Advertisement

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

03:42 PM Dec 29, 2024 | Team Udayavani |

“ನಾನು ಸರಿ ಇದ್ದೇನೆ… ನನಗೆ ಮಾತ್ರೆಯ ಆವಶ್ಯಕತೆ ಇಲ್ಲ’ “ಸರ್‌… ಎರಡರಲ್ಲಿ ಕೆಂಪು ಮಾತ್ರೆ ಮಾತ್ರ ತೆಗೆದುಕೊಳ್ಳುತ್ತಿದ್ದೇನೆ’ “ಸರ್‌… ನನ್ನ ಮದುವೆ ಫಿಕ್ಸ್‌ ಆಗಿದೆ… ಮಾತ್ರೆ ತೆಗೆದುಕೊಳ್ಳುವುದು ಗೊತ್ತಾದರೆ ಮದುವೆ ಮುರಿದುಹೋಗುವುದು…’ “ಹಲವು ವರ್ಷ ಮಾತ್ರೆ ನುಂಗಿ ಸಾಕಾಗಿ ಹೋಗಿದೆ ಸಾರ್‌…’ “ಮಾತ್ರೆ ತೆಗೆದುಕೊಂಡರೆ ಕಿಡ್ನಿಗೆ ಸಮಸ್ಯೆಬರಬಹುದು ಎಂದು ನನ್ನ ಪರಿಚಯಸ್ಥರು ಹೇಳುತ್ತಿದ್ದಾರೆ…’ “ಮಗನನ್ನು ಹತ್ತು ಡಾಕ್ಟರುಗಳಿಗೆ ತೋರಿಸಿದರೂ ಮಾತ್ರೆ ತೆಗೆದುಕೊಳ್ಳುವುದಿಲ್ಲ… ಚೇತರಿಕೆ ಆಗುತ್ತಾ ಇಲ್ಲ ಸಾರ್‌…’ “ಹಣವಿಲ್ಲದ ಕಾರಣ ಮಾತ್ರೆ ತೆಗೆದುಕೊಂಡಿಲ್ಲ…’

Advertisement

ಈ ಮೇಲಿನ ಹೇಳಿಕೆಗಳನ್ನು ಸರ್ವೇ ಸಾಮಾನ್ಯವಾಗಿ ರೋಗಿಗಳು ಅಥವಾ ಅವರ ಆರೈಕೆದಾರರು ಮನೋವೈದ್ಯಶಾಸ್ತ್ರ ವಿಭಾಗಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ವ್ಯಕ್ತಪಡಿಸುತ್ತಾರೆ. ಆರೋಗ್ಯ ಎಂಬುದು ಮಾನವನ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಸ್ವಾಸ್ಥ್ಯವಾಗಿದೆ. ದೈಹಿಕ ಕಾಯಿಲೆಗಳನ್ನು ಗುಣಪಡಿಸಲು ಹೇಗೆ ಔಷಧದ ಅಗತ್ಯ ಇದೆಯೊ ಹಾಗೆಯೇ ಮನಸ್ಸಿಗೆ ಸಂಬಂಧಿಸಿದ ಕಾಯಿಲೆ ಇರುವ ವ್ಯಕ್ತಿಯು ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಚಿಕಿತ್ಸೆಗೆ ಒಳಪಡುವುದು ತುಂಬಾ ಮುಖ್ಯ. ಇತ್ತೀಚೆಗಿನ ಅಧ್ಯಯನದ ಪ್ರಕಾರ ತೀವ್ರ ತರಹದ ಮಾನಸಿಕ ಕಾಯಿಲೆ ಹೊಂದಿರುವ ಶೇ. 50ಕ್ಕಿಂತ ಹೆಚ್ಚಿನ ರೋಗಿಗಳು ತಮ್ಮ ಔಷಧಗಳನ್ನು ನಾನಾ ಕಾರಣಗಳಿಂದ ನಿಲ್ಲಿಸುವ ಸಾಧ್ಯತೆ ಇದೆ.

ಏನಿದು ಮಾನಸಿಕ ಆರೋಗ್ಯದಲ್ಲಿ ಚಿಕಿತ್ಸೆಯ ಅನುಸರಣೆ?

ಚಿಕಿತ್ಸೆಯ ಅನುಸರಣೆ ಎನ್ನುವುದು ರೋಗಿಯು ನಿಶ್ಚಿತ ಚಿಕಿತ್ಸೆ ಯೋಜನೆಗೆ ಅನುಗುಣವಾಗಿ ಔಷಧಗಳನ್ನು ತೆಗೆದುಕೊಳ್ಳುವುದು, ಥೆರಪಿ ಸೆಶನ್‌ಗಳಲ್ಲಿ ಪಾಲ್ಗೊಳ್ಳುವುದು ಮತ್ತು ವೈದ್ಯರು ತಿಳಿಸಿದ ಜೀವನಶೈಲಿಯನ್ನು ಪಾಲಿಸುವುದು. ಚಿಕಿತ್ಸೆಯಲ್ಲಿ ಅನುಸರಣೆ ಇಲ್ಲದಿರುವುದರಲ್ಲಿ ನಾನಾ ಪ್ರಕಾರಗಳಿರುತ್ತವೆ.

 ಔಷಧಗಳನ್ನು ತೆಗೆದುಕೊಳ್ಳದಿರುವುದು (Medication Non adherence): ರೋಗಿಯು ವೈದ್ಯರು ಶಿಫಾರಸು ಮಾಡಿದ ಔಷಧಗಳನ್ನು ಸರಿಯಾಗಿ ಅಥವಾ ಸಮಯಕ್ಕೆ ತಕ್ಕಂತೆ ತೆಗೆದುಕೊಳ್ಳದೆ ಇರುವುದು.

Advertisement

 ಸೂಚಿಸಲಾದ ಥೆರಪಿ ಅಥವಾ ಆಪ್ತಸಮಾಲೋಚನೆಗೆ ಹಾಜರಾಗದಿರುವುದು (Therapy Non adherence)

 ಜೀವನಶೈಲಿ ಬದಲಾವಣೆ ಅನುಸರಿಸದಿರುವುದು (Non adherence to Lifestyle Modification): ವೈದ್ಯರು ಸೂಚಿಸಿದ ಜೀವನಶೈಲಿ ಬದಲಾವಣೆಗಳು, ಉದಾಹರಣೆಗೆ – ತೂಕ ಕಡಿಮೆ ಮಾಡುವುದು, ಧೂಮಪಾನ ತ್ಯಾಗ, ಅಥವಾ ಆಹಾರ ನಿಯಮ ಪಾಲನೆ ಮುಂತಾದ ಶಿಫಾರಸುಗಳನ್ನು ಕೈಗೊಳ್ಳದೆ ಇರುವುದು.

 ಅಲ್ಪ ಅನುಸರಣೆ (Partial Adherence)- ಔಷಧಗಳನ್ನು ಕೆಲವೊಮ್ಮೆ ಮಾತ್ರ ತೆಗೆದುಕೊಳ್ಳುವುದು ಅಥವಾ ಕೆಲವು ಮಾತ್ರೆಗಳನ್ನು ಮಾತ್ರ ತೆಗೆದುಕೊಳ್ಳುವುದು.

 ಇಚ್ಛಿತ ರೀತಿಯ ಅನುಸರಣೆ – ಔಷಧಗಳನ್ನು ಮುಕ್ತಾಯದಿಂದ ಮೊದಲೇ ಬಿಟ್ಟುಬಿಡುವುದು. ರೋಗಿಯು ನಿರ್ದಿಷ್ಟ ಕಾರಣದಿಂದ ಔಷಧಗಳನ್ನು ತೆಗೆದುಕೊಳ್ಳುವುದನ್ನು ಅಥವಾ ಥೆರಪಿ ಹಾಜರಾಗುವುದನ್ನು ನಿರಾಕರಿಸುವುದು.

ಮಾನಸಿಕ ಆರೋಗ್ಯದಲ್ಲಿ ಚಿಕಿತ್ಸೆ ಅನುಸರಣೆಗೆ ಅಡ್ಡಿಯಾಗುವ ವಿಚಾರಗಳು

ಕಾಯಿಲೆಯ ಬಗ್ಗೆ ಅರಿವಿನ ಕೊರತೆ: ಮನೋಕಾಯಿಲೆಯಲ್ಲಿ ಚಿಕಿತ್ಸೆಯ ಅನುಸರಣೆಗೆ ಅಡ್ಡಿಯಾಗುವ ಮುಖ್ಯ ಅಂಶವೆಂದರೆ ತನ್ನ ಕಾಯಿಲೆಯ ಬಗೆಗಿನ ಅರಿವಿನ ಕೊರತೆ. ಸಾಮಾನ್ಯವಾಗಿ ತೀವ್ರತರಹದ ಮಾನಸಿಕ ಕಾಯಿಲೆಗಳಾದ ಚಿತ್ತವೈಕಲ್ಯ ಅಥವಾ ಉನ್ಮಾದ ವಿಷಾದ ಕಾಯಿಲೆಯುಳ್ಳ ವ್ಯಕ್ತಿಗಳಲ್ಲಿ ಇದನ್ನು ಕಾಣಬಹುದು.

ಸಾಮಾಜಿಕ ಕಳಂಕ (Social stigma): ಮಾನಸಿಕ ಕಾಯಿಲೆಯ ಬಗೆಗಿನ ತಪ್ಪು ಅಭಿಪ್ರಾಯಗಳು ಅಥವಾ ನಕಾರಾತ್ಮಕ ಭಾವನೆಗಳು ಚಿಕಿತ್ಸೆಯ ಅನುಸರಣೆಗೆ ಭಟಗವನ್ನು ಉಂಟುಮಾಡಬಹುದು. ಉದಾಹರಣೆಗೆ, ತಾನು ಔಷಧವನ್ನು ತೆಗೆದುಕೊಳ್ಳುವ ವಿಚಾರ ಇತರರಿಗೆ ತಿಳಿದು ಜನರು ತಾರತಮ್ಯ ಮಾಡಬಹುದು ಅಥವಾ ಹುಚ್ಚ ಎಂದು ಹಣೆಪಟ್ಟಿ ಕಟ್ಟುತ್ತಾರೆ ಎಂದು ಭಯಪಡಬಹುದು.

ಔಷಧದ ಅಡ್ಡ ಪರಿಣಾಮದ ಭಯ: ಕೆಲವು ಔಷಧಗಳಿಂದ ಕೆಲವರಿಗೆ ಬಾಯಿ ಒಣಗುವುದು, ತೂಕಡಿಕೆ, ಕೈ ಕಾಲುಗಳ ಬಿಗಿತ, ತಲೆಸುತ್ತು, ತೂಕ ಹೆಚ್ಚುವುದು ಇತ್ಯಾದಿ ಈ ಅಡ್ಡ ಪರಿಣಾಮಗಳು ಉಂಟಾಗಬಹುದು. ಇವು ಬಂದಾಗ ಪರಿಹಾರ ಕಂಡುಕೊಳ್ಳದೆ ಔಷಧ ತೆಗೆದುಕೊಳ್ಳದೆ ಇರುವುದು ಒಂದು ಕಾರಣವಾಗಬಹುದು.

ರೋಗಲಕ್ಷಣಗಳು ಕಡಿಮೆ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು: ಕಾಯಿಲೆಯ ಸುಧಾರಣೆಯಲ್ಲಿ ಧಿಡೀರ್‌ ಬದಲಾವಣೆಯನ್ನು ನಿರೀಕ್ಷಿಸುವುದು ಮನುಷ್ಯ ಸಹಜ ಗುಣ. ಕಾಯಿಲೆಯ ನಿಧಾನಗತಿಯ ಸುಧಾರಣೆ ಕೂಡ ಮಾನಸಿಕ ಕಾಯಿಲೆಯ ಚಿಕಿತ್ಸೆಯ ನಿರ್ವಹಣೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ.

ಕುಟುಂಬ ಬೆಂಬಲದ ಕೊರತೆ: ಕೆಲವು ಮನೋಕಾಯಿಲೆ ಗಳ ನಿರ್ವಹಣೆಗೆ ಕುಟುಂಬಸ್ಥರ ಸಹಕಾರ ಅಗತ್ಯ. ಉದಾಹ ರಣೆಗೆ, ಚಿತ್ತವೈಕಲ್ಯವುಳ್ಳ ವ್ಯಕ್ತಿಯು ಔಷಧದ ಆವಶ್ಯಕತೆಯನ್ನು ತಿಳಿಯಲಾರ. ಆ ಸಂದರ್ಭದಲ್ಲಿ ಮನೆಯವರು / ಆಪ್ತರು ಆತನ ಔಷಧ ಅನುಸರಣೆಯ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಅದು ಚಿಕಿತ್ಸೆಯ ಅನುಸರಣೆಯ ಮೇಲೆ ಪರಿಣಾಮ ಬೀರುವುದು.

ಚಿಕಿತ್ಸೆಯನ್ನು ಮುಂದುವರಿಸುವ ಅಗತ್ಯದ ಬಗ್ಗೆ ಅರಿವಿನ ಕೊರತೆ : ರೋಗಿಗಳು ಅಥವಾ ಕುಟುಂಬಸ್ಥರು ಅರೋಗ್ಯ ಸುಧಾರಿಸಿದ ಬಳಿಕವೂ ಔಷಧಗಳನ್ನು ಮುಂದುವರಿಸುವ ಅಗತ್ಯವನ್ನು ಅರಿತಿರುವುದಿಲ್ಲ. ಕಾಯಿಲೆಯ ಲಕ್ಷಣಗಳು ಕಡಿಮೆಯಾಗಿವೆ ಎಂದುಕೊಂಡು ಸ್ವತಃ ಔಷಧ ನಿಲ್ಲಿಸುವುದು.

ಆರ್ಥಿಕ ಕಾರಣ: ಕುಟುಂಬದ ಆರ್ಥಿಕ ಸ್ಥಿತಿ ಚಿಕಿತ್ಸೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆರ್ಥಿಕ ಕಾರಣದಿಂದ ಆಸ್ಪತ್ರೆಗೆ ಹೋಗದಿರುವುದು ಅಥವಾ ಚಿಕಿತ್ಸೆಗೆ ವೈದ್ಯರ ಸಲಹೆಯಂತೆ ಔಷಧ ತೆಗೆದುಕೊಳ್ಳದೆ ಅದನ್ನು ತಮ್ಮ ಅರ್ಥಿಕ ಸ್ಥಿತಿಗೆ ತಕ್ಕಂತೆ ಕಡಿಮೆ ಗೊಳಿಸುವುದು.

ಮೇಲೆ ತಿಳಿಸಿದ ಅಂಶಗಳ ಜತೆಗೆ – ಸೂಕ್ತ ವೈದ್ಯಕೀಯ ಸೌಲಭ್ಯದ ಕೊರತೆ, ಸಮಯದ ಅಭಾವ, ಚಿಕಿತ್ಸೆಯ ತಂಡದೊಂದಿಗೆ / ವೈದ್ಯರೊಂದಿಗೆ ಹೊಂದಾಣಿಕೆಯ ಸಮಸ್ಯೆಗಳು ಕೂಡ ಚಿಕಿತ್ಸೆಯ ಅನುಸರಣೆಗೆ ಅಡ್ಡಿಯನ್ನುಂಟುಮಾಡಬಹುದು.

ಮಾನಸಿಕ ಕಾಯಿಲೆಯ ನಿರ್ವಹಣೆಯಲ್ಲಿ ಚಿಕಿತ್ಸೆಯ ಅನುಸರಣೆಯ ಮಹತ್ವ

ಮಾನಸಿಕ ಅಸ್ವಸ್ಥತೆಯ ನಿರ್ವಹಣೆಯಲ್ಲಿ ಚಿಕಿತ್ಸೆಯ ಅನುಸರಣೆ ನಿರ್ಣಾಯಕ ಅಂಶವಾಗಿದೆ. ಮಾನಸಿಕ ಕಾಯಿಲೆ ಹೊಂದಿದ ವ್ಯಕ್ತಿಗೆ ವೈದ್ಯರು ಸೂಚಿಸಿದಂತೆ ಔಷಧ ತೆಗೆದುಕೊಳ್ಳುವುದು, ಜೀವನಶೈಲಿಯ ಹೊಂದಾಣಿಕೆ, ಥೆರಪಿಯಲ್ಲಿ ತೊಡಗಿಸಿಕೊಳ್ಳುವದು, ವೈದ್ಯರನ್ನು ನಿರ್ದಿಷ್ಟ ಅವಧಿಗೆ ಭೇಟಿ ಮಾಡುವುದು ಬಹಳ ಮುಖ್ಯ.

ಏಕೆಂದರೆ ಇವುಗಳು ರೋಗಿಯ ಜೀವನದ ಗುಣಮಟ್ಟವನ್ನು ಸುಧಾರಿಸು ತ್ತವೆ ಮತ್ತು ರೋಗಲಕ್ಷಣಗಳ ಮರುಕಳಿ ಸುವಿಕೆಯನ್ನು ಅಥವಾ ಹದಗೆಡುವು ದನ್ನು ತಡೆಯಲು ಸಹಾಯ ಮಾಡುತ್ತವೆ.

ಕಾಯಿಲೆಯನ್ನು ಹತೋಟಿಗೆ ತರಲು ಅನುಕೂಲವಾಗುವುದು: ಔಷಧ ಮತ್ತು ಥೆರಪಿ ಪಡೆದುಕೊಳ್ಳುವದರಿಂದ ರೋಗಲಕ್ಷಣಗಳನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ಮತ್ತು ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಚಿಕಿತ್ಸೆಯ ಪರಿಣಾಮವನ್ನು ತಿಳಿಯಬಹುದು: ನಿಯಮಿತವಾಗಿ ಔಷಧಗಳನ್ನು ಪಡೆದುಕೊಂಡಲ್ಲಿ ಅದು ವೈದ್ಯರು ಆರಂಭ ಮಾಡಿದ ಚಿಕಿತ್ಸೆಯ ಪರಿಣಾಮ ಮತ್ತು ಚಿಹ್ನೆಯಲ್ಲಾ ಬದಲಾವಣೆಗಳನ್ನು ಅಥವಾ ಚಿಕಿತ್ಸೆಯಲ್ಲಿ ಮಾಡಬೇಕಾದ ಮಾರ್ಪಾಡುಗಳನ್ನು ಲೆಕ್ಕಹಾಕಲು ಸಹಕಾರಿಯಾಗಬಲ್ಲುದು.

ಕಾಯಿಲೆಯ ಮರುಕಳಿಸುವಿಕೆ ಮತ್ತು ಪದೇ ಪದೆ ಆಸ್ಪತ್ರೆಗೆ ಸೇರುವುದನ್ನು ತಡೆಯುತ್ತದೆ: ಅನೇಕ ಮಾನಸಿಕ ಕಾಯಿಲೆಗಳು ದೀರ್ಘ‌ಕಾಲದ ಅಥವಾ ಪದೇ ಪದೆ ಮರುಕಳಿಸುವಂಥವು ಆಗಿರುತ್ತವೆ. ಚಿಕಿತ್ಸೆಯ ನಿರ್ವಹಣೆಯು ಕಾಯಿಲೆಯ ಮರುಕಳಿಸುವಿಕೆ ಮತ್ತು ಆಸ್ಪತ್ರೆಗೆ ದಾಖಲಾಗುವದನ್ನು ತಡೆದು ಅನಾವಶ್ಯಕ ಹಣ ವ್ಯಯವಾಗುವುದನ್ನು ತಪ್ಪಿಸುತ್ತದೆ.

ದೀರ್ಘಾವಧಿಯ ಚೇತರಿಕೆಗೆ ಸಹಕಾರಿ: ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಯು ಸಾಮಾನ್ಯವಾಗಿ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಮಾತ್ರವಲ್ಲದೆ, ದೈನಂದಿನ ಜೀವನದಲ್ಲಿ ಕಾರ್ಯನಿರ್ವಹಿಸುವ ಮತ್ತು ಅಭಿವೃದ್ಧಿ ಹೊಂದುವ ವ್ಯಕ್ತಿಯ ಕಾರ್ಯಕ್ಷಮತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಚಿಕಿತ್ಸೆಗೆ ತೊಡಗಿಕೊಳ್ಳುವುದು ಮಾತ್ರವಲ್ಲದೆ, ವ್ಯಕ್ತಿಗಳ ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳು, ಕೆಲಸ ಮತ್ತು ಸ್ವಯಂ-ಆರೈಕೆ ಅಥವಾ ದೈನಂದಿನ ಚಟುವಟಿಕೆಯಂತಹ ವಿಚಾರಗಳಲ್ಲಿ ಸುಧಾರಣೆಗಳನ್ನು ಕಾಣುವ ಸಾಧ್ಯತೆಯಿದೆ. ಇದು ಹೆಚ್ಚು ಸ್ಥಿರ ಮತ್ತು ತೃಪ್ತಿಕರ ಜೀವನಕ್ಕೆ ಕಾರಣವಾಗುತ್ತದೆ. ಜತೆಗೆ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ಬರಲು ಸಹಾಯ ಮಾಡುತ್ತದೆ.

ಸಮಾಜದಲ್ಲಿ ನಕಾರಾತ್ಮಕ ಭಾವನೆಗಳು ಮತ್ತು ತಪ್ಪು ತಿಳಿವಳಿಕೆಯನ್ನು ಕಡಿಮೆ ಮಾಡುತ್ತದೆ: ಚಿಕಿತ್ಸೆಯ ಅನುಸರಣೆಯಿಂದ ವ್ಯಕ್ತಿಯೊಬ್ಬನ ಜೀವನ ಸುಧಾರಣೆ ಮಾತ್ರವಲ್ಲದೆ ಸಮಾಜದಲ್ಲಿ ಮನೋಕಾಯಿಲೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳು ನಿವಾರಣೆಯಾಗುವಲ್ಲಿ ಸಹಕರಿಸುತ್ತದೆ. ನಾವು ಕಂಡಂತೆ ಒಬ್ಬ ರೋಗಿಯ ಚೇತರಿಕೆಯನ್ನು ಕಂಡು ಅವರ ನೆರೆ ಮನೆಯ ಮಾನಸಿಕ ಅಸ್ವಸ್ಥರನ್ನು ಅವರ ಕುಟುಂಬಸ್ಥರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ ಉದಾಹರಣೆಗಳು ಇವೆ.

ಚಿಕಿತ್ಸೆಯ ಅನುಸರಣೆಯನ್ನು ಹೇಗೆ ಸುಧಾರಿಸುವುದು? ಮನೋರೋಗಗಳು ಸಾಮಾನ್ಯ ದೈಹಿಕ ಕಾಯಿಲೆಗಳಂತಲ್ಲ. ವೈದ್ಯರ ಒಂದು ಭೇಟಿಯಲ್ಲಿ ಸಂಪೂರ್ಣ ಗುಣವಾಗುವಂಥದಲ್ಲ. ವೈದ್ಯರ ನಿರ್ದಿಷ್ಟ ಅವಧಿಯ ಭೇಟಿ, ಥೆರಫಿಯಲ್ಲಿ ತೊಡಗಿಸಿಕೊಳ್ಳುವುದು, ಔಷಧಗಳನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳುವುದು, ಅದರ ನಿರಂತರತೆಗೆ ಕೆಲವು ಸರಳ ವಿಧಾನಗಳ ಅಳವಡಿಕೆ ಮುಖ್ಯ.

ಅನಾರೋಗ್ಯದ ಬಗ್ಗೆ ಜ್ಞಾನವನ್ನು ಹೆಚ್ಚಿಸುವುದು ಮನೋರೋಗ ಚಿಕಿತ್ಸಾ ನಿರ್ವಹಣೆಯಲ್ಲಿ ಅತಿಮುಖ್ಯ. ತನ್ನ ಕಾಯಿಲೆಯ ಬಗ್ಗೆ ವ್ಯಕ್ತಿಯಾಗಲಿ ಅಥವಾ ಆತನ ಪೋಷಕರು ಸೂಕ್ತವಾದ ಮಾಹಿತಿಯನ್ನು ಪಡೆದುಕೊಳ್ಳುವುದು. ಉದಾಹರಣೆಗೆ ಬಳಲುತ್ತಿರುವ ಕಾಯಿಲೆಯೇನು? ಚಿಕಿತ್ಸಾ ಪ್ರಕಾರಗಳು ಯಾವುವು? ಅಂದಾಜು ಅವಧಿ, ತಗಲುವ ವೆಚ್ಚ ಹಾಗೂ ಇನ್ನಿತರ.

ಮಾತ್ರೆ ಡಬ್ಬಗಳ (ಪಿಲ್‌ ಬಾಕ್ಸ್‌) ಬಳಕೆ: ಮಾತ್ರೆ ತೆಗೆದುಕೊಳ್ಳಲು ಮರೆತು ಹೋಗುವುದು ಅಥವಾ ಯಾವಾಗ, ಯಾವ ಮಾತ್ರೆ ಎಂಬುದು ಗೊತ್ತಾಗದೆ ಇರುವ ಸಂದರ್ಭದಲ್ಲಿ ಪಿಲ್‌ ಬಾಕ್ಸ್ ಬಳಸುವುದು ಉತ್ತಮ. ಅದರ ಮೂಲ ಉದ್ದೇಶ ಮಾತ್ರೆ ತೆಗೆದುಕೊಂಡಿದ್ದೇವೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸುವುದು ಮತ್ತು ಕೆಲವೊಮ್ಮೆ ತೆಗೆದುಕೊಂಡಿಲ್ಲ ಎಂದು ಎರಡು ಬಾರಿ ಸ್ವೀಕರಿಸುವ ಗೊಂದಲ ಆಗುತ್ತದೆ. ಇಂತಹ ಗೊಂದಲ ತಪ್ಪಿಸಲು ಪಿಲ್‌ ಬಾಕ್ಸ್‌ ಬಳಸುವುದು ಉತ್ತಮ. ಮಾತ್ರೆಯ ಸಮಯ ಬದಲಾಗುವುದನ್ನು ಕೂಡ ತಪ್ಪಿಸಲು ಇದು ಉಪಯೋಗಕರ.

ತಾಂತ್ರಿಕ ಜ್ಞಾಪಕಗಳ ಬಳಕೆ; ಮೊಬೈಲ್‌ ಆ್ಯಪ್‌ ತಂತ್ರಜ್ಞಾನವನ್ನು ಚಿಕಿತ್ಸೆ ಪಾಲನೆಗೆ ಬಳಸಬಹುದು. ಇದು ಸಮಯಕ್ಕೆ ಸರಿಯಾದ ಔಷಧ ಸೇವನೆ ಮತ್ತು ಚಿಕಿತ್ಸೆಯ ಅನುಸರಣೆಯನ್ನು ಸುಲಭಗೊಳಿಸುತ್ತದೆ. ‌

ಉಚಿತ ಅಥವಾ ಕಡಿಮೆ ದರದ ಚಿಕಿತ್ಸೆಯ ಆಯ್ಕೆಗಳನ್ನು ಅನ್ವೇಷಿಸುವುದು: ದೀರ್ಘ‌ಕಾಲದ ಮನೋರೋಗದ ನಿರ್ವಹಣೆಯಲ್ಲಿ ಆರ್ಥಿಕ ಸ್ಥಿತಿಯು ಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಯಾವ ಯೋಜನೆಯಲ್ಲಿ ಎಲ್ಲಿ ಉಚಿತ ಅಥವಾ ಕಡಿಮೆ ದರದಲ್ಲಿ ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತ.

ಚಿಕಿತ್ಸೆಯ ಬಗ್ಗೆ ಮನೋವೈದ್ಯರ ತಂಡದೊಂದಿಗೆ ಚರ್ಚಿಸುವುದು: ಹಲವು ಸಂದರ್ಭಗಳಲ್ಲಿ ರೋಗಿಗಳು ಮತ್ತು ಪೋಷಕರು ಕಾಯಿಲೆ ಅಥವಾ ಅದರ ಚಿಕಿತ್ಸೆಯ ಬಗ್ಗೆ ಇಂಟರ್ನೆಟ್‌ ಅಥವಾ ಇತರ ವಿಶ್ವಾಸಾರ್ಹವಲ್ಲದ ಮೂಲಗಳಲ್ಲಿ ಮಾಹಿತಿಗಾಗಿ ಹುಡುಕುತ್ತಾರೆ. ಕಾಯಿಲೆಯ ವಿವರವನ್ನು ತನ್ನ ವೈದ್ಯರಿಂದ ಪಡೆದುಕೊಳ್ಳುವುದು ರೋಗಿಯ ಹಕ್ಕಿನ ಜತೆಗೆ ಅದು ರೋಗ ನಿರ್ವಣೆಯ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಔಷಧದ ಅಡ್ಡ ಪರಿಣಾಮಗಳಂತಹ ವಿಚಾರಗಳನ್ನು ವೈದ್ಯರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದು.

ಕುಟುಂಬಸ್ಥರನ್ನು ಮತ್ತು ಬೆಂಬಲ ಗುಂಪುಗಳ ನೆರವನ್ನು ಪಡೆಯುವುದು: ರೋಗ ನಿರ್ವಹಣೆಯಲ್ಲಿ ಕುಟುಂಬಸ್ಥರನ್ನು ಮತ್ತು ನಿಕಟ ಸ್ನೇಹಿತರನ್ನು ತೊಡಗಿಸಿಕೊಳ್ಳುವುದು ರೋಗಿಗೆ ಭಾವನಾತ್ಮಕ ಬೆಂಬಲವನ್ನು ನೀಡಿದಂತೆ. ಅದು ರೋಗಿಯು ತಮ್ಮ ಚಿಕಿತ್ಸೆಗೆ ಬದ್ಧರಾಗಿರಲು ಸಹಾಯ ಮಾಡುತ್ತದೆ. ಕೆಲವು ಕಾಯಿಲೆಗಳಲ್ಲಿ ಪೋಷಕರು ಅಥವಾ ಇತರರು ಚಿಕಿತ್ಸೆಯ ಅನುಸರಣೆಯ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಬಹುದು.

ಪೋಷಕರ ಅಥವಾ ಇತರರ ನೆರವು ಪಡೆದುಕೊಳ್ಳುವುದು: ಮನೋಕಾಯಿಲೆಗಳ ನಿರ್ವಹಣೆಯಲ್ಲಿ ಇತರರ ಪಾತ್ರವು ಅಗತ್ಯ ಮತ್ತು ಅದು ರೋಗಿಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ. ಕೆಲವು ಮನೋಕಾಯಿಲೆಗಳ ನಿರ್ವಹಣೆಯಲ್ಲಿ ಸ್ವತಃ ಪೋಷಕರು ಅಥವಾ ಇತರರ ನೆರವಿನ ಆವಶ್ಯಕತೆಯೂ ಬೀಳಬಹುದು.

ಮನೋ ಪುನಶ್ಚೇತನ ಕೇಂದ್ರಗಳ ಉಪಯೋಗವನ್ನು ಪಡೆದುಕೊಳ್ಳುವುದು: ಕೆಲವು ವೈದ್ಯಕೀಯ ಚಿಕಿತ್ಸೆಯ ಪರಿಣಾಮಗಳನ್ನು ತಿಳಿದುಕೊಳ್ಳಲು ಚಿಕಿತ್ಸಾ ತಂಡಕ್ಕೆ ಹಲವು ವಾರಗಳು ಬೇಕಾಗಬಹುದು. ಅಂತಹ ಸಂದರ್ಭಗಳಲ್ಲಿ ಮನೋ ಪುನಶ್ಚೇತನ ಕೇಂದ್ರಗಳ ಉಪಯೋಗವನ್ನು ವ್ಯಕ್ತಿಗಳು ಪಡೆದುಕೊಳ್ಳಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಮನೋವೈದ್ಯಕೀಯ ರೋಗಿಗಳಲ್ಲಿ ಚಿಕಿತ್ಸೆಯ ಅನುಸರಣೆ ಅತೀ ಮುಖ್ಯ ವಿಷಯ. ಅದು ವ್ಯಕ್ತಿಯ ಚೇತರಿಕೆ ಮತ್ತು ಯೋಗಕ್ಷೇಮಕ್ಕೆ ಅತ್ಯಗತ್ಯ. ಕಾಯಿಲೆಯ ಬಗ್ಗೆ ಸೂಕ್ತ ಮಾಹಿತಿ, ಜ್ಞಾಪನೆ ಅಪ್ಲಿಕೇಶನ್‌ಗಳಂತಹ ತಾಂತ್ರಿಕ ಪರಿಕರಗಳು ಮತ್ತು ಇನ್ನಿತರ ಸರಳವಾದ ವಿಧಾನಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಮನೋವೈದ್ಯಕೀಯ ಚಿಕಿತ್ಸೆಯ ನಿಖರವಾದ ಫ‌ಲಿತಾಂಶವನ್ನು ನೀಡುತ್ತದೆ.

-ಶ್ರುತಿ ಶೆಟ್ಟಿ

ರಿಸರ್ಚ್‌ ಅಸಿಸ್ಟೆಂಟ್‌ ಸೆಂಟರ್‌

ಫಾರ್‌ ಕಮ್ಯುನಿಟಿ ಆಂಡ್‌ ರಿಹ್ಯಾಬಿಲಿಟೇಶನ್‌ ಸೈಕಿಯಾಟ್ರಿ

-ಪ್ರವೀಣ್‌ ಎ. ಜೈನ್‌

ಮನೋ ಸಾಮಾಜಿಕ ತಜ್ಞರು

ಮನೋರೋಗ ಚಿಕಿತ್ಸಾ ವಿಭಾಗ

ಹೊಂಬೆಳಕು – ಮಾನಸಿಕ ಪುನಶ್ಚೇತನ ಕೇಂದ್ರ

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮನೋರೋಗ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next