Advertisement

ಎರಡು ತಿಂಗಳಲ್ಲಿ  9,403 ಶೌಚಾಲಯ ನಿರ್ಮಾಣ

03:45 AM Feb 06, 2017 | Team Udayavani |

ಚಾಮರಾಜನಗರ: ಬಯಲು ಶೌಚ ಗೌರವಕ್ಕೆ ಕುಂದು ಎಂದು ವಿದ್ಯಾರ್ಥಿನಿಯರು ಪೋಷಕರಿಗೆ  ಅರಿವು ಮೂಡಿಸಿದ್ದರ ಪರಿಣಾಮ ಎರಡೇ ತಿಂಗಳಲ್ಲಿ ಜಿಲ್ಲೆಯಲ್ಲಿ 9,403 ಶೌಚಾಲಯಗಳು ನಿರ್ಮಾಣವಾಗಿದೆ. ದೇಶದಲ್ಲೇ ಪ್ರಥಮವಾಗಿ ಬಾಲಕಿಯರನ್ನು ಕೇಂದ್ರವಾಗಿಟ್ಟುಕೊಂಡು ನಡೆಸಿದ “ಉಷಾ’ ಎಂಬ ಆಂದೋಲನದ ಪರಿಣಾಮವಿದು.

Advertisement

ಉಷಾ ಕಾರ್ಯಕ್ರಮದ ರೂವಾರಿ ಜಿ.ಪಂ. ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ. ಸರ್ಕಾರ ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸುವುದಕ್ಕಿಂತ ಹೆಚ್ಚಾಗಿ ಎಲ್ಲ ವಯೋಮಾನದವರನ್ನೂ, ಸ್ಥಳೀಯ ಸಂಸ್ಥೆಗಳನ್ನು ಬಳಸಿಕೊಂಡು ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೇರಣೆ ನೀಡುವುದು ಕಾರ್ಯಕ್ರಮದ ಉದ್ದೇಶ. ಇದು ನಿರೀಕ್ಷೆಗಿಂತ ಹೆಚ್ಚು ಪರಿಣಾಮ ಬೀರಿ ಶೌಚಾಲಯ ನಿರ್ಮಾಣ ಹೆಚ್ಚಿನ ಸಂಖ್ಯೆಯಲ್ಲಾಗಿದೆ.

USHA-Understand, Sensitise, Help, Achieve  (ತಿಳಿವಳಿಕೆ, ಸಂವೇದನೆ, ಸಹಾಯ, ಸಾಧನೆ) ಈ ಕಾರ್ಯಕ್ರಮದ ಘೋಷ ವಾಕ್ಯ. ಕಾರ್ಯಕ್ರಮವನ್ನು ಸಾಮಾನ್ಯ ಜನರ ಮನಸ್ಸಿಗೆ ತಲುಪಿಸಲು ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕೆಲಸವನ್ನು ಮೊದಲು ಮಾಡಲಾಯಿತು. ಇದರನ್ವಯ ಪ್ರತಿ ಗ್ರಾಮ ಪಂಚಾಯಿತಿಗೂ ಒಬ್ಬರು ಮಾರ್ಗದರ್ಶಿ ಶಿಕ್ಷಕರನ್ನು  ನಿಯೋಜನೆ ಮಾಡಲಾಯಿತು. 

ಇವರು ತಮ್ಮ ವ್ಯಾಪ್ತಿಯ ಶಾಲಾ ಮಕ್ಕಳಿಗೆ ವಿಶೇಷವಾಗಿ ಹೆಣ್ಣು ಮಕ್ಕಳಿಗೆ  ಅರಿವು, ವೈಯಕ್ತಿಕ ಸ್ವತ್ಛತೆ, ವಯೋಸಹಜವಾಗಿ ಆಗುವ ಮಾನಸಿಕ ಮತ್ತು ದೈಹಿಕ ಬದಲಾವಣೆಗಳ ಬಗ್ಗೆ ಪ್ರಮುಖವಾಗಿ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡಿದರು. ಇದರಿಂದಾಗಿ ಹೆಣ್ಣು ಮಕ್ಕಳು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಂತೆ ಪೋಷಕರಿಗೆ ಒತ್ತಾಯ ಮಾಡಿದರು. ಪೋಷಕರೂ  ಸ್ವತ್ಛತೆ ಕುರಿತು ಅರಿವು ಪಡೆದುಕೊಂಡರು. ಇದರ ಪ್ರಭಾವದಿಂದ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣದ ಪ್ರಗತಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ 50 ಸಾವಿರ ಶೌಚಾಲಯ ನಿರ್ಮಾಣ ಗುರಿ ಹೊಂದಲಾಗಿತ್ತು. 

ಕಳೆದ ವರ್ಷದ ನ. 24ರವರೆಗೆ  ಜಿಲ್ಲೆಯಾದ್ಯಂತ 8788 ಶೌಚಾಲಯಗಳು ಮಾತ್ರ ನಿರ್ಮಾಣಗೊಂಡಿದ್ದವು. ಜಿಪಂ ಸಿಇಒ ಹೆಪ್ಸಿಬಾರಾಣಿ ಅವರು ನ. 24 ರಂದು ಉಷಾ ಆಂದೋಲನ ಪ್ರಾರಂಭಿಸಿ, ಅಭಿಯಾನವನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಿದ ಬಳಿಕ 2 ತಿಂಗಳ ಅವಧಿಯಲ್ಲಿ 9403 ಶೌಚಾಲಯಗಳನ್ನು ನಿರ್ಮಿಸಲಾಗಿದೆ. 9053 ಶೌಚಾಲಯಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

Advertisement

ಜಿಲ್ಲೆಯಲ್ಲಿ 130 ಗ್ರಾಪಂಗಳಿದ್ದು, ಇದರಲ್ಲಿ 2016-17ನೇ ಸಾಲಿನಲ್ಲಿ ಚಾಮರಾಜನಗರ ತಾಲೂಕಿನ ಮಂಗಲ ಗ್ರಾಪಂನಲ್ಲಿ 318, ಕೊತ್ತಲವಾಡಿ ಗ್ರಾಪಂನಲ್ಲಿ 291, ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಪಂನಲ್ಲಿ 248, ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಪಂನಲ್ಲಿ 256 ಹಾಗೂ ಯಳಂದೂರು ತಾಲೂಕಿನ ಹೊನ್ನೂರು ಗ್ರಾಪಂನಲ್ಲಿ  208 ಶೌಚಾಲಯ ನಿರ್ಮಾಣವಾಗಿವೆ.

ಬಯಲು ಶೌಚ ಮುಕ್ತ ಗ್ರಾಮ:  ತಾಲೂಕಿನ ಉಮ್ಮತ್ತೂರು ಪಂಚಾಯಿತಿಯಲ್ಲಿ 2016-17ನೇ ಸಾಲಿನಲ್ಲಿ 200 ಶೌಚಾಲಯ ನಿರ್ಮಾಣವಾಗಿದ್ದು, ಇನ್ನೂ 96 ಶೌಚಾಲಯ ಕಾಮಗಾರಿ ಪ್ರಗತಿಯಲ್ಲಿದೆ. ಈ ಶೌಚಾಲಯಗಳು ಪೂರ್ಣಗೊಂಡರೆ ಈ ಪಂಚಾಯಿತಿ ಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತವಾಗಲಿದೆ.

ಉಷಾ ಆಂದೋಲನದ ಪ್ರಭಾವ
ಜಿಲ್ಲೆಯಲ್ಲಿ ಕೇವಲ 2 ತಿಂಗಳ ಅವಧಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಶೌಚಾಲಯಗಳು ನಿರ್ಮಾಣಗೊಂಡಿರುವುದಕ್ಕೆ  ಉಷಾ ಆಂದೋಲನ ಕಾರಣ. ಆಂದೋಲನವನ್ನು ನ. 25ರಿಂದ ಜ. 24ರವರೆಗೆ ನಡೆಸಿ ಸಮಾರೋಪಗೊಳಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಪ್ರಗತಿ ಹಾದಿಯನ್ನು ಗಮನಿಸಿ ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್‌ 8ರವರೆಗೆ  ಆಂದೋಲನವನ್ನು ವಿಸ್ತರಣೆ ಮಾಡಲಾಗಿದೆ.

ಹೆಣ್ಣು ಮಕ್ಕಳಿಗಾಗಿ ಹಮ್ಮಿಕೊಂಡ ದೇಶದಲ್ಲೇ ಪ್ರಥಮ ಕಾರ್ಯಕ್ರಮವಿದು. ಶಾಲಾ ಮಕ್ಕಳು, ಪಂಚಾಯ್ತಿ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತರನ್ನು ಇದಕ್ಕಾಗಿ ಅಭಿನಂದಿಸುತ್ತೇನೆ. ಶೇ.100ರಷ್ಟು ಗುರಿ ಮುಟ್ಟುವ ಆಶಾವಾದ ಹೊಂದಿದ್ದೇವೆ.
– ಹೆಪ್ಸಿಬಾರಾಣಿ ಕೊರ್ಲಪಾಟಿ, ಸಿಇಒ, ಜಿ.ಪಂ. ಚಾ.ನಗರ

– ಕೆ.ಎಸ್‌.ಬನಶಂಕರ ಆರಾಧ್ಯ
 

Advertisement

Udayavani is now on Telegram. Click here to join our channel and stay updated with the latest news.

Next