ಬೆಂಗಳೂರು: ಕಾಂಗ್ರೆಸ್ ಒಂದು ಸುಡುವ ಮನೆ, ಅಲ್ಲಿ ದಲಿತರಿಗೆ ಭವಿಷ್ಯವಿಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ನ್ನು ವಿಸರ್ಜಿಸಲು ಮಹಾತ್ಮ ಗಾಂಧೀಜಿ ಅವರೇ ಹೇಳಿದ್ದರು. ಹೀಗಾಗಿ ಈಗಿರುವ ನಕಲಿ ಗಾಂಧಿಗಳ ಕಾಂಗ್ರೆಸ್ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಮಂತ್ರಿಯಾಗಿದ್ದ ಅಂಬೇಡ್ಕರ್ ಅವರು ನೆಹರೂ ಅವರನ್ನು ವಿರೋಧಿಸಿ ರಾಜೀನಾಮೆ ಕೊಟ್ಟು ಹೊರ ಬಂದ ವಿಚಾರವನ್ನು ಕಾಂಗ್ರೆಸಿಗರು ಯಾತ್ರೆ ಮಾಡಿ ಜನರಿಗೆ ಹೇಳಲಿ ಎಂದು ಸವಾಲು ಹಾಕಿದರು.
ಅಂಬೇಡ್ಕರ್ ಅವರ ಆಪ್ತ ಸಹಾಯಕರಾಗಿದ್ದ ಕಾರಜೋಳಕರ್ ಅವರನ್ನು ಅಂಬೇಡ್ಕರ್ ವಿರುದ್ಧವೇ ಚುನಾವಣೆಗೆ ನಿಲ್ಲಿಸಿದ್ದು ಕಾಂಗ್ರೆಸಿಗರು. ನೆಹರೂ, ಇಂದಿರಾ, ರಾಜೀವ್ ಗಾಂದಿ ಅವರಿಗೆ ಭಾರತರತ್ನ ಕೊಟ್ಟ ಕಾಂಗ್ರೆಸ್ 1970ರಲ್ಲೇ ಕಾರಜೋಳಕರ್ ಅವರಿಗೆ ಪದ್ಮಭೂಷಣವನ್ನೂ ನೀಡಿತ್ತು. ಆದರೆ, ಅಂಬೇಡ್ಕರ್‌ಗೆ ಭಾರತರತ್ನ ಕೊಟ್ಟಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ.
ಕಾಂಗ್ರೆಸಿಗರೇ ಚುನಾವಣೆಯಲ್ಲಿ ಅಂಬೇಡ್ಕರ್‌ರನ್ನು ಸೋಲಿಸಿದ್ದು. ನಂತರ ಅವರು ಗೆದ್ದ ಪವಿತ್ರ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟರು. ಗಾಂಧಿ ಕುಟುಂಬಕ್ಕೆ ದೆಹಲಿಯಲ್ಲಿ 100 ಎಕರೆ ಕೊಟ್ಟವರು ಅಂಬೇಡ್ಕರ್ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಇದನ್ನೆಲ್ಲಾ ಕಾಂಗ್ರೆಸಿಗರು ಜನರಿಗೆ ತಿಳಿಸಲಿ. ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ನ್ನು ವಿಸರ್ಜಿಸಿ ಎಂದು ಮಹಾತ್ಮ ಗಾಂಧೀಜಿ ಹೇಳಿದ ಮೇಲೂ ಏಕೆ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸಿದರಲ್ಲದೆ, ನೆಹರೂ ನಂತರ ನಿಮಗೆ ಗಾಂಧಿ ಹೆಸರು ಬಂದದ್ದು ಹೇಗೆ? ಈ ಕಾಂಗ್ರೆಸ್ ನಕಲಿ ಗಾಂಧಿಗಳ ಪಕ್ಷ ಎಂದು ಪ್ರತಿಪಾದಿಸಿದರು.