ಬೆಂಗಳೂರು: ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಪ್ರಯಾಣಕ್ಕೆ ಸಮೂಹ ಸಾರಿಗೆಯನ್ನು ಹೆಚ್ಚು ಬಳಸಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ವತಿಯಿಂದ ಮೆಜೆಸ್ಟಿಕ್‌ನಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಸಾರ್ವಜನಿಕ ಸಾರಿಗೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸಬೇಕಾದರೆ, ಸಾರ್ವಜನಿಕರು ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡಿ ಸಮೂಹ ಸಾರಿಗೆಗಳಾದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ಮೆಟ್ರೋ ರೈಲುಗಳ ಬಳಕೆ ಹೆಚ್ಚು ಮಾಡಬೇಕು. ಇಲ್ಲವಾದರೆ, ನಗರದಲ್ಲಿ ವಾಹನ ಸಂಚಾರ ದಟ್ಟಣೆ ಸಮಸ್ಯೆ ನಿಯಂತ್ರಣ ಕಷ್ಟವಾಗುತ್ತದೆ ಎಂದರು.
ನಗರದಲ್ಲಿರುವ ವಾಹನಗಳ ಪೈಕಿ ಸುಮಾರು ಶೇ.77ರಷ್ಟು ದ್ವಿಚಕ್ರ ವಾಹನಗಳಿವೆ. ಬಹಳಷ್ಟು ಜನರು ಪ್ರಯಾಣಕ್ಕೆ ಕಾರು, ದ್ವಿಚಕ್ರ ವಾಹನ ಸೇರಿ ಖಾಸಗಿ ವಾಹನಗಳನ್ನು ಅವಲಂಬಿಸಿ¨ªಾರೆ. ಬಡವರು ಬಹುತೇಕ ಪ್ರಯಾಣಕ್ಕೆ ಸಮೂಹ ಸಾರಿಗೆ ಬಳಸುತ್ತಾರೆ. ಶ್ರೀಮಂತರು, ಸ್ಥಿತಿವಂತರು ತಮ್ಮ ಖಾಸಗಿ ವಾಹನಗಳ ಬದಲಾಗಿ ಸಮೂಹ ಸಾರಿಗೆ ಬಳಕೆ ಮಾಡಬೇಕು. ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡುವುದರಿಂದ ನಗರದಲ್ಲಿ ಸಂಚಾರ ದಟ್ಟಣೆ ಮಾತ್ರವಲ್ಲದೆ, ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಕೂಡ ಕಡಿಮೆ ಆಗಲಿದೆ. ರಸ್ತೆ ಅಪಘಾತಗಳು ಕಡಿಮೆಯಾಗಲಿವೆ ಎಂದು ಹೇಳಿದರು.
ಇದೇ ವೇಳೆ ವಿಶ್ವ ಸಾರ್ವಜನಿಕ ಸಾರಿಗೆ ದಿನದ ಪ್ರಯುಕ್ತ ಸಮೂಹ ಸಾರಿಗೆ ಬಳಸುವ ಸಾರ್ವಜನಿಕರಿಗೆ ಗುಲಾಬಿ ಹೂವು ನೀಡಿ ಶುಭ ಕೋರಲಾಯಿತು. ಅಂತೆಯೆ ಕನ್ನಡ ಬಳಸಿ, ಕನ್ನಡ ಉಳಿಸಿ ಎಂಬ ಕನ್ನಡ ಜಾಗೃತಿ ಕರಪತ್ರ ವಿತರಿಸಲಾಯಿತು. ಖಾಸಗಿ ಸಂಚಾರ ಮಿತಗೊಳಿಸಿ, ಸಾರ್ವಜನಿಕ ಸಾರಿಗೆ ಉತ್ತೇಜಿಸಿ ಎಂದು ಪ್ರತಿಜ್ಞಾವಿಧಿ ಭೋದಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್, ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ.ಹದ್ದಣ್ಣನವರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಕುಮಾರ್, ಬಿಎಂಟಿಸಿ ಡಿಎಂಇ ವಿಲ್ಸನ್ ಹಾಗೂ ಇತರರು ಇದ್ದರು. ಬಳಿಕ ನಗರ ಪೊಲೀಸ್ ಆಯುಕ್ತರೂ ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ಮೆಟ್ರೋದಲ್ಲಿ ಪ್ರಯಾಣಿಸಿ ಜಾಗೃತಿ ಮೂಡಿಸಿದರು.