Advertisement

Udupi: ನಮ್ಮ ಶೌಚಾಲಯ ನಮ್ಮ ಗೌರವ ತಿಂಗಳ ಆಂದೋಲನಕ್ಕೆ ಚಾಲನೆ

09:36 AM Nov 20, 2024 | Team Udayavani |

ಉಡುಪಿ: ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ ನ.19 ರಿಂದ ಡಿ.10 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

Advertisement

ಜಿ.ಪಂ.ನ ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ನಡೆದ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಜಾಗೃತಿ ಮೂಡಿಸುವುದು, ಪ್ರತಿನಿತ್ಯ ಶೌಚಾಲಯಗಳನ್ನು ಬಳಸುವಂತೆ ಜನ ಸಾಮಾನ್ಯರಿಗೆ ಪ್ರೇರೇಪಿಸುವ ಉದ್ದೇಶದಿಂದ ಪ್ರತಿವರ್ಷ ನ.19ರಂದು ವಿಶ್ವ ಶೌಚಾಲಯ ದಿನ ಆಚರಿಸಲಾಗುತ್ತಿದೆ ಎಂದರು.

ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ಪ್ರಸಕ್ತ ವರ್ಷ ನಮ್ಮ ಶೌಚಾಲಯ ನಮ್ಮ ಗೌರವ ಎಂಬ ಶೀರ್ಷಿಕೆ ಹಾಗೂ ಅಂದದ ಶೌಚಾಲಯ ಆನಂದದ ಜೀವನ ಎಂಬ ಘೋಷ ವಾಕ್ಯದೊಂದಿಗೆ ವಿಶೇಷ ಆಂದೋಲನವನ್ನು ಆಯೋಜಿಸಲಾಗಿದೆ ಎಂದರು.

ತಾ.ಪಂ.ಗಳಲ್ಲಿ ಶಿಫಾರಸುಗೊಂಡ ಅತ್ಯುತ್ತಮ ಗೃಹ ಶೌಚಾಲಯಗಳ ಪೈಕಿ 5ನ್ನು ಆಯ್ಕೆ ಮಾಡಲಾಗುವುದು. ಸಮುದಾಯ ಶೌಚಾಲಯಗಳ ಪೈಕಿ 5ನ್ನು ಆಯ್ಕೆ ಮಾಡಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

Advertisement

ದುರಸ್ತಿ ಕಾರ್ಯಕ್ಕೆ ಸೂಚನೆ: ಶಾಲಾ ಮಟ್ಟದಲ್ಲಿ ವಾಷ್‌ಟಬ್‌ಗಳನ್ನು ಪ್ರಾರಂಭಿಸಿ, ಮಕ್ಕಳಲ್ಲಿಯೂ ಸಹ ಶೌಚಾಲಯಗಳ ಬಳಕೆ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳ ಪ್ರಮಾಣಕ್ಕೆ ಅನುಗುಣವಾಗಿ ಶೌಚಾಲಯಗಳು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಶಾಲೆಗಳಲ್ಲಿ ಶೌಚಾಲಯಗಳು ಹಾಳಾಗಿದ್ದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದರು.

ಜಿಲ್ಲಾ ಮಟ್ಟದ ಸ್ಪರ್ಧೆ: ವಿಶೇಷ ಆಂದೋಲನ ಅಂಗವಾಗಿ ಎಲ್ಲ ತಾಲೂಕು, ಗ್ರಾ.ಪಂ.ಗಳಲ್ಲಿ ಶೌಚಾಲಯ ಬಳಕೆ ಕುರಿತು ಸಮೀಕ್ಷೆ ನಡೆಸಲಾಗುವುದು. ಗೃಹ ಶೌಚಾಲಯಗಳನ್ನು ನಿರಂತರವಾಗಿ ಬಳಸುವ ಫ‌ಲಾನುಭವಿಗಳನ್ನು ಗುರುತಿಸಿ ಬಹುಮಾನ ನೀಡಿ ಗೌರವಿಸಲಾಗುವುದು. ಸ್ಪರ್ಧೆ ಆಯೋಜಿಸಿ ಅತ್ಯುತ್ತಮ ವೈಯಕ್ತಿಕ ಗೃಹ ಶೌಚಾಲಯಗಳನ್ನು ಗುರುತಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು ಎಂದರು.

ವಿಶೇಷ ಶಿಬಿರ: ಸ್ವತ್ಛತಾ ಕಾರ್ಮಿಕರಿಗೆ ವಿಶೇಷ ಶಿಬಿರ ಆಯೋಜಿಸಲಾಗುವುದು. ಶೌಚಾಲಯ ರಹಿತ ಅರ್ಹ ಫ‌ಲಾನುಭವಿಗಳನ್ನು ಗುರುತಿಸಿ ಶೌಚಾಲಯ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಸಮುದಾಯ ಶೌಚಾಲಯಗಳನ್ನು ಶುಚಿತ್ವಗೊಳಿಸಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಹಾಗೂ ಅವುಗಳ ಸೌಂದರ್ಯೀಕರಣಕ್ಕೆ ಆಂದೋಲನ ಹಮ್ಮಿಕೊಳ್ಳಲಾಗುವುದು. ಶಾಲೆಗಳಲ್ಲಿ ಈ ಕುರಿತು ನಾಟಕ, ಕಿರುಚಿತ್ರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರೊಂದಿಗೆ ಸಾಮಾಜಿಕ ಜಾಣತಾಣಗಳಲ್ಲಿಯೂ ಶೌಚಾಲಯ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಜಿ.ಪಂ. ಸಿಇಒ ಪ್ರತೀಕ್‌ ಬಾಯಲ್‌, ಜಿ.ಪಂ.ಮುಖ್ಯ ಯೋಜನಾಧಿಕಾರಿ ಉದಯ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ಅಭಿಯಾನದ ಮುಖ್ಯ ಉದ್ದೇಶ ವೈಯಕ್ತಿಕ ಮತ್ತು ಸಮುದಾಯ ಶೌಚಾಲಯಗಳ ಬಳಕೆ ಹೆಚ್ಚಿಸುವ ಜತೆಗೆ ಸುಸ್ಥಿರತೆ ಕಾಪಾಡುವುದು. ಈ ಸ್ಥಳಗಳನ್ನು ವರ್ಣ ರಂಜಿತ ಸ್ಥಳಗಳಾಗಿ ಪರಿವರ್ತಿಸಲು ಚಿತ್ರಕಲೆ ಬಿಡಿಸುವುದು, ನಿರುಪಯುಕ್ತ ಶೌಚಾಲಯಗಳನ್ನು ದುರಸ್ತಿ ಮಾಡಿ ಬಳಕೆಗೆ ಯೋಗ್ಯ ರೀತಿಯಲ್ಲಿ ಪರಿವರ್ತಿಸುವುದು ಸೇರಿದಂತೆ ಎಲ್ಲ ಶೌಚಾಲಯಗಳು ಕ್ರಿಯಾತ್ಮಕವಾಗಿದೆ ಹಾಗೂ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ಡಿಸಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next