Delhi Election 2025: ರಾಷ್ಟ್ರರಾಜಧಾನಿ ದೆಹಲಿ ಹೊಸ ವರ್ಷದಲ್ಲಿ ಚುನಾವಣೆಗೆ ಸಜ್ಜಾಗುತ್ತಿದ್ದು, ದೆಹಲಿ ರಾಜಕೀಯ ಭೂಮಿಕೆ ಇದೀಗ ಮಿತಿಮೀರಿದ ಹಣದುಬ್ಬರ ಮತ್ತು ಭ್ರಷ್ಟಾಚಾರದ ವಿಷಯವನ್ನು ಹೊರತುಪಡಿಸಿ ಹಿಂದುತ್ವವೇ ಪ್ರಧಾನ ಅಸ್ತ್ರವಾದಂತಿದೆ. ಗಗನಕ್ಕೇರಿದ ಈರುಳ್ಳಿ ಬೆಲೆ ಹಾಗೂ ಹಣದುಬ್ಬರದ ಕಾರಣದಿಂದಾಗಿಯೇ ಭಾರತೀಯ ಜನತಾ ಪಕ್ಷ ಅಧಿಕಾರ ಕಳೆದುಕೊಳ್ಳುವಂತಾಗಿತ್ತು. ಇದು ಕಾಂಗ್ರೆಸ್ ಗದ್ದುಗೆ ಏರಲು ಹಾದಿ ಮಾಡಿಕೊಟ್ಟಿತ್ತು. ಸುಮಾರು 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪದಿಂದ ಅಧಿಕಾರ ಕಳೆದುಕೊಂಡಿತ್ತು. ಆ ಬಳಿಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೇರಿದ್ದು, ಬಿಜೆಪಿ-ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಇದೀಗ ಮುಂಬರಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಆಪ್ ನಡುವೆ ನಡೆಯುತ್ತಿರುವ ಕದನದ ಕುರಿತು ಡಿಎನ್ ಎ ಮತ್ತು ಜೀ ನ್ಯೂಸ್ ನ ವಿಶ್ಲೇಷಣೆ ಇಲ್ಲಿದೆ….
ದೆಹಲಿ ರಾಜಕಾರಣ ಹೇಗಿದೆ?
ಅಭಿವೃದ್ಧಿ ಕಾರ್ಯಸೂಚಿ ಮತ್ತು ಉಚಿತ ಕೊಡುಗೆಗಳ ಮೂಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (AAP) ದೆಹಲಿ ಅಧಿಕಾರದ ಗದ್ದುಗೆ ಏರಿತ್ತು. ಕಳೆದ ಒಂದು ದಶಕಗಳಿಂದ ಆಮ್ ಆದ್ಮಿ ಪಕ್ಷ ರಾಜಧಾನಿಯ ಅಧಿಕಾರವನ್ನು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದೆ. ಆದರೆ ಮೊತ್ತ ಮೊದಲ ಬಾರಿಗೆ ದೆಹಲಿ ರಾಜಕಾರಣದಲ್ಲಿ ಹಿಂದುತ್ವವೇ ಪ್ರಧಾನ ಅಂಶವಾಗಿ ಬಿಂಬಿಸಲ್ಪಟ್ಟಿದೆ.
ರೋಹಿಂಗ್ಯಾಗಳಿಗೆ ಆಶ್ರಯ ಕಲ್ಪಿಸುವ ಕೇಜ್ರಿವಾಲ್ ನೀತಿಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಆಪ್ ಸರ್ಕಾರ ಅಕ್ರಮ ವಲಸಿಗರಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದೆ. ಆದರೆ ಕೇಜ್ರಿವಾಲ್ ಭಗವಾನ್ ಶ್ರೀರಾಮ ಮತ್ತು ಹನುಮಾನ್ ಬಗ್ಗೆ ತಮಗೆ ಇರುವ ಪೂಜ್ಯ ಭಾವನೆ ತೋರ್ಪಡಿಸುವ ಮೂಲಕ ತಿರುಗೇಟು ನೀಡಿದ್ದು, ಹಿಂದೂ ಪುರೋಹಿತರಿಗೆ ಮತ್ತು ಸಿಖ್ ಧಾರ್ಮಿಕ ಮುಖಂಡರಿಗೆ ಮಾಸಾಶನ ನೀಡುವುದಾಗಿ ಘೋಷಿಸಿರುವುದು ಆಪ್ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ.
ಹಿಂದುತ್ವದ ಜಪ…
ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಮರಳಿದರೆ ದೇವಾಲಯ ಮತ್ತು ಗುರುದ್ವಾರದ ಅರ್ಚಕರಿಗೆ ತಲಾ 18,000 ಭತ್ಯೆ ನೀಡುವುದಾಗಿ ಕೇಜ್ರಿವಾಲ್ ಘೋಷಿಸಿದ್ದು, ಇದು ರಾಜಕೀಯದ ಗೇಮ್ ಚೇಂಜರ್ ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಏತನ್ಮಧ್ಯೆ ಕೇಜ್ರಿವಾಲ್ ಅವರ ಹಿಂದುತ್ವದ ಪ್ರತಿಪಾದನೆಗೆ ಭಾರತೀಯ ಜನತಾ ಪಕ್ಷ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಬಿಜೆಪಿ ಪತ್ರಿಕಾಗೋಷ್ಠಿ ನಡೆಸಿ ಯೋಜನೆಯನ್ನು ಟೀಕಿಸಿದ್ದಲ್ಲದೇ ಕನೌಟ್ ಸ್ಥಳದಲ್ಲಿರುವ ಹನುಮಾನ್ ದೇವಾಲಯದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿತ್ತು. ಇದರೊಂದಿಗೆ ಅಚ್ಚರಿಯ ಟ್ವಿಸ್ಟ್ ಎಂಬಂತೆ ಭಾರತೀಯ ಜನತಾ ಪಕ್ಷ ಇಮಾಮ್ ಗಳ ನಿರ್ಲಕ್ಷ್ಯದ ಬಗ್ಗೆ ಧ್ವನಿ ಎತ್ತಿ ಕಳವಳ ವ್ಯಕ್ತಪಡಿಸಿತ್ತಲ್ಲದೇ ಇದು ಸಂಕೀರ್ಣ ರಾಜಕೀಯದ ಸಂಕೇತದ ಕಾರ್ಯತಂತ್ರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಕ್ರಮ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಯರು ರಾಜಧಾನಿಯಲ್ಲಿ ನೆಲೆಸಿರುವ ವಿಚಾರದಲ್ಲಿ ಕೇಜ್ರಿವಾಲ್ ಅವರನ್ನು ಹಣಿಯುವ ಪ್ರಯತ್ನವನ್ನು ಬಿಜೆಪಿ ಮುಂದುವರಿಸಿದೆ. ಆದರೆ ಈ ವಿಷಯ ಬಿಜೆಪಿಗೆ ಹೆಚ್ಚು ಲಾಭ ತಂದುಕೊಡುವಲ್ಲಿ ವಿಫಲವಾಗಿದೆ. ಏತನ್ಮಧ್ಯೆ ಇಬ್ಬರು ಅಕ್ರಮ ಬಾಂಗ್ಲಾ ವಲಸಿಗರನ್ನು ಕಟ್ವಾರಿಯಾ ಸರಾಯ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಆದರೆ ಈ ವಿಚಾರ ಹೆಚ್ಚಾಗಿ ಸಾರ್ವಜನಿಕರ ಗಮನ ಸೆಳೆಯಲಿಲ್ಲ.
ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆಯೂ ಆಮ್ ಆದ್ಮಿ ಪಕ್ಷ ಹಿಂದುತ್ವ ಬಗ್ಗೆಯೇ ಹೆಚ್ಚು ಆದ್ಯತೆ ನೀಡತೊಡಗಿದೆ. ಈ ವಿಷಯ ಕೇಜ್ರಿವಾಲ್ ಅವರ ರಾಜಕೀಯವಾಗಿ ಮುನ್ನಡೆ ಸಾಧಿಸುವಂತೆ ಮಾಡಿದೆ. ಈ ಹಿಂದಿನ ಚುನಾವಣೆ ಹಣದುಬ್ಬರ ಮತ್ತು ಭ್ರಷ್ಟಾಚಾರದ ವಿಷಯ ಪ್ರಮುಖವಾಗಿತ್ತು. ಆದರೆ ಈ ಬಾರಿಯ ಚುನಾವಣೆ ಹಿಂದುತ್ವಕ್ಕೆ ಮಹತ್ವ ನೀಡಿದ್ದು, ರಾಜಕೀಯ ಲೆಕ್ಕಾಚಾರದ ಪ್ರಕಾರ ಕೇಜ್ರಿವಾಲ್ ಮುನ್ನಡೆ ಸಾಧಿಸಿರುವುದಾಗಿ ವಿಶ್ಲೇಷಿಸಲಾಗುತ್ತಿದೆ.