ಕಡೆಯುವ ಕಲ್ಲಿನಲ್ಲಿ ಅಕ್ಕಿ ರುಬ್ಬುವುದನ್ನು ನೋಡಿದ್ದೀರಾ? ಕಡೆಗಲ್ಲಿನಲ್ಲಿ ಕಲ್ಲಿನ ಗುಂಡು ಗುಳಿಯೊಳಕ್ಕೆ ಬಿದ್ದ ಅಕ್ಕಿಯನ್ನು ಪುಡಿ ಪುಡಿ ಮಾಡುತ್ತದೆ, ಅದರ ಸುತ್ತುಗಳಿಂದ ಪಾರಾಗಿ ಬದಿಗೆ ಸರಿಯುವ ಅಕ್ಕಿ ಕಾಳುಗಳನ್ನು ಕಡೆಯುವವರ ಕೈ ಗುಳಿಯೊಳಕ್ಕೆ ತಳ್ಳುತ್ತದೆ. ತಪ್ಪಿಸಿಕೊಳ್ಳುವುದು ಶಕ್ಯವೇ ಇಲ್ಲ. ಎಲ್ಲ ಕಾಳುಗಳು ಕೂಡ ರುಬ್ಬಲ್ಪಟ್ಟು ನುಣ್ಣಗಾಗುತ್ತವೆ.
ಈ ಬದುಕು ಕೂಡ ಹಾಗೆಯೇ. ನಾವು ರುಬ್ಬುವ ಕಲ್ಲಿಗೆ ಬಿದ್ದ ಕಾಳುಗಳಂತೆ. ಕಡೆಯುವುದು ವಿಧಿ ಎನ್ನಲು ಅಡ್ಡಿಯಿಲ್ಲ. ಏಳುಬೀಳುಗಳು, ಸುಖ-ದುಃಖಗಳು, ಚಿಂತೆ, ಸಮೃದ್ಧಿ, ಸುಭಿಕ್ಷೆ, ನೋವು ನಲಿವುಗಳು ಕಲ್ಲುಗುಂಡಿನ ಸುತ್ತುಗಳಂತೆ ಬಂದೇ ಬರುತ್ತವೆ. ನನಗಿದು ಬೇಡ, ಅದು ಮಾತ್ರ ಬೇಕು ಎನ್ನುವುದು ಅಸಾಧ್ಯ. ನೋವು ಮತ್ತು ನಲಿವುಗಳನ್ನು ಅನುಭವಿಸುವುದು ಅನಿವಾರ್ಯ. ಹಿಗ್ಗದೆ ಕುಗ್ಗದೆ ಬದುಕಬೇಕು.
ಬದುಕಿನಲ್ಲಿ ನಾವು ಚಪಾತಿಯ ಹಿಟ್ಟಿನಂತಿರ ಬೇಕು ಎನ್ನುತ್ತಾರೆ ಮಹರ್ಷಿ ಅರವಿಂದರು. ಅಡುಗೆ ಮನೆ ಯಲ್ಲಿ ಚಪಾತಿ ಹಿಟ್ಟು ನಾದು ವುದನ್ನು ನೆನಪಿಸಿಕೊಳ್ಳಿ. ಗೋಧಿ ಹಿಟ್ಟಿಗೆ ನೀರು ಮಿಶ್ರ ಮಾಡಿ ಹಿಟ್ಟನ್ನು ಎಷ್ಟು ಚೆನ್ನಾಗಿ ನಾದು ತ್ತೇವೆಯೋ ಚಪಾತಿ ಅಷ್ಟು ಚೆನ್ನಾಗಿರುತ್ತದೆ. ನಾದುವ ಕೈಗಳು ಹೇಳಿದಂತೆ ಹಿಟ್ಟು ಕೇಳುತ್ತದೆ, ನಮ್ಯವಾಗಿರುತ್ತದೆ. ಅದನ್ನು ನಾವು ಹಿಂಡುತ್ತೇವೆ, ಹಿಚುಕುತ್ತೇವೆ, ತಟ್ಟುತ್ತೇವೆ… ಕೊನೆಯಲ್ಲಿ ಮೃದುವಾದ, ಉಬ್ಬಿದ ಚಪಾತಿಯಾಗಲು ಹಿಟ್ಟು ಸಿದ್ಧವಾಗುತ್ತದೆ.
ಬದುಕು ನೋವು-ನಲಿವು, ಏಳು-ಬೀಳು ಗಳೆರಡನ್ನೂ ಹೊತ್ತು ತರುತ್ತದೆ. ಯಾವುದರಿಂದಲೂ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ನಾದುವ ಕೈಗಳಿಗೆ ಚಪಾತಿಯ ಹಿಟ್ಟು ಒಡ್ಡಿಕೊಂಡಂತೆ ನಾವೂ ನಮ್ಯವಾಗಿ, ವಿನಮ್ರ ವಾಗಿ ಬದುಕಿಗೆ ಒಡ್ಡಿಕೊಳ್ಳಬೇಕು. ಸಂಪೂರ್ಣವಾಗಿ ಶರಣಾಗಬೇಕು. ಪರಿಪೂರ್ಣತೆಗೆ ಸಿದ್ಧವಾಗಿರುವುದು, ಆಗು ವುದೆಲ್ಲವೂ ಒಳ್ಳೆಯದಕ್ಕೇ ಎನ್ನುವ ವಿಶ್ವಾಸ ದಿಂದ ಇರುವುದೇ ಬದುಕಿನ ಮೂಲಮಂತ್ರ. “ಒಡ್ಡಿಕೊಳ್ಳುವುದು’ ಎನ್ನುವ ಪದ ನಾವು ಹೇಗಿರಬೇಕು ಎನ್ನುವುದನ್ನು ಸುಂದರವಾಗಿ ಹೇಳುತ್ತದೆ. ಸಂತೋಷ ಅಥವಾ ದುಃಖ – ಎರಡರಿಂದಲೂ ಆಚೆಗೆ ನಿಂತು ಎಲ್ಲವನ್ನೂ ಸ್ವೀಕರಿಸಬೇಕು. ಸೆಟೆದು ನಿಂತರೆ, ವಿರೋಧಿ ಸಿದರೆ, ಅಯ್ಯೋ ನನಗೆಷ್ಟು ಕಷ್ಟ ಎಂದು ಕೊಂಡರೆ, ಹತಾಶರಾದರೆ ನೋವು, ದುಮ್ಮಾನ ಹೆಚ್ಚುತ್ತದೆ. ನಮ್ಮನ್ನು ಇವಕ್ಕೆಲ್ಲ ಗುರಿಪಡಿಸಿದ ಪರಮಾತ್ಮನ ಉದ್ದೇಶ ನಮ್ಮನ್ನು ಉತ್ಕೃಷ್ಟಗೊಳಿಸುವುದೇ ಆಗಿದೆ ಎಂಬ ಅರ್ಪಣಾ ಮನೋಭಾವದಿಂದ ಬದುಕು ಸುಲಭ ವಾಗುತ್ತದೆ, ಸಹ್ಯವಾಗುತ್ತದೆ. ತಿದ್ದಿ ತೀಡಿದ ಬದುಕು ಎನ್ನುವುದು ಇದನ್ನೇ.
ಬದಲಾವಣೆ, ಪರಿವರ್ತನೆ ಜಗದ ನಿಯಮ. ಇದು ವಸ್ತು ಮಾತ್ರವಲ್ಲದೆ ಮಾನವ ಬದುಕಿನಲ್ಲೂ ಮಹತ್ತರ ಪರಿಣಾಮ ಬೀರುತ್ತದೆ. ಕಾಳು ಹಿಟ್ಟಾಗುವಂತೆ, ಹಿಟ್ಟು ರೊಟ್ಟಿಯೋ ಚಪಾತಿಯೋ ಆಗುವಂತೆ ಎಲ್ಲವೂ ಬದಲಾ ಗುತ್ತದೆ. ಆ ಬದಲಾವಣೆ ಉತ್ಕೃಷ್ಟತೆಗೆ ಎಂಬ ವಿಶ್ವಾಸವಿಡೋಣ. ನಮ್ಮ ಬದುಕಿನಲ್ಲಾಗುವ ಬದಲಾವಣೆ ನಮ್ಮನ್ನು ಔನ್ನತ್ಯದತ್ತ ಕೊಂಡೊಯ್ಯುತ್ತದೆ.
ಇದನ್ನೇ ಪುಟಕ್ಕಿಟ್ಟ ಚಿನ್ನ ಎನ್ನುವುದು. ಅದಿರು ಮೂಸೆಯಲ್ಲಿ ಕರಗಿ ಕಶ್ಮಲಗಳನ್ನು ಕಳೆದುಕೊಂಡರಷ್ಟೇ ಅಪ್ಪಟ ಚಿನ್ನ ಸಿಗುತ್ತದೆ. ಕಬ್ಬಿಣವನ್ನು ಕಾಯಿಸಿ, ಬಡಿದು ಹತ್ಯಾರು ಗಳನ್ನು ತಯಾರಿಸುತ್ತಾರೆ. ಕಗ್ಗಲ್ಲನ್ನು ಚಾಣ ದಿಂದ ಕುಟ್ಟಿ, ಕೆತ್ತಿದರಷ್ಟೇ ಸುಂದರ ಮೂರ್ತಿ ಯಾಗಿಸಲು ಸಾಧ್ಯ. ಬದುಕು ಎದುರಿಗಿಟ್ಟ ದ್ದನ್ನು ಅನುಭವಿಸುತ್ತ ನಾವೂ ಪುಟಕ್ಕಿಟ್ಟ ಬಂಗಾರವಾಗೋಣ, ಜೀವನದ ಏಟುಗಳನ್ನು ಉಣ್ಣುತ್ತ ಸುಂದರ ಪ್ರತಿಮೆಗಳಾಗೋಣ.
(ಸಂಗ್ರಹ)