Advertisement

Mangaluru: ನಗರದ ಹಲವು ಶೌಚಾಲಯಗಳು ಬಂದ್‌

02:40 PM Dec 06, 2024 | Team Udayavani |

ಮಹಾನಗರ: ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಪ್ರತಿದಿನ ರಾಜ್ಯ ಹಾಗೂ ಹೊರ ರಾಜ್ಯದ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಆದರೆ ನಗರದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಯೋಗ್ಯವಾದ ಶೌಚಾಲಯಗಳಿಲ್ಲ. ಕೆಲವು ಜಂಕ್ಷನ್‌ಗಳಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿ ಪರಿಣಮಿಸಿದೆ. ಇನ್ನು ಕೆಲವು ಶೌಚಾಲಯಗಳು ಸ್ವತ್ಛತೆಯ ಕೊರತೆಯಿಂದಾಗಿ ಬಳಕೆಗೆ ಅಯೋಗ್ಯವಾಗಿವೆ.

Advertisement

ಸಾರ್ವಜನಿಕ ಶೌಚಾಲಯವಿಲ್ಲದ ಕಾರಣ ಹಲವು ಪ್ರಯಾಣಿಕರು ಪೆಟ್ರೋಲ್‌ ಪಂಪ್‌, ಬಸ್‌ ನಿಲ್ದಾಣ ಅವಲಂಬಿಸಿಕೊಂಡಿದ್ದಾರೆ. ಅನೇಕರು ಬೀದಿ ಬದಿಯಲ್ಲಿ ಮರ ಗಿಡಗಳ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

ಅತೀ ಹೆಚ್ಚು ಬಸ್‌ಗಳು ಓಡಾಡುವ ನಗರದ ಜ್ಯೋತಿ ಜಂಕ್ಷನ್‌ನ ಬಸ್‌ ನಿಲ್ದಾಣದಲ್ಲಿ ಅತ್ಯಧಿಕ ಪ್ರಯಾಣಿಕರು ಬಸ್‌ ಏರುತ್ತಾರೆ. ಇದರ ಪಕ್ಕದಲ್ಲೇ ಶೌಚಾಲಯವಿದೆ. ಆದರೆ ಅದಕ್ಕೆ ಬೀಗ ಜಡಿಯಲಾಗಿದ್ದು, ಸಾರ್ವಜನಿಕರ ಬಳಕೆಗೆ ಸಿಗದಂತಾಗಿದೆ. ಅನೇಕ ಹಿರಿಯ ನಾಗರಿಕರು, ಮಹಿಳೆಯರು ಪರದಾಡುವಂತಾಗಿದೆ. ಪಂಪ್‌ವೆಲ್‌ ಹಾಗೂ ಕದ್ರಿ ಮೈದಾನದ ಬಳಿ ಇರುವ ಶೌಚಾಲಯಗಳು ಬಳಕೆ ಸಿಗದಂತಾಗಿದೆ. ಬೊಂದೇಲ್‌, ಹಂಪನಕಟ್ಟೆಯ ಶೌಚಾಲಯಗಳಲ್ಲಿ ನಿರ್ವಹಣೆಯ ಕೊರತೆಯಿದೆ.

ಬಂದ್‌ ಆಗಲು ಕಾರಣಗಳೇನು?
-ನಗರದ ಕೆಲವೊಂದು ಶೌಚಾಲಯಗಳ ನಿರ್ವಹಣೆ ಸರಿ ಇಲ್ಲದೆ ಅಲ್ಲಿಗೆ ಜನರು ಹೋಗುವುದಿಲ್ಲ. ಹೀಗಾಗಿ ಅದರ ನಿರ್ವಹಣೆ ಸಾಧ್ಯವಾಗುತ್ತಿಲ್ಲ.
-ಕೆಲವು ಶೌಚಾಲಯಗಳಲ್ಲಿ ನೀರಿನ ಕೊರತೆ, ಮಲ-ಮೂತ್ರಗಳ ನಿರ್ವಹಣೆ ಸರಿ ಇಲ್ಲದಿರುವ ಕಾರಣಕ್ಕೆ ಮಹಾನಗರ ಪಾಲಿಕೆಗೇ ಬಾಗಿಲು ಹಾಕಿದೆ.
-ಕೆಲವು ಕಡೆಗಳಲ್ಲಿ ಜನರೇ ಬಳಕೆ ಮಾಡುವುದು ಕಡಿಮೆ. ಅಲ್ಲಿ ಸಂಸ್ಥೆಗಳಿಗೆ ಜನ ಇಟ್ಟು ನಿರ್ವಹಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ಬಾಗಿಲು ಹಾಕಿವೆ.

Advertisement

ನಿರ್ವಹಣೆ ಕೊರತೆಗಾಗಿ ಬೀಗ
ನಗರದ ಕೆಲವೇ ಕೆಲವು ಜಂಕ್ಷನ್‌ಗಳಲ್ಲಿ ಶೌಚಾಲಯಗಳಿವೆ. ಆದರೆ, ಅವುಗಳೆಲ್ಲವೂ ನಿರ್ವಹಣೆಯ ಕೊರತೆಯಿಂದ ಸೊರಗಿವೆ. ಗಬ್ಬು ವಾಸನೆಯಿಂದ ಕೂಡಿದ್ದು, ಬಳಕೆಗೆ ಅಯೋಗ್ಯವಾಗಿವೆ. ಕೆಲವು ಶೌಚಾಲಯಗಳಲ್ಲಿ ನೀರಿನ ಕೊರತೆಯಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಶೌಚಾಲಯದ ನೀರು ಸುಗಮವಾಗಿ ಹರಿದು ಹೋಗದೆ ಶೌಚಾಲಯದಲ್ಲೇ ತುಂಬಿಕೊಳ್ಳುತ್ತದೆ. ಇಂತಹ ಕೆಲವು ಶೌಚಾಲಯಗಳಿಗೆ ಪಾಲಿಕೆ ಬೀಗ ಜಡಿದಿದೆ ಎನ್ನಲಾಗಿದೆ.

ಬಳಕೆಗೆ ಸಿಗುತ್ತಿಲ್ಲ ಸ್ಟೇಟ್‌ಬ್ಯಾಂಕ್‌ ಶೌಚಾಲಯ
ಸ್ಟೇಟ್‌ಬ್ಯಾಂಕ್‌ನಲ್ಲಿ ಈ ಹಿಂದೆ ಇದ್ದ ಶೌಚಾಲಯವೇನೋ ಸುಸ್ಥಿತಿಯಲ್ಲಿದೆ. ಆದರೆ ಅದನ್ನು ಬಳಸುವುದೇ ಸಾಹಸ. ಶೌಚಾಲಯದ ಮುಂದೆ ಬಸ್‌ಗಳನ್ನು ನಿಲ್ಲಿಸುತ್ತಿದ್ದು, ಸಾರ್ವಜನಿಕರಿಗೆ ದಾರಿ ಇಲ್ಲದಂತಾಗಿದೆ. ಮಹಿಳೆಯರು ಮಕ್ಕಳು ಈ ಶೌಚಾಲಯಗಳತ್ತ ತೆರಳಲಾಗದೆ ಪರದಾಡುವ ಸ್ಥಿತಿ ಇದೆ. ಇನ್ನು ಸ್ಟೇಟ್‌ಬ್ಯಾಂಕ್‌ನಲ್ಲಿ ಹೊಸದಾಗಿ ಎರಡು ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇದು ಸಾರ್ವಜನಿಕ ಬಳಕೆಗೆ ನೀಡದೆ ಬೀಗ ಹಾಕಲಾಗಿದೆ.

ಪಾಲಿಕೆಯ ಜವಾಬ್ದಾರಿ
ಸಾರ್ವಜನಿಕ ಹಿತವನ್ನು ಗಮನದಲ್ಲಿರಿಸಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕು. ಶೌಚಾಲಯ ನಿರ್ವಹಣೆಗೆ ಸಿಬಂದಿ ನಿಯೋಜಿಸಬೇಕು. ಸಾರ್ವಜನಿಕರಿಂದ ನಿರ್ದಿಷ್ಟ ಶುಲ್ಕ ಸಂಗ್ರಹಿಸಬೇಕು. ಶೌಚಾಲಯಗಳಿಗೆ ಗುಣಮಟ್ಟದ ಪರಿಕರಗಳನ್ನು ಅಳವಡಿಸುವುದು. ಸಮಸ್ಯೆ ಕಂಡು ಬಂದ ತತ್‌ಕ್ಷಣ ಬೀಗ ಜಡಿಯುವ ಬದಲು ದುರಸ್ತಿ ಗೊಳಿಸಿ ಸಾರ್ವಜನಿಕ ಬಳಕೆಗೆ ಯೋಗ್ಯವಾಗಿಸಬೇಕು.

ಹಲವು ಜಂಕ್ಷನ್‌ಗಳಲ್ಲಿ ಶೌಚಾಲಯಗಳೇ ಇಲ್ಲ
ನಗರದಲ್ಲಿ ಅತೀ ಹೆಚ್ಚು ಜನ ಓಡಾಡುವ ನಂತೂರು, ಕೆಪಿಟಿ, ಬಲ್ಮಠ, ಉರ್ವ, ಕಂಕನಾಡಿ, ಕೊಟ್ಟಾರಚೌಕಿ, ಕಾವೂರು, ಮಲ್ಲಿಕಟ್ಟೆ, ಕರಾವಳಿ ಜಂಕ್ಷನ್‌ ಸಹಿತ ಇತರ ಕೆಲವು ಪ್ರಮುಖ ಜಂಕ್ಷನ್‌ಗಳಲ್ಲಿ ಶೌಚಾಲಯಗಳೇ ಇಲ್ಲ. ಪ್ರತೀ ಜಂಕ್ಷನ್‌ಗಳಲ್ಲೂ ನೂರಾರು ಪ್ರಯಾಣಿಕರು ಆಗಮಿಸುತ್ತಾರೆ. ಈ ಸಂದರ್ಭ ಅಗತ್ಯ ಬಿದ್ದಲ್ಲಿ ಬಳಸಲು ಶೌಚಾಲಯಗಳೇ ಇಲ್ಲ.

ಪರಿಶೀಲನೆ ನಡೆಸಿ ಅಗತ್ಯ ಕ್ರಮ
ಕೆಲವು ಜಂಕ್ಷನ್‌ಗಳಲ್ಲಿ ಶೌಚಾಲಯವನ್ನು ಜನ ಬಳಸದೇ ಇರುವ ಕಾರಣ ಟೆಂಡರ್‌ ಪಡೆಯಲು ಯಾರೂ ಮುಂದಾಗುತ್ತಿಲ್ಲ. ಸಾರ್ವಜನಿಕರಿಗೆ ಅತೀ ಅಗತ್ಯ ಇರುವ ಭಾಗದಲ್ಲಿ ಪರಿಶೀಲನೆ ನಡೆಸಿ ಅಗತ್ಯವಿದ್ದಲ್ಲಿ ಸಿಎಸ್‌ಆರ್‌ ಫಂಡ್‌ ಮೂಲಕ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಸ್ಟೇಟ್‌ಬ್ಯಾಂಕ್‌ ಬಳಿ ನಿರ್ಮಿಸಿರುವ ಟಾಯ್ಲೆಟ್‌ಗಳನ್ನು ಶೀಘ್ರ ಉದ್ಘಾಟಿಸುತ್ತೇವೆ. – ಮನೋಜ್‌ ಕುಮಾರ್‌, ಪಾಲಿಕೆ ಮೇಯರ್‌

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next