ಟೋಕಿಯೋ: ಟೋಕಿಯೋ ಒಲಂಪಿಕ್ಸ್ ಸೆಮಿ ಫೈನಲ್ ನಲ್ಲಿ ಭಾರತದ ಪುರುಷರ ಹಾಕಿ ತಂಡ ಬೆಲ್ಜಿಯಂ ತಂಡದ ವಿರುದ್ಧ 2-5 ಅಂತರದಿಂದ ಸೋತು ಚಿನ್ನ ಗೆಲ್ಲುವ ಅವಕಾಶ ಕೈ ತಪ್ಪಿಸಿಕೊಂಡಿದೆ.
ಬ್ರಿಟನ್ ತಂಡವನ್ನು ಮಣಿಸಿ ಸೆಮಿಫೈನಲ್ ಗೆ ಏರಿದ್ದ ಭಾರತ ಹಾಕಿ ತಂಡಕ್ಕೆ ವಿಶ್ವ ಚಾಂಪಿಯನ್ ಬೆಲ್ಜಿಯಂ ಪ್ರಬಲ ಎದುರಾಳಿಯಾಗಿತ್ತು.
ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ ಎರಡು ಗೋಲು ಬಾರಿಸಲಷ್ಟೇ ಶಕ್ತವಾಯಿತು. ಮೂರನೇ ಕ್ವಾರ್ಟರ್ ವರೆಗೆ ಪಂದ್ಯ 2–2ರಿಂದ ಸಮಬಲದಿಂದ ಕೂಡಿತ್ತು. ಪೆನಾಲ್ಟಿ ಕಾರ್ನರ್, ಸ್ಟ್ರೋಕ್ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಬೆಲ್ಜಿಯಂ ಅಂತಿಮ 15 ನಿಮಿಷಗಳಲ್ಲಿ ಒಟ್ಟು ಮೂರು ಗೋಲು ಭಾರಿಸುವಲ್ಲಿ ಸಫಲವಾಯಿತು.
ಭಾರತದ ಪರ ಹಮನ್ ಪ್ರೀತ್ ಸಿಂಗ್ ಹಾಗೂ ಮಂದೀಪ್ ಸಿಂಗ್ ಗೋಲು ಗಳಿಸಿದರು. ಬೆಲ್ಜಿಯಂ ಪರ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಹ್ಯಾಟ್ರಿಕ್ ಗೋಲು ಬಾರಿಸಿದರು.
ಅಂತಿಮವಾಗಿ ಭಾರತ 2–5 ಅಂತರದಲ್ಲಿ ಸೋಲು ಅನುಭವಿಸಿತು. ಆ ಮೂಲಕ 9ನೇ ಬಾರಿ ಒಲಂಪಿಕ್ಸ್ ಚಿನ್ನ ಗೆಲ್ಲುವ ಅವಕಾಶ ತಪ್ಪಿದ್ದು, ಮುಂದಿನ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಹೋರಾಡಲಿದೆ.