ಅರುಣಾಚಲ ಪ್ರದೇಶದ (Arunachal Pradesh) 83 ಕಿಲೋ ಮೀಟರ್ ದೂರದವರೆಗಿನ ಭಾರತ-ಮ್ಯಾನ್ಮಾರ್(India-Myanmar border)ನ ಅತೀ ದೊಡ್ಡ ಗಡಿ ಪ್ರದೇಶದಲ್ಲಿ ಬೇಲಿ (Fence) ನಿರ್ಮಿಸುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೆತ್ತಿಕೊಂಡಿದೆ.
ಈ ಮಹತ್ವದ ಯೋಜನೆಯ ದಾಖಲೆ ಲಭ್ಯವಾಗಿರುವುದಾಗಿ ಸಿಎನ್ ಎನ್-ನ್ಯೂಸ್ 18 ತನ್ನ ಎಕ್ಸ್ ಕ್ಲೂಸಿವ್ ಮಾಹಿತಿಯಲ್ಲಿ ತಿಳಿಸಿದೆ. ಬೇಲಿ ನಿರ್ಮಾಣ ಕಾರ್ಯವನ್ನು ದ ಬಾರ್ಡರ್ ರೋಡ್ಸ್ ಆರ್ಗನೈಜೇಶನ್ ನಡೆಸಲಿದೆ. ಪ್ರಸ್ತುತ ಭಾರತ-ಮ್ಯಾನ್ಮಾರ್ ಗಡಿಯ ಮಣಿಪುರ ಸಮೀಪದ ಮೋರೆಹ್ ನಲ್ಲಿ ಕೇವಲ 10 ಕಿಲೋ ಮೀಟರ್ ವರೆಗೆ ಬೇಲಿ ನಿರ್ಮಿಸಲಾಗಿದೆ.
ಮಣಿಪುರದ ಮತ್ತೊಂದು ಬದಿಯ 20 ಕಿಲೋ ಮೀಟರ್ ದೂರದವರೆಗಿನ ಬೇಲಿ ನಿರ್ಮಾಣ ಕಾರ್ಯ ಇತ್ತೀಚೆಗಷ್ಟೇ ಮುಕ್ತಾಯಗೊಂಡಿತ್ತು. ಅರುಣಾಚಲ ಪ್ರದೇಶದ 83 ಕಿಲೋ ಮೀಟರ್ ದೂರದ ಹೊಸ ಯೋಜನೆಯು ಭಾರತ-ಮ್ಯಾನ್ಮಾರ್ ಗಡಿಭಾಗದ ಅತೀ ದೊಡ್ಡ ಬೇಲಿ ನಿರ್ಮಾಣ ಕಾರ್ಯ ಇದಾಗಿದೆ. ಇದು ಅರುಣಾಚಲ ಪ್ರದೇಶದ ಬಾರ್ಡರ್ ಪೋಸ್ಟ್ ಸಂಖ್ಯೆ 168 ಮತ್ತು 175ರ ನಡುವಿನ ಗಡಿ ಭಾಗದ 83 ಕಿಲೋ ಮೀಟರ್ ಉದ್ದವನ್ನು ಒಳಗೊಂಡಿದೆ.
ಕಳೆದ ವಾರ BRO (ಬಾರ್ಡರ್ ರೋಡ್ಸ್ ಆರ್ಗನೈಜೇಶನ್), ವಿವರವಾದ ಯೋಜನಾ ವರದಿ (ಡಿಪಿಆರ್) ಅನ್ನು ಸಿದ್ಧಪಡಿಸುವಂತೆ ತಾಂತ್ರಿಕ ಸಿಬ್ಬಂದಿಗೆ ಸೂಚನೆ ನೀಡಿ, ಇದರ ಕಾರ್ಯಾನುಷ್ಠಾನದ ಅಧ್ಯಯನ ನಡೆಸುವಂತೆ ತಿಳಿಸಿತ್ತು.
ಅರುಣಾಚಲ ಪ್ರದೇಶದ ಇಂಡೋ-ಮ್ಯಾನ್ಮಾರ್ ಗಡಿಯ 83 ಕಿಲೋ ಮೀಟರ್ ಉದ್ದದ ಟ್ರ್ಯಾಕ್ ಹಾಗೂ ಬೇಲಿ ಅಳವಡಿಕೆ ಕುರಿತ ನಿರ್ಮಾಣ ಕಾರ್ಯಕ್ಕೂ ಮೊದಲಿನ ಸಿದ್ಧತೆಯ ಕುರಿತ ವಿವರ ನೀಡುವಂತೆಯೂ ಬಿಆರ್ ಒ ತಿಳಿಸಿದೆ. ಅಷ್ಟೇ ಅಲ್ಲ ಬೇಲಿ ನಿರ್ಮಾಣದ ಬಗೆಗಿನ ಡಿಪಿಆರ್ ತಯಾರಿಕೆ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಮಣಿಪುರ ಮತ್ತು ಅರುಣಾಚಲ ಪ್ರದೇಶ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಕೂಡಾ ಸಂದೇಶ ರವಾನಿಸಿತ್ತು.
ಅರುಣಾಚಲ ಪ್ರದೇಶ ಮ್ಯಾನ್ಮಾರ್ ಜತೆ ಎಷ್ಟು ಉದ್ದದ ಗಡಿ ಹೊಂದಿದೆ:
ಅರುಣಾಚಲ ಪ್ರದೇಶ ಮ್ಯಾನ್ಮಾರ್ ಜತೆ ಅತೀ ಉದ್ದದ ಅಂದರೆ ಸುಮಾರು 520 ಕಿಲೋ ಮೀಟರ್ ದೂರದ ಗಡಿಯನ್ನು ಹಂಚಿಕೊಂಡಿದೆ. ಇನ್ನುಳಿದಂತೆ ಮಿಜೋರಾಂ 510 ಕಿಲೋ ಮೀಟರ್, ಮಣಿಪುರ 398 ಕಿಲೋ ಮೀಟರ್ ಹಾಗೂ ನಾಗಾಲ್ಯಾಂಡ್ 215 ಕಿಲೋ ಮೀಟರ್ ಉದ್ದದ ಗಡಿ ಹಂಚಿಕೊಂಡಿದೆ. ಒಟ್ಟಾರೆಯಾಗಿ ಭಾರತ ಮ್ಯಾನ್ಮಾರ್ ಜತೆ 1,643 ಕಿಲೋ ಮೀಟರ್ ಉದ್ದದ ಗಡಿಭಾಗವನ್ನು ಹಂಚಿಕೊಂಡಿದ್ದು, ಇಲ್ಲಿ ಯಾವುದೇ ಬೇಲಿಯನ್ನು ನಿರ್ಮಿಸಿಲ್ಲ.
ಮಣಿಪುರದಲ್ಲಿ ಭುಗಿಲೆದ್ದ ಹಿಂ*ಸಾಚಾರ:
ಕಳೆದ ಒಂದು ವರ್ಷಗಳಿಂದ ಮಣಿಪುರ ಬುಡಕಟ್ಟು ಸಮುದಾಯದ ಹಿಂಸಾಚಾರ ಮತ್ತು ಸಂಘರ್ಷದಿಂದ ನಲುಗಿ ಹೋಗಿದ್ದು, ಸುಮಾರು 200ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದರು. ಇದರ ಪರಿಣಾಮ ಭಾರತ ಮತ್ತು ಮ್ಯಾನ್ಮಾರ್ ನಡುವಿನ ಮುಕ್ತ ಸಂಚಾರದ ಆಡಳಿತವನ್ನು ಕೊನೆಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಮೊದಲ ಹೆಜ್ಜೆಯನ್ನಿಟ್ಟಿತ್ತು. ಅಷ್ಟೇ ಅಲ್ಲ ಇಂಡೋ-ಮ್ಯಾನ್ಮಾರ್ ಗಡಿಯ ಪೂರ್ಣಪ್ರಮಾಣದ ಬೇಲಿ ನಿರ್ಮಾಣದ 31,000 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಿದೆ.
ಎಫ್ ಎಂಆರ್ (ಮುಕ್ತ ಸಂಚಾರ ಆಡಳಿತ) ಅಡಿಯಲ್ಲಿ ಭಾರತ ಮತ್ತು ಮ್ಯಾನ್ಮಾರ್ ನ ನಾಗರಿಕರು ಯಾವುದೇ ದಾಖಲೆ ಇಲ್ಲದೇ 16 ಕಿಲೋ ಮೀಟರ್ ದೂರದವರೆಗೆ ಸಂಚರಿಸಬಹುದಾಗಿತ್ತು.
ಸ್ಮಗ್ಲಿಂಗ್ ಗೆ ರಹದಾರಿಯಾಗಿದ್ದ ಗಡಿಭಾಗ!
ಭಾರತ-ಮ್ಯಾನ್ಮಾರ್ ಗಡಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಸ್ಫೋಟಕ ಮತ್ತು ಮಾದಕ ದ್ರವ್ಯಗಳ ಸ್ಮಗ್ಲಿಂಗ್ ಗೆ ಕುಖ್ಯಾತಿ ಪಡೆದಿತ್ತು. ಅದೇ ರೀತಿ ಗಡಿಭಾಗ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ಎಡೆ ಮಾಡಿಕೊಡುವ ಮಾರ್ಗವಾಗಿತ್ತು. ಅಲ್ಲದೇ ಮ್ಯಾನ್ಮಾರ್ ನಿಂದ ಭಾರೀ ಪ್ರಮಾಣದಲ್ಲಿ ಕಾನೂನು ಬಾಹಿರವಾಗಿ ವಲಸಿಗರು ಒಳನುಸುಳುವ ಮೂಲಕ ಮಣಿಪುರದ ಗುಡ್ಡಗಾಡು ಪ್ರದೇಶದಲ್ಲಿ ಬೃಹತ್ ಪ್ರಮಾಣದ ಗಾಂಜಾ ಬೆಳೆ ಬೆಳೆಸಲು ಅವಕಾಶ ಮಾಡಿಕೊಟ್ಟಿತ್ತು. ಆ ನೆಲೆಯಲ್ಲಿ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ಅಳವಡಿಸಿ, ಎಫ್ ಎಂಆರ್ (ಮುಕ್ತ ಸಂಚಾರ ಆಡಳಿತ) ರದ್ದುಪಡಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧಾರ ತೆಗೆದುಕೊಂಡಿತ್ತು.
ಬೇಲಿ ನಿರ್ಮಾಣಕ್ಕೆ ಬುಡಕಟ್ಟು ಮುಖಂಡರ ವಿರೋಧ!
ಸ್ಥಳೀಯ ಬುಡಕಟ್ಟು ಮುಖಂಡರ ವೇದಿಕೆ (ITLF) ಸೇರಿದಂತೆ ಮಣಿಪುರದ ಬುಡಕಟ್ಟು ಸಂಘಟನೆಗಳು, ಈ Fencing ಪ್ರಾಜೆಕ್ಟ್ ಗೆ ವಿರೋಧ ವ್ಯಕ್ತಪಡಿಸಿವೆ. ಈ ಬೇಲಿ ನಿರ್ಮಾಣದಿಂದ ಉಭಯ ದೇಶಗಳ ನಡುವಿನ ಗಡಿಭಾಗದಲ್ಲಿ ವಾಸಿಸುವ ಬುಡಕಟ್ಟು ಸಮುದಾಯದ ನಡುವಿನ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಸ್ಮಿತೆಗೆ ಧಕ್ಕೆ ಉಂಟಾಗಲಿದೆ ಎಂದು ತಿಳಿಸಿವೆ.
ಇತ್ತೀಚೆಗಷ್ಟೇ ಭಾರತೀಯ ಜನತಾ ಪಕ್ಷದ ಮೈತ್ರಿಕೂಟದ ಎನ್ ಪಿಎಫ್ ಕೂಡಾ, ಮಣಿಪುರದ ನಾಗಾ ಪ್ರಾಬಲ್ಯದ ಪ್ರದೇಶ ಸೇರಿದಂತೆ ಭಾರತ-ಮ್ಯಾನ್ಮಾರ್ ಗಡಿಯ ಬೇಲಿ ನಿರ್ಮಾಣ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ.
*ನಾಗೇಂದ್ರ ತ್ರಾಸಿ