Advertisement

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

12:57 PM Dec 29, 2024 | Team Udayavani |

ಮಾರಕ ಸೋಂಕು ರೋಗಗಳಿಂದ ಮಕ್ಕಳನ್ನು ರಕ್ಷಿಸುವಲ್ಲಿ ಅತ್ಯಂತ ಪ್ರಾಮುಖ್ಯವಾದ ವಿಧಾನ ಬಾಲ್ಯಕಾಲದಲ್ಲಿ ವಿವಿಧ ಲಸಿಕೆಗಳನ್ನು ಅವರಿಗೆ ಒದಗಿಸುವುದು. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯು ಇನ್ನೂ ಪರಿಪೂರ್ಣವಾಗಿ ಬೆಳವಣಿಗೆಯಾಗದೆ ದುರ್ಬಲವಾಗಿರುತ್ತದೆ ಮತ್ತು ಮಿದುಳಿನ ಕ್ಷಯ, ಡಿಫ್ತೀರಿಯಾ, ನಾಯಿಕೆಮ್ಮು ಮತ್ತು ಧನುರ್ವಾತದಂತಹ ಕಾಯಿಲೆಗಳಿಗೆ ಒಡ್ಡಿಕೊಂಡಿರುವುದಿಲ್ಲ. ಇದರಿಂದಾಗಿ ಸಾವು ಅಥವಾ ದೀರ್ಘ‌ಕಾಲೀನ ಆರೋಗ್ಯ ಸಮಸ್ಯೆ ಉಂಟಾಗಬಹುದಾಗಿದೆ.

Advertisement

18 ಮತ್ತು 19ನೇ ಶತಮಾನದ ಆದಿ ಭಾಗದಲ್ಲಿ ಇದೇ ಪರಿಸ್ಥಿತಿ ಇತ್ತು. ಅಮೂಲ್ಯ ಜೀವಗಳನ್ನು ಉಳಿಸುವ ಒಂದು ಪರಿಣಾಮಕಾರಿ ಕ್ರಮವಾಗಿ 20ನೇ ಶತಮಾನದಲ್ಲಿ ಲಸಿಕೆ ಹಾಕುವ ಕ್ರಮ ಆರಂಭವಾಯಿತು ಮತ್ತು ಕೋಟ್ಯಂತರ ಜನರನ್ನು ಈ ಮೂಲಕ ಉಳಿಸುವುದಕ್ಕೆ ಸಾಧ್ಯವಾಯಿತು. ಲಸಿಕೆ ಹಾಕುವುದರಿಂದ ಮಾರಕ ರೋಗಗಳ ವಿರುದ್ಧ ರೋಗ ನಿರೋಧಕ ವ್ಯವಸ್ಥೆಯ ರಕ್ಷಣಾತ್ಮಕ ಪ್ರತಿಕ್ರಿಯೆ ಪ್ರಚೋದಿಸಲ್ಪಡುತ್ತದೆ ಮತ್ತು ನಿಜವಾಗಿಯೂ ಸೋಂಕು ತಗಲಿದಾಗ ದೇಹ ಅದರ ವಿರುದ್ಧ ಯಶಸ್ವಿಯಾಗಿ ಹೋರಾಡಲು ಸಾಧ್ಯವಾಗುತ್ತದೆ.

ಲಭ್ಯವಿರುವ ಲಸಿಕೆಗಳಲ್ಲಿ ಮೂರು ವಿಧಗಳಿವೆ

 ಕೊಲ್ಲಲ್ಪಟ್ಟ/ ನಿಶ್ಚೇತನಗೊಳಿಸಿದ ಲಸಿಕೆಗಳು,

 ರಿಕಾಂಬಿನೆಂಟ್‌ ಲಸಿಕೆಗಳು ಮತ್ತು

Advertisement

 ಲೈವ್‌ ಅಟೆನ್ಯುಯೇಟೆಡ್‌ ಲಸಿಕೆಗಳು.

ಕೊಲ್ಲಲ್ಪಟ್ಟ ಲಸಿಕೆಗಳನ್ನು ಮೃತ ಅಥವಾ ನಿಶ್ಚೇತನಗೊಳಿಸಿದ ಜೀವಾಣುಗಳಿಂದ ತಯಾರಿಸಲಾಗುತ್ತದೆ. ಇಂತಹ ಲಸಿಕೆಗಳನ್ನು ನೀಡಿದಾಗ ಅದೇ ದಿನ ನೋವು, ಜ್ವರದಂತಹ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಉದಾಹರಣೆಗೆ, ಡಿಫ್ತೀರಿಯಾ, ಪರ್ಟುಸಿಸ್‌ ಮತ್ತು ಟೆಟನಸ್‌ ಲಸಿಕೆ (ಡಿಟಿಡಬ್ಲ್ಯುಪಿ).

ರಿಕಾಂಬಿನೆಂಟ್‌ ಲಸಿಕೆಗಳನ್ನು ಜೀವಾಣುಗಳ ಜೀವಕೋಶ ವ್ಯವಸ್ಥೆಯ ಭಾಗಗಳಿಂದ ತಯಾರಿಸಲಾಗುತ್ತದೆ ಮತ್ತು ಕೆಲವೊಮ್ಮೆ ಇತರ ಅಂಶಗಳನ್ನು ಕೂಡ ಸೇರಿಸಲಾಗುತ್ತದೆ. ಉದಾಹರಣೆಗೆ, ಹೆಪಟೈಟಿಸ್‌ ಬಿ ಲಸಿಕೆ. ಇವುಗಳನ್ನು ನೀಡಾಗ ಯಾವುದೇ ಗಮನಾರ್ಹ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಲೈವ್‌ ಲಸಿಕೆಗಳನ್ನು ದುರ್ಬಲಗೊಳಿಸಿದ ವೈರಾಣುಗಳು ಅಥವಾ ಬ್ಯಾಕ್ಟೀರಿಯಾಗಳಿಂದ ತಯಾರಿಸಲಾಗುತ್ತದೆ ಮತ್ತು ಲಸಿಕೆ ನೀಡಿದ ಬಳಿಕ ಕೆಲವು ದಿನಗಳ ಬಳಿಕ ಅಥವಾ ವಾರದ ಬಳಿಕ ಲಘು ವೈರಾಣು ಸೋಂಕಿನಂತಹ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಉದಾಹರಣೆಗೆ, ಮಂಗನಬಾವು (ಮಮ್ಸ್‌), ಮೀಸಲ್ಸ್‌ (ದಡಾರ) ಮತ್ತು ರುಬೆಲ್ಲಾ ಲಸಿಕೆ (ಎಂಎಂಆರ್‌), ಕ್ಷಯಕ್ಕಾಗಿ ಬಿಸಿಜಿ.

ಬಾಲ್ಯಕಾಲದಲ್ಲಿ ಲಸಿಕೆ ಹಾಕುವುದರ ಒಂದು ಉತ್ತಮ ಯಶೋಗಾಥೆ ಎಂದರೆ ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುತ್ತಿದ್ದ ಪೋಲಿಯೋ ರೋಗದ ಸಂಪೂರ್ಣ ನಿರ್ಮೂಲನ. ವಾರ್ಷಿಕ ರಾಷ್ಟ್ರೀಯ ಪೋಲಿಯೋ ಲಸಿಕೆ ಕಾರ್ಯಕ್ರಮ ಸಹಿತ ಬಾಯಿಗೆ ಪೋಲಿಯೋ ಲಸಿಕೆಯ ಹನಿಬಿಂದು ಹಾಕುವ ಕಾರ್ಯಕ್ರಮವನ್ನು ದೇಶಾದ್ಯಂತ ವ್ಯಾಪಕವಾಗಿ ನಡೆಸಿದ್ದು ಹಾಗೂ ನಿಶ್ಚೇತನಗೊಳಿಸಿದ ಪೋಲಿಯೋ ವೈರಾಣು ಲಸಿಕೆಯನ್ನು ಇಂಜೆಕ್ಷನ್‌ ಮೂಲಕ ನೀಡುವ ಕಾರ್ಯಕ್ರಮಗಳಿಂದ ಭಾರತವನ್ನು ಪೋಲಿಯೋ ಮುಕ್ತಗೊಳಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಕೆಲವು ರೋಗಗಳು ಸಾಂಕ್ರಾಮಿಕ ಸ್ವರೂಪದಲ್ಲಿದ್ದು, ಅಂಥಲ್ಲಿ ಆಯಾ ರೋಗಗಳ ವಿರುದ್ಧ ಲಸಿಕೆಗಳನ್ನು ಹಾಕಿಸಲಾಗುತ್ತದೆ. ಉದಾಹರಣೆಗೆ, ಜಪಾನೀಸ್‌ ಎನ್‌ಸೆಫ‌ಲೈಟಿಸ್‌ (ಜೆಇ) ಲಸಿಕೆ. ಈ ಲಸಿಕೆಯು ಗಮನಾರ್ಹ ಗುಣವಿಲ್ಲದ ಒಂದು ಮಾರಕ ಮೆದುಳು ಜ್ವರದ ವಿರುದ್ಧ ರಕ್ಷಣೆ ಒದಗಿಸುತ್ತದೆ. ಈ ಕಾಯಿಲೆಯು ಕರ್ನಾಟಕದ ಕರಾವಳಿ ಭಾಗದಲ್ಲಿ ವರದಿಯಾಗುತ್ತಿರುವುದರಿಂದ ರಾಜ್ಯದಲ್ಲಿ ಈ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತಿದೆ; ಆದರೆ ಇದನ್ನು ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಲ್ಲಿ ಸೇರ್ಪಡೆಗೊಳಿಸಲಾಗಿಲ್ಲ.

ಕೆಲವು ಲಸಿಕೆಗಳನ್ನು ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸಬೇಕಾಗಿದ್ದು, ಇವುಗಳನ್ನು ಸರಕಾರಿ ಮತ್ತು ಖಾಸಗಿ ಕೇಂದ್ರಗಳಲ್ಲಿ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದ ಭಾಗವಾಗಿ ನೀಡಲಾಗುತ್ತದೆ. ರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಿಲ್ಲದ, ಆದರೆ ಐಚ್ಛಿಕವಾಗಿ ಹಾಕಿಸಿಕೊಳ್ಳಬಹುದಾದ ಕೆಲವು ಲಸಿಕೆಗಳಿವೆ. ಇವುಗಳು ಮಕ್ಕಳಿಗೆ ಕೆಲವು ನಿರ್ದಿಷ್ಟ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತವೆ. ಇಂಥವುಗಳು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರುತ್ತವೆ.

ಎಂಎಂಆರ್‌ ಲಸಿಕೆಯಿಂದ ಆಟಿಸಂ ಉಂಟಾಗುತ್ತದೆ ಎಂಬಿತ್ಯಾದಿಯಾಗಿ ಮಕ್ಕಳಿಗೆ ನೀಡಲಾಗುವ ಲಸಿಕೆಗಳಿಗೆ ಸಂಬಂಧಿಸಿ ನೂರಾರು ಸುಳ್ಳು ಮಾಹಿತಿಗಳಿವೆ. ದುರ್ಬಲಗೊಳಿಸಿದ ವೈರಾಣುವ ಅತ್ಯಪರೂಪಕ್ಕೆ ರೋಗವನ್ನು ಉಂಟು ಮಾಡುವ ಅಡ್ಡ ಪರಿಣಾಮದ ಅಪಾಯವು ಬಾಯಿಗೆ ಹನಿಯಾಗಿ ಹಾಕುವ ಪೋಲಿಯೋ ಲಸಿಕೆಯಲ್ಲಿ ಇತ್ತು. ಆದರೆ ಐಪಿವಿ ಜತೆಗೆ ಬೈವೇಲೆಂಟ್‌ ಒಪಿವಿ ಬಳಕೆಯ ಮೂಲಕ ಈ ಅಪಾಯವನ್ನು ಸಂಪೂರ್ಣ ದೂರ ಮಾಡಲಾಗಿದೆ. ಇವತ್ತು ಲಭ್ಯವಾಗುವ ಎಲ್ಲ ಲಸಿಕೆಗಳು ಅತ್ಯಂತ ಸುರಕ್ಷಿತವಾಗಿದ್ದು, ಅತ್ಯಂತ ಕಡಿಮೆ ಮತ್ತು ಗೊತ್ತಿರುವ, ನಿಭಾಯಿಸಬಹುದಾದ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ.

ಭಾರತೀಯ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮವು ಶಿಶು ಜನನದ ದಿನದಿಂದಲೇ ಆರಂಭವಾಗುತ್ತದೆ ಮತ್ತು ಶಿಶುವಿನ ಮೊದಲ ಒಂದು ಮತ್ತು 2 ವರ್ಷಗಳಲ್ಲಿ ಅತ್ಯಂತ ತೀವ್ರವಾಗಿರುತ್ತದೆ. 15ನೇ ವಯಸ್ಸಿನಲ್ಲಿ ಇದು ಮುಕ್ತಾಯವಾಗುತ್ತದೆ. ತಮ್ಮ ಶಿಶುವಿನ ಮುಂದಿನ ಲಸಿಕೆಯ ಬಗ್ಗೆ ಹೆತ್ತವರಿಗೆ ನೆನಪಿಸುವ ಸಂದೇಶಗಳನ್ನು ಕಳುಹಿಸುವ ಮೂಲಕ ಇಂಧ್ರಧನುಶ್‌ ಅಭಿಯಾನವು ಎಲ್ಲ ಮಕ್ಕಳೂ ಲಸಿಕೆ ಹಾಕಿಸಿಕೊಳ್ಳುವುದನ್ನು ಖಾತರಿಪಡಿಸುತ್ತದೆ. ಆದ್ದರಿಂದ ಮಾರಕ ರೋಗಗಳ ವಿರುದ್ಧ ಪ್ರಬಲ ಪ್ರತಿರಕ್ಷಣ ವ್ಯವಸ್ಥೆಯನ್ನು ಬೆಳಸಿಕೊಳ್ಳುವಲ್ಲಿ ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಅತ್ಯಂತ ಮುಖ್ಯವಾದ ವಿಧಾನವಾಗಿದ್ದು, ಹೆತ್ತವರು ಯಾವುದೇ ರೀತಿಯ ಅಂಜಿಕೆ, ಹಿಂಜರಿಕೆಗಳಿಗೆ ಒಳಗಾಗದೆ ತಮ್ಮ ಮಕ್ಕಳಿಗೆ ಈ ಲಸಿಕೆಗಳನ್ನು ಒದಗಿಸಬೇಕು.

-ಡಾ| ಸೌಂದರ್ಯಾ ಎಂ.

ಪೀಡಿಯಾಟ್ರಿಶನ್‌,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೀಡಿಯಾಟ್ರಿಕ್ಸ್‌ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next