ಬೀದರ: ಕಾಂಗ್ರೆಸ್ ಸರ್ಕಾರ ಅಧಿಕಾರದ ದರ್ಪ, ಮದದಿಂದ ಮೆರೆಯುತ್ತಿದೆ. ದಶಕಗಳಿಂದ ಉಳಿಮೆ ಮಾಡಿಕೊಂಡು ಬಂದಿರುವ ಜಮೀನುಗಳನ್ನು ವಕ್ಫ್ ಹೆಸರಿನಲ್ಲಿ ಕಬಳಿಸಲು ಹೊರಟಿರುವ ಸರ್ಕಾರ ರೈತ ಶಾಪಕ್ಕೆ ತುತ್ತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ನಗರದ ಗಾಂಧಿ ಗಂಜ್ನಲ್ಲಿ ಬುಧವಾರ ‘ನಮ್ಮ ಭೂಮಿ- ನಮ್ಮ ಹಕ್ಕು’ ಬೃಹತ್ ಹೋರಾಟ ನಿಮಿತ್ತ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಡಿಗೆ ಅನ್ನವನ್ನು ನೀಡುವ ಕೃಷಿಕರನ್ನು ವಕ್ಫ್ ಬೋರ್ಡ್ ಮೂಲಕ ಒಕ್ಕಲೆಬ್ಬಿಸುತ್ತಿರುವ ಸಿದ್ಧರಾಮಯ್ಯ ಅವರು ತಾವು ಅಲ್ಪಸಂಖ್ಯಾತರ ಮತಗಳಿಂದ ಮುಖ್ಯಮಂತ್ರಿ ಆಗಿದ್ದರೆ ಎಂಬಂತೆ ವರ್ತಿಸುತ್ತಿದ್ದು, ಬರುವ ದಿನಗಳಲ್ಲಿ ಈ ರೈತ ವಿರೋಧಿ ಸಿಎಂಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಸಿಎಂ ಸಿದ್ಧರಾಮಯ್ಯನವರ ಆದೇಶದ ಮೇರೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಅಲ್ಲಿನ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ಕೃಷಿ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ಸೇರಿಸಿದ್ದಾರೆ. ಬಳಿಕ ರೈತರನ್ನೇ ಒಕ್ಕಲೆಬ್ಬಿಸುವ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಸಾವಿರಾರು ವರ್ಷಗಳ ಇತಿಹಾಸವುಳ್ಳ ಮಠ- ಮಂದಿರಗಳ ಆಸ್ತಿ ಮೇಲೂ ವಕ್ಫ್ ದೃಷ್ಟಿ ಹರಿಸಿ ಹಿಂದೂ ಧರ್ಮದವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ, ಕೊನೆ ಉಸಿರಿರುವವರೆಗೆ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಒಂದಾದ ಮೇಲೊಂದು ಹಗರಣಗಳನ್ನು ನಡೆಸುತ್ತಿದ್ದು, ಬಿಜೆಪಿ ಭ್ರಷ್ಟ ಆಡಳಿತದ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದೆ. ಎಸ್.ಸಿ-ಎಸ್ಟಿ ಮೀಸಲು ಹಣ, ವಾಲ್ಮೀಕಿ ನಿಗಮ ಮತ್ತು ಮೈಸೂರು ಮುಡಾ ಹಗರಣ ಹೀಗೆ ಅನೇಕ ಹಗರಣ ನಡೆಸಿದೆ. ಆರಂಭದಲ್ಲಿ ನಮ್ಮ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳುತ್ತಿದ್ದ ಸಿಎಂ, ಬಿಜೆಪಿ ಮತ್ತು ಸಾರ್ವಜನಿಕರ ಹೋರಾಟ ಭುಗಿಲೇಳುತ್ತಿದ್ದಂತೆ, ತಮ್ಮ ಸಿಎಂ ಸ್ಥಾನಕ್ಕೆ ಕುತ್ತು ಬರುವ ಆತಂಕಕ್ಕೆ ಎಲ್ಲವನ್ನು ಒಪ್ಪಿಕೊಂಡಿದ್ದಾರೆ. ನಾವು ಸರ್ಕಾರದ ತೇಜೋವಧೆ ಮಾಡುತ್ತಿಲ್ಲ, ಸರ್ಕಾರದಿಂದ ಜನರಿಗೆ ಆಗುತ್ತಿರುವ ಮೋಸಕ್ಕೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಮಾಜಿ ಡಿಸಿಎಂಗಳಾದ ಶ್ರೀರಾಮುಲು, ಅಶ್ವಥನಾರಾಯಣ, ಶಾಸಕರಾದ ಪ್ರಭು ಚವ್ಹಾಣ, ಶರಣು ಸಲಗರ್, ಸಿದ್ದು ಪಾಟೀಲ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಸಚಿವರಾದ ಭೈರತಿ ಬಸವರಾಜ, ರೇಣುಕಾಚಾರ್ಯ, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಪ್ರಮುಖರಾದ ಪಿ. ರಾಜೀವ್, ಶಶೀಲ್ ನಮೋಶಿ, ಎಂಜಿ ಮೂಳೆ, ಪ್ರಕಾಶ ಖಂಡ್ರೆ, ಬಸವರಾಜ ಮತ್ತಿಮಾಡು, ರಘುನಾಥರಾವ್ ಮಲ್ಕಾಪುರೆ ಮತ್ತು ಬಾಬು ವಾಲಿ ಮತ್ತಿತರರಿದ್ದರು.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರತದ ಪರಿಸ್ಥಿತಿಯೂ ಬಾಂಗ್ಲಾದೇಶ ನಂತೆ ಆಗಲಿದೆ: ಜಿ.ಸೋಮಶೇಖರ್ ರೆಡ್ಡಿ