ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಉದ್ಯಮಿಯೂ ಆದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಕ್ಕೆ ವರ್ಗಾಯಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶಿಸಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳು ಇತ್ತೀಚೆಗೆ ಮಹಿಳಾ ಉದ್ಯಮಿ ಜೀವಾರನ್ನು ವಿಚಾರಣೆ ನಡೆಸಿದ್ದರು. ಇದರ ಬೆನ್ನಲ್ಲೇ ನ.22ರ ಮುಂಜಾನೆ ಜೀವಾ 13 ಪುಟಗಳ ಡೆತ್ನೋಟ್ ಬರೆದಿಟ್ಟು ರಾಘವೇಂದ್ರ ಲೇಔಟ್ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಸಂಬಂಧ ಮೃತರ ಸಹೋದರಿ ಸಂಗೀತಾ ಅಕ್ಕ ಜೀವಾಗೆ ವಿಚಾರಣೆ ನೆಪದಲ್ಲಿ ಸಿಐಡಿ ತನಿಖಾಧಿಕಾರಿ ಡಿವೈಎಸ್ಪಿ ಕನಕಲಕ್ಷ್ಮೀ ಚಿತ್ರಹಿಂಸೆ ನೀಡಿದ್ದಾರೆ. 25 ಲಕ್ಷ ರೂ.ಗೆ ಬೇಡಿಕೆ ಇರಿಸಿದ್ದಾರೆ. ಜತೆಗೆ ಆಕೆಯನ್ನು ವಿವಸ್ತ್ರ ಗೊಳಿಸಿ ಸೈನೆಡ್ ತಿಂದಿದ್ದಿರಾ ಎಂದು ಅವಮಾನಿಸಿ ದ್ದರು. ಅದರಿಂದ ಮನನೊಂದು ಹಾಗೂ ಅವಮಾನ ಸಹಿಸಲಾಗದೆ ಅಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಬನಶಂಕರಿ ಠಾಣೆ ಪೊಲೀಸರು, ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಜೀವಾ ಆತ್ಮಹತ್ಯೆ ಪ್ರಕರಣವನ್ನು ಸಿಸಿಬಿ ತನಿಖೆಗೆ ಆದೇಶಿಸಿದ್ದಾರೆ. ಎಸಿಪಿ ಮಟ್ಟದ ಅಧಿಕಾರಿ ಈ ಪ್ರಕರಣದ ತನಿಖೆ ನಡೆಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ. ಈಗಾಗಲೇ ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಬನಶಂಕರಿ ಠಾಣೆ ಪೊಲೀಸರು ಸಿಸಿಬಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಜೀವಾ ಪೀಣ್ಯ ಕೈಗಾರಿಕಾ ಪ್ರದೇ ಶ ದಲ್ಲಿ ವುಡ್ ಮೆಟೀರಿಯಲ್ಸ್ ತಯಾರಿಕಾ ಕಂಪನಿ ಹೊಂದಿದ್ದರು. ಭೋವಿ ಅಭಿವೃದ್ಧಿ ನಿಗಮಕ್ಕೆ ವುಡ್ ಮೆಟೀರಿಯಲ್ಸ್ ಸರಬರಾಜು ಮಾಡಿದ್ದರು. ಹೀಗಾಗಿ ಅವರ ಖಾತೆಗೆ ಭೋವಿ ನಿಗಮ ದಿಂದ ಭಾರೀ ಹಣ ವರ್ಗಾವಣೆ ಯಾಗಿತ್ತು. ಈ ನಡುವೆ ನಿಗಮದ ಹಗರಣವನ್ನು ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ತನಿಖಾಧಿಕಾರಿಗಳು ಜೀವಾಗೆ ನೋಟಿಸ್ ನೀಡಿ ಹಣ ವರ್ಗಾ ವಣೆ ಬಗ್ಗೆ ವಿಚಾರಣೆ ನಡೆಸಿದ್ದರು. ವಿಚಾರಣೆ ಬೆನ್ನಲ್ಲೇ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.