ಹೊಸ ವರ್ಷದ ಆಗಮನದ ಸಂಭ್ರಮದಲ್ಲಿದ್ದ ಅಮೆರಿಕದಲ್ಲಿ ಕಳೆದ 27 ಗಂಟೆಗಳಲ್ಲಿ ಬರೋಬ್ಬರಿ 3 ಭಯೋ*ತ್ಪಾದಕ ದಾಳಿ ನಡೆದಿದ್ದು, ಇದು ಉ*ಗ್ರ ಕೃತ್ಯ ಮುಂದುವರಿಯುವ ಭಾಗವೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿರುವುದಾಗಿ ವರದಿ ತಿಳಿಸಿದೆ.
2025ರ ಸಂಭ್ರಮದ ನಡುವೆಯೇ ಅಮೆರಿಕದ ನೆಲದಲ್ಲಿ ಕನಿಷ್ಠ ಮೂರು ಭಯೋ*ತ್ಪಾದಕ ದಾಳಿ ನಡೆದಿದ್ದು, ಘಟನೆಯಲ್ಲಿ ಒಟ್ಟಾರೆ 16 ಮಂದಿ ಕೊನೆಯುಸಿರೆಳೆದಿದ್ದು, ಹಲವು ಜನರು ಗಾಯಗೊಂಡಿದ್ದಾರೆ.
ಮೊದಲ ದಾಳಿ ನಡೆದದ್ದು ಬುಧವಾರ (ಜನವರಿ 01), ಐಸಿಸ್ ಉ*ಗ್ರಗಾಮಿ ಸಂಘಟನೆಯಿಂದ ಪ್ರೇರಿತಗೊಂಡ ದುಷ್ಕರ್ಮಿ ಜನರ ಗುಂಪಿನ ಮೇಲೆ ಟ್ರಕ್ ಹರಿಸಿ, ಗುಂಡಿನ ಸುರಿಮಳೆಗೈದಿದ್ದ. ಇದೊಂದು ಭಯೋ*ತ್ಪಾದಕ ಕೃತ್ಯವೇ ಎಂಬ ಬಗ್ಗೆ ಎಫ್ ಬಿಐ ತನಿಖೆ ನಡೆಸುತ್ತಿದೆ ಎಂದು ವರದಿ ವಿವರಿಸಿದೆ.
ಇದಾದ ಒಂದು ಗಂಟೆಯ ಅಂತರದಲ್ಲಿ ಲಾಸ್ ವೇಗಾಸ್ ನಲ್ಲಿ ಟ್ರಂಪ್ ಟವರ್ ಹೋಟೆಲ್ ಸಮೀಪ ಟೆಸ್ಲಾ ಸೈಬರ್ ಟ್ರಕ್ ಸ್ಫೋಟಗೊಂಡಿದ್ದು, ವ್ಯಕ್ತಿಯೊಬ್ಬ ಹಲವು ಅಡಿಗಳಷ್ಟು ದೂರ ಸಿಡಿದು ಹೋಗಿ ಸಾವನ್ನಪ್ಪಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆ ಬಳಿಕ ಬುಧವಾರ ರಾತ್ರಿ ನ್ಯೂಯಾರ್ಕ್ ನೈಟ್ ಕ್ಲಬ್ ನಲ್ಲಿ ಶೌಟೌಟ್ ನಡೆದಿದ್ದು, ಘಟನೆಯಲ್ಲಿ ಹತ್ತು ಮಂದಿ ಗಾಯಗೊಂಡಿದ್ದು, ಘಟನೆ ಕುರಿತ ವಿವರ ಇನ್ನೂ ಅಸ್ಪಷ್ಟವಾಗಿದೆ. ಸೈಬರ್ ಟ್ರಕ್ ಬ್ಲಾಸ್ಟ್, ನ್ಯೂ ಓರ್ಲೆಯನ್ಸ್ ಹಾಗೂ ನ್ಯೂಯಾರ್ಕ್ ನೈಟ್ ಕ್ಲಬ್ ನಲ್ಲಿ ನಡೆದ ಘಟನೆಗಳು ಕಾಕತಾಳೀಯವೇ ಅಥವಾ ಇದು ಭಯೋ*ತ್ಪಾದಕ ಕೃತ್ಯದ ಭಾಗವೇ ಎಂಬ ಬಗ್ಗೆ ಎಫ್ ಬಿಐ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ನಡುವೆಯೇ ಊಹಾಪೋಹಗಳು ಹರಿದಾಡತೊಡಗಿರುವುದಾಗಿ ವರದಿ ತಿಳಿಸಿದೆ.
ಅಮೆರಿಕದಾದ್ಯಂತ ನಡೆದಿರುವ ಭಯೋ*ತ್ಪಾದಕ ಘಟನೆಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅಟ್ಲಾಂಟಾ ಮೂಲದ ಸಿಯಾನ್ ಹ್ಯಾಸ್ಟಿಂಗ್ಸ್ ತಿಳಿಸಿದ್ದು, ಒಂದು ವೇಳೆ ಲಾಸ್ ವೇಗಾಸ್ ಬಾಂಬ್ ಘಟನೆ ಐಸಿಸ್ ಗೆ ಸಂಬಂಧಪಟ್ಟಿದ್ದರೆ ನಾವು ದೊಡ್ಡ ಗಂಡಾಂತರದಲ್ಲಿ ಸಿಲುಕಿಕೊಂಡಿದ್ದೇವೆ ಎಂದು ಭಾವಿಸಬೇಕು ಎಂಬುದಾಗಿ ಕಳವಳ ವ್ಯಕ್ತಪಡಿಸಿದೆ.
ಒಂದೇ ಏಜೆನ್ಸಿಯಿಂದ ಬಾಡಿಗೆಗೆ ಖರೀದಿಸಿದ್ದ ವಾಹನಗಳು!
ಹೌದು ಟ್ರಂಪ್ ಹೋಟೆಲ್ ಮುಂಭಾಗ ಸಂಭವಿಸಿದ ಟೆಸ್ಲಾ ಸೈಬರ್ ಟ್ರಕ್ ಸ್ಫೋಟ ಮತ್ತು ನ್ಯೂ ಓರ್ಲೆಯನ್ಸ್ ನಲ್ಲಿ ಬಳಸಿದ ಫುಡ್ ಟ್ರಕ್ ಟ್ಯುರೋ App ಮೂಲಕ ಬಾಡಿಗೆಗೆ ಪಡೆದ ವಾಹನಗಳಾಗಿವೆ ಎಂಬುದು ತನಿಖೆಯಿಂದ ಬಯಲಾಗಿದೆ. ಟೆಸ್ಲಾ ಸೈಬರ್ ಟ್ರಕ್ ಬ್ಯಾಟರಿ ಕಾರಣದಿಂದ ಸ್ಫೋಟಗೊಂಡಿಲ್ಲ, ಬದಲಾಗಿ ಇದು ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿರುವುದೇ ಕಾರಣ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ.