ಕೊಪ್ಪಳ: ಸಾರಿಗೆ ಸಂಸ್ಥೆಗಳಿಗೆ ಹಣ ಬಾಕಿ ವಿಚಾರದಲ್ಲಿ ಬಿಜೆಪಿ ಟ್ವೀಟ್ ಮಾಡಿದ ವಿಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಗೆ ಸವಾಲು ಹಾಕಿದ್ದಾರೆ.
ಸಾರಿಗೆ ಸಂಸ್ಥೆಗಳಿಗೆ ಸರ್ಕಾರದಿಂದ 7625 ಕೋಟಿ ಹಣ ಬಾಕಿ ಬಗ್ಗೆ ಬಿಜೆಪಿ ಟ್ವೀಟ್ ಮಾಡಿತ್ತು. ಇದಕ್ಕೆ ಉತ್ತರಿಸಿದ ಸಚಿವರು, ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಅವರಿಗೆ ಏನು ತಿಳುವಳಿಕೆಯಿಲ್ಲ. ಹಾಗಾಗಿ ಅವರು ಟ್ವೀಟ್ ಮಾಡಿದ್ದಾರೆ. 2023 ರಲ್ಲಿ ನಮಗೆ ಅಧಿಕಾರ ಕೊಟ್ಟು 5900 ಕೋಟಿ ಸಾಲ ಇಟ್ಟು ಹೋಗಿದ್ದರು. ಬಿಎಂಟಿಸಿ ಹೊರತುಪಡಿಸಿ ಒಂದು ಬಸ್ ಕೂಡ ಖರೀದಿ ಮಾಡಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ 6300 ಬಸ್ ಖರೀದಿಸುವ ಪ್ರಕ್ರಿಯೆ ಆರಂಭವಾಗಿದೆ. 9000 ನೇಮಕಾತಿ ನಡೆಯುತ್ತಿದೆ. ಬಿಜೆಪಿಯಿಂದ ಹೇಳಿಸಿಕೊಳ್ಳು ಅವಶ್ಯಕತೆ ನಮಗೆ ಇಲ್ಲ ಎಂದರು.
ನಮ್ಮ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿಯವರಿಗೆ ಅವರು ನನ್ನ ಎದುರಿಗೆ ಬಂದು ಮಾತನಾಡಲು ಹೇಳಿ. ಬರಿ ಟ್ವೀಟ್ ಮಾಡುವುದನ್ನು ಬಿಟ್ಟು ಎದುರು ಬಂದು ಚರ್ಚೆ ಮಾಡಲಿ. ಇದು ನನ್ನ ನೇರ ಸವಾಲು. ಸದನದಲ್ಲಿಯೇ ಚರ್ಚೆಗೆ ಬರಲಿ. ಈಗಾಗಲೇ ಹಲವು ಬಾರಿ ಉತ್ತರ ಕೊಟ್ಟಿರುವೆ. ಸವಾಲಿಗೆ ಬಂದರೆ ಸದನದಲ್ಲೇ ಉತ್ತರ ಕೊಡುವೆ. ಶಕ್ತಿ ಯೋಜನೆಯಿಂದ ನಮ್ಮ ಇಲಾಖೆ ಆದಾಯ ಹೆಚ್ಚಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಕಾರ್ಮಿಕರಿಗೆ ಗ್ರ್ಯಾಚುಟಿ ಹಣ ಬಾಕಿ ವಿಚಾರಕ್ಕೆ ಮಾತನಾಡಿದ ಅವರು, ಕಾರ್ಮಿಕರಿಗೆ ನೀಡಬೇಕಾಗಿದ್ದ ಹಣ ಬಾಕಿಯಿದೆ. ಅದನ್ನು ಬಿಟ್ಟು ಹೋಗಿದ್ದು ಬಿಜೆಪಿಯವರು. ಆರೋಪ ಮಾಡಿದವರೇ ಆರೋಪಿಗಳು. ನಮಗೆ 1600 ಕೋಟಿ ರೂ. ಶಕ್ತಿ ಯೋಜನೆಯಡಿ ಹಣ ಬರಬೇಕು. ಸಿಎಂ ಹಣ ಕೊಡುವುದಾಗಿ ಹೇಳಿದ್ದಾರೆ ಎಂದರು.
ಸಾರಿಗೆ ನೌಕರರ ಪ್ರತಿಭಟನೆ ವಿಚಾರಕ್ಕೆ ಮಾತನಾಡಿದ ಅವರು, ಯೂನಿಯನ್ ಲೀಡರ್ ಜೊತೆ ಮಾತನಾಡಿದ್ದೇನೆ. ಅವರಿಗೆ ಕೊಡುವುದು ಕೊಡಲೇಬೇಕು ಎಂದರು.