳನ್ನು ಗೌರವಿಸುವುದು ಸರ್ಕಾರದ ಜವಾಬ್ದಾರಿ. ಕಾಂಗ್ರೆಸ್ ಏನು ಹೇಳುತ್ತದೆ ಎನ್ನುವುದು ಪ್ರಶ್ನೆ ಅಲ್ಲ. ಕಾಯ್ದೆ ತಿದ್ದುಪಡಿ ಯಾರು ತಂದಿದ್ದಾರೆ, ಹೇಗೆ ತಂದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಬದಲಾವಣೆ ಕಾಲಘಟ್ಟದಲ್ಲಿದೆ
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಶೇ.96 ರಷ್ಟು ವಿದ್ಯಾರ್ಥಿವೇತನ ನೇರವಾಗಿ ಮೊದಲ ಬಾರಿಗೆ ವಿದ್ಯಾರ್ಥಿಗಳ ಖಾತೆಗೆ ಜಮೆಯಾಗಿದೆ. ಉಳಿದ ಶೇ.4ರಷ್ಟು ಆಧಾರ್ ಮತ್ತಿತರೆ ತಾಂತ್ರಿಕ ಸಮಸ್ಯೆಗಳಿದ್ದು, ನೇರವಾಗಿ ತಲುಪಿಸಲಾಗುವುದು. ಬಾಬು ಜಗಜೀವನ್‌ರಾಂ ಜಯಂತಿಯಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ಯೋಜನೆಯಿಂದ ಪರಿಶಿಷ್ಟ ಜಾತಿ-ಪಂಗಡದ ಸುಮಾರು 40 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.
ಡಾ| ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಅತ್ಯಂತ ಸಾಮಾನ್ಯರನ್ನು ಗುರುತಿಸಲಾಗಿದೆ. ತಂಬೂರಿ ಹಿಡಿದು ಅಲೆಮಾರಿಗಳಾಗಿ ಬದುಕುವ ದಕ್ಕಲಿಗ ಸಮಾಜದ ವ್ಯಕ್ತಿಗೆ, ಮಾಜಿ ಸಚಿವೆ ಮೋಟಮ್ಮ ಅವರಂತಹ ನೂರಾರು ಮಹಿಳೆಯರನ್ನು ಹಾಸ್ಟೆಲ್ ವಾರ್ಡನ್ ಆಗಿದ್ದು ಸಲುಹಿದ 95 ವರ್ಷದ ಸರಸ್ವತಮ್ಮ ಎಂಬುವವರಿಗೆ, ಹರೇಕಳ ಹಾಜಬ್ಬರನ್ನು ಪರಿಚಯಿಸಿದ ಪತ್ರಕರ್ತ ಬಾಳೇಪುಣಿ ಅಂತವರನ್ನು ಹುಡುಕಿ ಪ್ರಶಸ್ತಿ ಕೊಡಲಾಗಿದೆ. ಇವರ ಹಿಂದೆ ಯಾವ ಲಾಬಿಯೂ ಕೆಲಸ ಮಾಡಿಲ್ಲ. ಇದರರ್ಥ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬದಲಾವಣೆ ಆಗುತ್ತಿದೆ ಎಂದರು.
ಓಬವ್ವ ಆತ್ಮರಕ್ಷಣಾ ಕಲೆ ಮೂಲಕ ಬಾಲಕಿಯರಿಗೆ ಕರಾಟೆ ತರಬೇತಿ ನೀಡುವುದನ್ನು ಈ ವರ್ಷದಿಂದ ಆರನೇ ತರಗತಿಯವರಿಗೂ ಕಲಿಸಲಾಗುವುದು. ಈ ಮೂಲಕ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆಯನ್ನು ಕಲಿಸಲಾಗುತ್ತಿದೆ. ಪ್ರತಿ ಮೂರನೇ ಶನಿವಾರ ಇಲಾಖೆ ವ್ಯಾಪ್ತಿಯ ಎಲ್ಲ ಶಾಲೆ-ವಿದ್ಯಾರ್ಥಿ ನಿಲಯಗಳಲ್ಲಿ ಸ್ವತ್ಛತೆ ಮಾಡಲಾಗುತ್ತಿದೆ. ಬದಲಾವಣೆ ಕಾಲಘಟ್ಟದಲ್ಲಿ ಇಲಾಖೆಯಿದೆ. ವರ್ಗಾವಣೆಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ಮಾಡುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ ಎಂದರು.
ಟೆಂಡರ್ ಇಲ್ಲದೆ, ನಿಯಂತ್ರಣ ಇಲ್ಲದೆ 1 ರಿಂದ 2 ಕೋಟಿ ರೂ.ವರೆಗೆ ಖರೀದಿ ಮಾಡುವ 4ಜಿ ವ್ಯವಸ್ಥೆಯನ್ನು ಕ್ರಮೇಣ ರದ್ದು ಮಾಡಿದ್ದೇವೆ. ಇದನ್ನು 50 ಲಕ್ಷಕ್ಕೆ ಮಿತಿಗೊಳಿಸಿ ಟೆಂಡರ್ ಇಲ್ಲದೆ ಕೆಲಸ ಮಾಡುವುದು ಬೇಡ. ಅಗತ್ಯವಿದ್ದಲ್ಲಿ ವರ್ಷದಲ್ಲಿ ಒಂದೆರಡಕ್ಕೆ ಮಾತ್ರ ಸಮಿತಿ, ಸಚಿವರ ಗಮನಕ್ಕೆ ತಂದು ಖರೀದಿಸುವ ಬಗ್ಗೆ ನಿಯಮ ರೂಪಿಸಲಾಗಿದೆ ಎಂದು ವಿವರಿಸಿದರು.
ಉಡುಪಿ ಶಾಸಕ ರಘುಪತಿ ಭಟ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ, ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಮತ್ತಿತರರಿದ್ದರು.