2020ರಲ್ಲಿ ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿದ್ದ ಕೋವಿಡ್ 19 ಸಾಂಕ್ರಾಮಿಕದ ಭೀತಿಯಿಂದ ದೇಶಗಳು ಹೊರಬಂದು ಸಹಜಸ್ಥಿತಿಗೆ ಮರಳುತ್ತಿರುವ ನಡುವೆಯೇ ಚೀನದಲ್ಲಿ ಮತ್ತೊಂದು ಮಹಾಮಾರಿ ಸೋಂಕು ಹಬ್ಬುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಏಷ್ಯಾದಾದ್ಯಂತ ಕಳವಳ ಮೂಡಿಸಿದೆ.
ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
ಹೌದು ಚೀನಾದಲ್ಲೀಗ ಉಸಿರಾಟದ ಅನಾರೋಗ್ಯ ತೀವ್ರ ತರ ಹೆಚ್ಚಳವಾಗುತ್ತಿದ್ದು, ಆಸ್ಪತ್ರೆಗಳು ಮತ್ತು ಹೆಲ್ತ್ ಕೇರ್ ಸೆಂಟರ್ ಗಳು ತುಂಬಿ ತುಳುಕುತ್ತಿರುವುದಾಗಿ ವರದಿ ವಿವರಿಸಿದೆ. ಚೀನಾದಲ್ಲಿ ಹ್ಯೂಮನ್ ಮೆಟಾಪ್ ನ್ಯೂಮೋ ವೈರಸ್ (HMPV) ಹೆಚ್ಚಳವಾಗುತ್ತಿರುವ ಬಗ್ಗೆ ಆರೋಗ್ಯ ತಜ್ಞರನ್ನು ಚಿಂತೆಗೀಡು ಮಾಡಿದೆಯಂತೆ!
ಚೀನಾದ ಆರೋಗ್ಯಾಧಿಕಾರಿಗಳ ಮಾಹಿತಿ ಪ್ರಕಾರ, ಈ ಎಚ್ ಎಂಪಿವಿ ವೈರಸ್ ಚೀನಾದ ಉತ್ತರ ಭಾಗದಲ್ಲಿ ವೇಗವಾಗಿ ಹರಡುತ್ತಿದೆ. ಅಲ್ಲದೇ ಸಾವಿರಾರು ಸಂಖ್ಯೆಯ ಜನರು ಉಸಿರಾಟದ ತೊಂದರೆಗೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದೆ. ಈ ಮೈಕ್ರೋಪ್ಲಾಸ್ಮಾ ನ್ಯುಮೋನಿಯಾ ಎಲ್ಲಾ ವಯೋಮಾನದವರ ಮೇಲೂ ಪರಿಣಾಮ ಬೀರುತ್ತಿದ್ದು, ಮುಖ್ಯವಾಗಿ ಮಕ್ಕಳಿಗೆ ಹೆಚ್ಚು ಮಾರಕವಾಗಿರುವುದರಿಂದ ಸಾರ್ವಜನಿಕ ಆರೋಗ್ಯದ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ.
ಸಾಮಾಜಿಕ ಜಾಲತಾಣದ ಮಾಹಿತಿಯಂತೆ, ಚೀನಾದಲ್ಲಿ ನಿಗೂಢ ಸೋಂಕಿನ ಪರಿಸ್ಥಿತಿ ಗಂಭೀರ ಸ್ವರೂಪ ತಾಳಿದ್ದು, ಈ ಬಗ್ಗೆ ಚೀನಾದ ಅಧಿಕಾರಿಗಳಾಗಲಿ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಾಗಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವ ಸಾಧ್ಯತೆ ದಟ್ಟವಾಗಿರುವುದಾಗಿ ವಿವರಿಸಿದೆ.!
ಈ ವೈರಸ್ 20 ವರ್ಷದ ಹಿಂದೆ ಪತ್ತೆಯಾಗಿದ್ದರೂ ಈವರೆಗೂ ಲಸಿಕೆ ಕಂಡುಹಿಡಿದಿಲ್ಲ!
ಎಚ್ ಎಂಪಿವಿ (ಹ್ಯೂಮನ್ ಮೈಕ್ರೋಪ್ಲಾಸ್ಮಾ ನ್ಯುನೋನಿಯಾ) ಸೋಂಕು ಚೀನಾದ್ಯಂತ ಹರಡುತ್ತಿರುವ ನಡುವೆಯೇ ಈ ಸೋಂಕು ತಡೆಗೆ ಮಾಸ್ಕ್ ಧರಿಸುವಿಕೆ ಹಾಗೂ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಚೀನಾ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ. ಆದರೆ ವಿಪರ್ಯಾಸ ಏನೆಂದರೆ ಈ ಎಚ್ ಎಂಪಿವಿ ಸೋಂಕು ಎರಡು ದಶಕಗಳ ಹಿಂದೆಯೇ ಪತ್ತೆಯಾಗಿದ್ದರೂ ಕೂಡಾ ಈವರೆಗೂ ವ್ಯಾಕ್ಸಿನ್ ಕಂಡು ಹಿಡಿದಿಲ್ಲ.
ಈ ಎಚ್ ಎಂಪಿವಿ ಸೋಂಕಿನ ಬಗ್ಗೆ ಏಷ್ಯಾದಲ್ಲಿ ಆರೋಗ್ಯ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮತ್ತೊಂದೆಡೆ ಚೀನಾ ಸೋಂಕು ತಡೆಗೆ ಕಠಿನ ಕ್ರಮ ಜಾರಿಗೊಳಿಸಲು ಮುಂದಾಗಿದೆ. ಈಗಾಗಲೇ ಹಾಂಗ್ ಕಾಂಗ್ ನಲ್ಲೂ ಕೆಲವೊಂದು ಪ್ರಕರಣಗಳು ವರದಿಯಾಗಿದೆಯಂತೆ. ಅಲ್ಲದೇ ಜಪಾನ್ ನಲ್ಲಿ ಸಾವಿರಾರು ಮಂದಿಗೆ ಹಕ್ಕಿಜ್ವರ ಕಾಣಿಸಿಕೊಂಡು ಭೀತಿ ಹುಟ್ಟಿಸಿದೆ.
ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಶನ್ ಪ್ರಕಾರ, ಜಪಾನ್ ನಲ್ಲಿ ಡಿಸೆಂಬರ್ 15ರವರೆಗೆ ಬರೋಬ್ಬರಿ 94,259 ಜನರಿಗೆ ಹಕ್ಕಿ ಜ್ವರದಿಂದ ಬಳಲಿದ್ದು, ಅದು ಮುಂದಿನ ದಿನಗಳಲ್ಲಿ 7, 18,000ಕ್ಕೆ ಏರಿಕೆಯಾಗುವ ಸಂಭವ ಇರುವುದಾಗಿ ಕಳವಳ ವ್ಯಕ್ತಪಡಿಸಿದೆ.
ಎಚ್ ಎಂಪಿವಿ ಸೋಂಕು ಮಾರಣಾಂತಿಕವೇ?
ಹ್ಯೂಮನ್ ಮೆಟಾನ್ಯುಮೋ ವೈರಸ್ ಮೊದಲ ಬಾರಿಗೆ ಚೀನಾದಲ್ಲಿ 2004ರಲ್ಲಿ ಡಚ್ ಸ್ಕಾಲರ್ ವೊಬ್ಬರ ಆರೋಗ್ಯ ತಪಾಸಣೆ ವೇಳೆ ಪತ್ತೆಯಾಗಿತ್ತು. ಇದೊಂದು ಶ್ವಾಸಕೋಶಕ್ಕೆ ಸಂಬಂಧಪಟ್ಟ ಸೋಂಕು. ಈ ಎಚ್ ಎಂಪಿವಿ ವೈರಸ್ ಮಕ್ಕಳು ಹಾಗೂ ವಯಸ್ಕರಿಗೂ ಹರಡುತ್ತದೆ.
ಇದು ಸಾಮಾನ್ಯವಾದ ಶೀತ, ಕೆಮ್ಮು, ಜ್ವರ, ಮೂಗು ಕಟ್ಟುವುದು,ಸೀನುವಿಕೆ, ತಲೆ ನೋವಿನಂತಹ ಲಕ್ಷಣ ಹೊಂದಿರುತ್ತದೆ. ಜತೆಗೆ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಇದು ಗಂಭೀರ ಸ್ವರೂಪಕ್ಕೆ ತಿರುಗಿದಲ್ಲಿ ಸಾವು ಕೂಡಾ ಸಂಭವಿಸಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಎಚ್ ಎಂಪಿವಿ ಸೋಂಕು ಪೀಡಿತ ಮಕ್ಕಳ ಸಾವಿನ ಸಂಖ್ಯೆ ಕೇವಲ ಶೇ.1ರಷ್ಟು. ಆದರೆ ಎಚ್ ಎಂಪಿವಿಗೆ ಈವರೆಗೂ ಸಮರ್ಪಕವಾದ ಲಸಿಕೆ ಕಂಡುಹಿಡಿದಿಲ್ಲ. ಸೋಂಕು ಪೀಡಿತರ ರೋಗಲಕ್ಷಣದ ಆಧಾರದ ಮೇಲೆ ಔಷಧ ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಆದರೆ ಎಚ್ ಎಂಪಿವಿ ಸೋಂಕಿನ ಕುರಿತು ಚೀನಾ ಸರ್ಕಾರ ಮಾತ್ರ ಅಧಿಕೃತವಾಗಿ ಯಾವ ಮಾಹಿತಿಯನ್ನೂ ಹಂಚಿಕೊಂಡಿಲ್ಲ!