ಪಣಂಬೂರು: ಕುಳಾಯಿ ಕಿರು ಜೆಟ್ಟಿ ನಿರ್ಮಾಣ ಕಾಮಗಾರಿಯಿಂದ ನಾಡದೋಣಿಗಳಿಗೆ ಯಾವುದೇ ಪ್ರಯೋಜನವಿಲ್ಲದಂತಾಗಿದ್ದು ನಾಡದೋಣಿ ಮೀನುಗಾರರಿಂದ ಭಾರೀ ಪ್ರತಿಭಟನೆ, ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ರಾಜ್ಯ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರು ನಿರ್ಮಾಣ ಕಾಮಗಾರಿಯ ಜವಾಬ್ದಾರಿ ಹೊತ್ತಿರುವ ಎನ್‌ಎಂಪಿಎ ಅಧಿಕಾರಿಗಳ ಜತೆ ನ. 27ರಂದು ಪಣಂಬೂರು ಎನ್‌ಎಂಪಿಎ ಕಚೇರಿಯಲ್ಲಿ ಸಮಾಲೋಚನ ಸಭೆ ನಡೆಸಿದರು.
ಸ್ಥಳೀಯ ಶಾಸಕರಾದ ಡಾ| ಭರತ್ ಶೆಟ್ಟಿ ವೈ., ಶಾಸಕ ಯಶ್‌ಪಾಲ್ ಸುವರ್ಣ ಹಾಗೂ ಮೀನುಗಾರರು ಉಪಸ್ಥಿತರಿದ್ದು ಅಭಿಪ್ರಾಯ ಮಂಡಿಸಿದರು.ನಾಡದೋಣಿಗಳಿಗೆ ಪೂರಕವಾಗಿ ಸರ್ವಋತು ಬಂದರು ನಿರ್ಮಾಣದ ಅಗತ್ಯತೆ ಬಗ್ಗೆ ವಿವರಿಸಿದರು.
ಎನ್‌ಎಂಪಿಎ ಕಿರು ಜೆಟ್ಟಿ ನಿರ್ಮಿಸಿ ರಾಜ್ಯ ಸರಕಾರಕ್ಕೆ ಹಸ್ತಾಂತರಿಸುವ ಜವಾಬ್ದಾರಿಯನ್ನು ಹೊಂದಿದೆ. ಉಳಿದಂತೆ ಕುಳಾಯಿ ಜೆಟ್ಟಿಯನ್ನು ಕೇಂದ್ರದ ನಿಯಮದಂತೆ ಪುಣೆಯ ಸೆಂಟ್ರಲ್ ವಾಟರ್ ಮತ್ತು ಪವರ್ ರಿಸರ್ಚ್ ಸ್ಟೇಷನ್ ಅಧ್ಯಯನ ಆಧಾರದ ಮೇಲೆ ಕೇಂದ್ರದ ಕೋಸ್ಟಲ್ ಎಂಜಿನಿಯರಿಂಗ್ ಫಿಶರೀಸ್ ಡಿಪಿಆರ್ ಮಾಡಿತ್ತು. ಈ ವಿನ್ಯಾಸದಂತೆ ಮಳೆಗಾಲದಲ್ಲೂ ನಾಡದೋಣಿಗಳು ಸುರಕ್ಷತೆಯಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತದೆ ಎಂಬುದು ತಜ್ಞ ಸಂಸ್ಥೆಯ ಅಭಿಪ್ರಾಯವಾಗಿದೆ ಎಂದು ಎನ್‌ಎಂಪಿಎ ಅಧಿಕಾರಿಗಳು ಅಧ್ಯಯನ ವರದಿಯನ್ನು ಮಂಡಿಸಿದರು.
ರಾಜ್ಯದ ಮೀನುಗಾರಿಕಾ ಇಲಾಖೆ ಅನುಮೋದನೆಯೊಂದಿಗೆ ಬಂದರು ನಿರ್ಮಾಣದ ಸಂದರ್ಭ ಸಾರ್ವಜನಿಕ ಸಭೆ ಅಹವಾಲು ಆಲಿಸಲಾಗಿತ್ತು. ಮೀನುಗಾರರು ಪ್ರಸ್ತುತ ಮುಂದಿಡುತ್ತಿರುವ ಬೇಡಿಕೆ, ಸಮಸ್ಯೆಯ ಬಗ್ಗೆ ಈ ಹಿಂದೆ ಸಾರ್ವಜನಿಕ ಸಭೆಯ ಮುಂದೆ ಬಂದಿರಲಿಲ್ಲ ಎಂಬುದನ್ನು ಎನ್‌ಎಂಪಿಎ ಆಧಿಕಾರಿಗಳು ಸಚಿವರಿಗೆ ವಿವರಿಸಿದರು.ಸಾಂಪ್ರದಾಯಿಕ ಮೀನುಗಾರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದು ತಮ್ಮ ಅಹವಾಲು ಬೇಡಿಕೆ ಮಂಡಿಸಿದರು.
ಪ್ರಸ್ತುತ ಸಚಿವರ ಆದೇಶದಂತೆ ಐಐಟಿ ಚೆನ್ನೈ ತಜ್ಞರಿಂದ ಈಗಿನ ಬ್ರೇಕ್ ವಾಟರ್ ಹಾಗೂ ಕುಳಾಯಿ ಕಿರು ಜೆಟ್ಟಿಯ ವಿನ್ಯಾಸ ಸರ್ವಋತು ಬಂದರಿಗೆ ಯೋಗ್ಯವೆ ಎಂಬುದರ ಬಗ್ಗೆ 10 ದಿನದ ಒಳಗಾಗಿ ವರದಿ ಪಡೆದು ಮುಂದಿನ ಕಾಮಗಾರಿಯ ಬಗ್ಗೆ ಕಾರ್ಯೋನ್ಮುಖವಾಗಲು ನಿರ್ಧರಿಸಲಾಯಿತು.