Advertisement

ಹೆಬ್ಬಾಳದಲ್ಲಿ ಟ್ರಾಫಿಕ್‌ ಸಮಸ್ಯೆ ಕರಗದ ಹೆಬ್ಬಂಡೆ

12:14 PM Apr 11, 2018 | |

ಬೆಂಗಳೂರು: ಹೆಬ್ಟಾಳ ಅಂದರೆ ತಕ್ಷಣ ನೆನೆಪಿಗೆ ಬರುವುದು ಏರ್‌ಪೋರ್ಟ್ ರಸ್ತೆಯ ಟ್ರಾಫಿಕ್‌ ಜಾಮ್‌! ಮೇಖ್ರೀ ಸರ್ಕಲ್‌ನಿಂದ ಹೆಬ್ಟಾಳ ಮೇಲ್ಸೇತುವೆ ಒಳಗೊಂಡಂತೆ ಕೊಡಿಗೆಹಳ್ಳಿ ವೃತ್ತದ ತನಕ ಸಂಚಾರ ದಟ್ಟಣೆ ತಪ್ಪಿದ್ದಲ್ಲ.

Advertisement

ಇದು ಒಂದು ಕಡೆಯಾದರೆ ಹೆಬ್ಟಾಳ ಮೇಲ್ಸೇತುವೆ ಕೆಳಗಡೆ ನಾಗವಾರ ರಸ್ತೆಯಲ್ಲಿಯೂ ಇನ್ನಿಲ್ಲದ ಟ್ರಾಫಿಕ್‌ ಜಾಮ್‌ ಉಂಟಾಗಿರುತ್ತದೆ. ಸಂಚಾರ ಒತ್ತಡ ನಿವಾರಣೆಗೆ ಕೈಗೊಂಡ ಯಾವುದೇ ಯೋಜನೆಗಳು ಇಲ್ಲಿನ ಟ್ರಾಫಿಕ್‌ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಪೀಕ್‌ ಹವರ್‌ನಲ್ಲಂತೂ ಈ ರಸ್ತೆಯಲ್ಲಿ ತಾಸುಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿರುತ್ತವೆ.ಅಷ್ಟೊಂದು ಸಂಚಾರದ ಒತ್ತಡ ಇರುತ್ತದೆ.

ಹೆಬ್ಟಾಳ ಒಟ್ಟು 8 ಬಿಬಿಎಂಪಿ ವಾರ್ಡ್‌ಗಳನ್ನು ಹೊಂದಿದೆ. ಸಂಜಯನಗರ, ಗಂಗೇನಹಳ್ಳಿ, ಗಂಗಾನಗರ ಮತ್ತು ಜಯಚಾಮರಾಜೇಂದ್ರನಗರ ವಾರ್ಡಗಳಲ್ಲಿ ಬಿಜೆಪಿ, ರಾಧಾಕೃಷ್ಣ ಟೆಂಪಲ್‌ ಮತ್ತು ವಿಶ್ವನಾಥ ನಾಗೇನಹಳ್ಳಿ  ವಾರ್ಡ್‌ಗಳಲ್ಲಿ ಜೆಡಿಎಸ್‌, ಮನೋರಾಯನಪಾಳ್ಯ ಹಾಗೂ ಹೆಬ್ಟಾಳ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಪೊರೇಟರ್‌ಗಳು ಆಯ್ಕೆಯಾಗಿದ್ದಾರೆ.

ಕ್ಷೇತ್ರದಲ್ಲಿ ಸುಮಾರು 2.50 ಲಕ್ಷ ಮತದಾರರಿದ್ದು ಅಲ್ಪಸಂಖ್ಯಾತ ಸಮುದಾಯದವರು 65 ಸಾವಿರ, ಒಕ್ಕಲಿಗರು 40 ಸಾವಿರದಷ್ಟು ಇದ್ದಾರೆ. ನಂತರದ ಸ್ಥಾನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರದ್ದಾಗಿದೆ. ಕುರುಬರೂ ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಶ್ರೀಮಂತರು ವಾಸಿಸುವ ಸಂಜಯನಗರ, ಡಾಲರ್ಸ್‌ ಕಾಲೋನಿ, ಆರ್‌.ಟಿ.ನಗರ, ಮಧ್ಯಮ ವರ್ಗ ವಾಸಿಸುವ ಗಂಗಾನಗರ, ಗಂಗೇನಹಳ್ಳಿ, ಹೆಬ್ಟಾಳ, ಕೆಂಪಾಪುರ, ನಾಗಶೆಟ್ಟಿಹಳ್ಳಿ ಆನಂದನಗರ, ಬಡವರು-ಕಡುಬಡವರು ಚಾಮುಂಡಿನಗರ, ಪಾಪಣ್ಣ ಹಟ್ಸ್‌, ವಸಂತಪುರ ಬ್ಲಾಕ್‌ ಕೌಸರ್‌ ನಗರ ಮುಂತಾದ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

Advertisement

ಮುಖ್ಯ ರಸ್ತೆಗಳನ್ನು ಹೊರತುಪಡಿಸಿದರೆ ಕ್ಷೇತ್ರದೊಳಗಿನ ರಸ್ತೆಗಳು ಕಿರಿದಾಗಿದ್ದು ಅವುಗಳನ್ನ ವಿಸ್ತರಿಸುವ ಅಗತ್ಯವಿದೆ. ಕ್ಷೇತ್ರದ ಒಳ ಪ್ರದೇಶದಲ್ಲಿ ಬಹಳಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆಯಾದರೂ ಬೋರವೆಲ್‌ ಕೊರೆಸಿ ತೊಂದರೆ ಪರಿಹರಿಸಲಾಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣ ಆರಂಭದ ನಂತರ ಹೆಬ್ಟಾಳ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣತೊಡಗಿದೆ. ರಾಜಕೀಯವಾಗಿ ಹೇಳುವುದಾದರೇ ರಾಜಧಾನಿಯ ಇತರೆ ಕ್ಷೇತ್ರಗಳಿಗಿಂತ ಹೆಬ್ಟಾಳದ ಚುನಾವಣೆ  ಈ ಬಾರಿ ಬಹಳಷ್ಟು ಕುತೂಹಲ ಮೂಡಿಸಿದೆ.

ಬಿಜೆಪಿ ಹಾಗು ಕಾಂಗ್ರೆಸ್‌, ಜೆಡಿಎಸ್‌ ನಡುವೆ  ಪೈಪೋಟಿ ಏರ್ಪಡಲಿದೆ. 2013ರಲ್ಲಿ ಚುನಾವಣೆ ನಡೆದಾಗ ಬಿಜೆಪಿಯಿಂದ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಆಪ್ತ ಕಾರ್ಯದರ್ಶಿ ಜಗದೀಶ್‌ ಕುಮಾರ್‌ ಅವರು ಆಯ್ಕೆಯಾಗಿದ್ದರು ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ನಾರಾಯಣಸ್ವಾಮಿ ಗೆಲುವು ಸಾಧಿಸಿದ್ದರು. 

ಹಿಂದಿನ ಫ‌ಲಿತಾಂಶ
-ನಾರಾಯಣಸ್ವಾಮಿ ( ಬಿಜೆಪಿ) 60367
-ರೆಹಮಾನ್‌ ಷರೀಫ್ ( ಕಾಂಗ್ರೆಸ್‌) 41218
-ಇಸ್ಮಾಯಿಲ್‌ ಷರೀಫ್ ( ಜೆಡಿಎಸ್‌ ) 3666

ಕ್ಷೇತ್ರದ ಬೆಸ್ಟ್‌ ಏನು?: 80 ಕೋಟಿ ರೂ. ವೆಚ್ಚದಲ್ಲಿ ಹಲವು ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ. 52 ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಕಾಲುವೆ ದುರಸ್ತಿ ಪಡಿಸಲಾಗಿದೆ. 2.50 ಕೋಟಿ ರೂ. ವೆಚ್ಚದಲ್ಲಿ ಗಂಗಾನಗರ ಹೆರಿಗೆ ಆಸ್ಪತ್ರೆ ನವೀಕರಣಗೊಳಿಸಲಾಗಿದೆ. ಕುಡಿಯುವ ನೀರಿನ ಸೌಲಭ್ಯಕ್ಕಾಗಿ 110  ಬೋರ್‌ವೆಲ್‌ ಕೊರೆಸಲಾಗಿದೆ. 35 ಬಸ್‌ ಶೆಲ್ಟರ್‌ ನಿರ್ಮಿಸಲಾಗಿದೆ.ಎಲ್ಲ ವಾರ್ಡಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ?: ಹೆಬ್ಟಾಳ ಮೇಲ್ಸೇತುವೆ ಸುತ್ತಮುತ್ತ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ ಆಗುತ್ತದೆ. ಹೆಬ್ಟಾಳ ಕೆರೆಗೆ ಕಲುಷಿತ ನೀರು ಸೇರಿ ಸುತ್ತಮುತ್ತಲಿನ ಅಂತರ್ಜಲ ಮಲೀನ ಗೊಂಡಿದೆ. ಹೆಬ್ಟಾಳ ಸರ್ಕಲ್‌ ಬಳಿ ರೈಲ್ವೆ ಅಂಡರ್‌ ಪಾಸ್‌ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ನಾಗಶೆಟ್ಟಿಹಳ್ಳಿ ಮುಖ್ಯ ರಸ್ತೆಯ ಟ್ರಾಫಿಕ್‌ ನಿವಾರಣೆಗೆ ರಸ್ತೆ ವಿಸ್ತರಣೆ ಮಾಡಬೇಕಿದೆ. ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹಳ್ಳಿಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ರಸ್ತೆಗಳು ಸಮರ್ಪಕವಾಗಿಲ್ಲ.

ಕ್ಷೇತ್ರ ಮಹಿಮೆ: ಹೆಬ್ಟಾಳ ಕೆರೆಯನ್ನು 1537 ರಲ್ಲಿ ನಾಡಪ್ರಭು ಕೆಂಪೇಗೌಡ ನಿರ್ಮಿಸಿದ.ಸುಮಾರು 150 ರಿಂದ 200 ಎಕರೆಯಷ್ಟು ಕೆರೆ ವಿಸ್ತೀರ್ಣತೆ ಹೊಂದಿದೆ. ಯಶವಂತಪುರ, ಮತ್ತಿಕೆರೆ, ಹೆಬ್ಟಾಳ ಸೇರಿದಂತೆ ಅಂದಾಜು 10 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಈ ಕೆರೆ ಹೊಂದಿದೆ. ಮಾನ್ಯತಾ ಟೆಕ್‌ ಪಾರ್ಕ್‌, ಸಂಜಯನಗರದ ರಾಧಾಕೃಷ್ಣ ದೇವಸ್ಥಾನ ಆಕರ್ಷಣೆ ಸ್ಥಳಗಳು.

ಶಾಸಕರು ಏನಂತಾರೆ?: 2016ರ ಉಪಚುನಾವಣೆಯಲ್ಲಿ ಗೆದ್ದ ನಂತರ 2 ವರ್ಷಗಳ ಅವಧಿಯಲ್ಲಿ ನೂರಾರು ಕೋಟಿ ರೂಪಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಶಾಸಕರ ಅನುದಾನದಲ್ಲಿ ಹೆಬ್ಟಾಳ ರೈಲ್ವೆ ಅಂಡರ್‌ ಪಾಸ್‌ ನಿರ್ಮಾಣ ಕೈಗೆತ್ತಿಕೊಳ್ಳಲಗಿದೆ.ಸಾರ್ವಜನಿಕ ಸ್ಥಳಗಳಲ್ಲಿ 175 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜಲಮಂಡಳಿ ಹಾಗು ಬೆಸ್ಕಾಂ ನಿಂದ ಸುಮಾರು 25 ಕೋಟಿರೂ ವೆಚ್ಚದ ಕಾಮಗಾರಿ ಮಾಡಿಸಲಾಗಿದೆ. 8 ರಿಂದ 10 ಕಡೆ ಸಾರ್ವಜನಿಕ ಪ್ರದೇಶಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ.ಹತ್ತಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ.

ಟಿಕೆಟ್‌ ಆಕಾಂಕ್ಷಿಗಳು
-ಕಾಂಗ್ರೆಸ್‌- ಬೈರತಿ ಸುರೇಶ್‌, ರೆಹಮಾನ್‌ ಷರೀಫ್
-ಬಿಜೆಪಿ- ವೈ.ಎ.ನಾರಾಯಣಸ್ವಾಮಿ (ಘೊಷಣೆಯಾಗಿದೆ)
-ಜೆಡಿಎಸ್‌- ಹನುಮಂತೇಗೌಡ ( ಘೋಷಣೆಯಾಗಿದೆ)

ಜನ ದನಿ
ರಸ್ತೆ ಅಭಿವೃದ್ಧಿಗೆ ಮತ್ತಷ್ಟು ಗಮನಹರಿಸುವ ಅಗತ್ಯವಿದೆ. ನಾಗಶೆಟ್ಟಿಹಳ್ಳಿ ಮುಖ್ಯರಸ್ತೆ ಟ್ರಾಫಿಕ್‌ನಿಂದ ಕೂಡಿದ್ದು ರಸ್ತೆ ವಿಸ್ತರಿಸುವ ಅವಶ್ಯಕತೆಯಿದೆ.
-ಸೈಫ‌ುದ್ದೀನ್‌

ಕ್ಷೇತ್ರದಲ್ಲಿ ಹೆಚ್ಚಿನ ತೊಂದರೆಗಳಿಲ್ಲ, ರಸ್ತೆ, ಕುಡಿವ ನೀರಿನ ಸೌಲಭ್ಯ ಉತ್ತಮವಾಗಿದೆ.ಬೀದಿ ದೀಪಗಳಿಗೆ ಎಲ್‌.ಇ.ಡಿ  ದೀಪ ಅಳವಡಿಸುತ್ತಿರುವುದು ಸಂತಸ ತಂದಿದೆ. 
-ಕೃಷ್ಣಪ್ಪ

ಅಭಿವೃದ್ಧಿ ಕೆಲಸಗಳು ಆಗಿವೆ. ನಮ್ಮ ಪ್ರದೇಶದಲ್ಲಿ ಮೋರಿ ಸಮಸ್ಯೆಯಿತ್ತು ಅದನ್ನ ಬಗೆಹರಿಸಲಗಿದೆ. ಈ ಹಿಂದೆ ಕುಡಿವ ನೀರಿನ ತೊಂದರೆ ಇತ್ತು ಬೋರ್‌ವೆಲ್‌ ಕೊರೆದು ಸ್ಪಂದಿಸಿದ್ದಾರೆ.
-ಭಾಗ್ಯವತಿ

ನಾಗವಾರ ಬಳಿ ಟ್ರಾಫಿಕ್‌ ಸಮಸ್ಯೆ ತೀವ್ರವಾಗಿದೆ.ಏರಪೋರ್ಟ್‌ ರಸ್ತೆಯಲ್ಲೂ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಸಮಸ್ಯೆಗೆ ಪರಿಹಾರವನ್ನು ಜನಪ್ರತಿನಿಧಿಗಳು ಹುಡುಕಬೇಕಾಗಿದೆ.
-ತಿಮ್ಮಯ್ಯ ಆಚಾರ್‌

* ಸೋಮಶೇಖರ ಕವಚೂರು

Advertisement

Udayavani is now on Telegram. Click here to join our channel and stay updated with the latest news.

Next