ಬೆಂಗಳೂರು:ತೀವ್ರ ಕುತೂಹಲ ಮೂಡಿಸಿರುವ ಐದು ಕ್ಷೇತ್ರಗಳ ಉಪ ಚುನಾವಣೆ ಮತ ಎಣಿಕೆ ಮಂಗಳವಾರ ನಡೆಯಲಿದ್ದು ಮೂರೂ ಪಕ್ಷಗಳು ಕಾತರದಿಂದ ಕಾಯುತ್ತಿವೆ.
ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭೆ ಹಾಗೂ ರಾಮನಗರ, ಜಮಖಂಡಿ ವಿಧಾನಸಭೆ ಕ್ಷೇತ್ರಗಳಲ್ಲಿ ಮತ ಎಣಿಕೆ ಬೆಳಗ್ಗೆಯೇ ಪ್ರಾರಂಭಗೊಂಡು ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ಶಿವಮೊಗ್ಗದಲ್ಲಿ ಜೆಡಿಎಸ್ ಮೈತ್ರಿಕೂಟದ ಮಧು ಬಂಗಾರಪ್ಪ ಹಾಗೂ ಬಿಜೆಪಿಯ ಬಿ.ವೈ.ರಾಘವೇಂದ್ರ, ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಹಾಗೂ ಬಿಜೆಪಿಯ ಶಾಂತಾ, ಮಂಡ್ಯದಲ್ಲಿ ಜೆಡಿಎಸ್‌ನ ಎಲ್.ಆರ್.ಶಿವರಾಮೇಗೌಡ, ಬಿಜೆಪಿಯ ಸಿದ್ದರಾಮಯ್ಯ, ಜಮಖಂಡಿಯಲ್ಲಿ ಬಿಜೆಪಿಯ ಶ್ರೀಕಾಂತ ಕುಲಕರ್ಣಿ, ಕಾಂಗ್ರೆಸ್‌ನ ಆನಂದ್ ನ್ಯಾಮಗೌಡ ಹಾಗೂ ರಾಮನಗರದಲ್ಲಿ ಜೆಡಿಎಸ್‌ನ ಅನಿತಾಕುಮಾರಸ್ವಾಮಿಯವರ ಭವಿಷ್ಯ ನಿರ್ಧಾರವಾಗಲಿದೆ.
ಜಿದ್ದಾಜಿದ್ದಿನ ಪ್ರಚಾರದ ನಂತರ ನ.3 ರಂದು ಮತದಾನ ನಡೆದ ಬಳಿಕ ಫಲಿತಾಂಶದ ಬಗ್ಗೆ ನಾನಾ ರೀತಿಯ ಲೆಕ್ಕಾಚಾರ ಹಾಕಲಾಗಿದ್ದು ಎಲ್ಲದಕ್ಕೂ ಉತ್ತರ ದೊರೆಯಲಿದೆ. ಉಪ ಚುನಾವಣೆ ಫಲಿತಾಂಶದಿಂದ ರಾಜ್ಯ ರಾಜಕಾರಣದಲ್ಲಿ ಮತ್ತೂಂದು ಹಂತದ ಧ್ರುವೀಕರಣ ನಡೆಯಲಿದೆ. ಈ ಮುಂದಿನ ಲೋಕಸಭೆ ಚುನಾವಣೆಗೆ ಇದು ಸೆಮಿ ಫೈನಲ್ ಎಂಬ ಮಾತುಗಳು ಇರುವುದರಿಂದ ಸಹಜವಾಗಿ ಫಲಿತಾಂಶದ ಬಗ್ಗೆ ಕುತೂಹಲವಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ನಿರಂತರ ಪ್ರವಾಸ ಕೈಗೊಂಡು ಪ್ರಚಾರ ನಡೆಸಿದ್ದರು.
ಜಮಖಂಡಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಸಮ್ಮಿಶ್ರ ಸರ್ಕಾರದ ಪತನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದು, ಬಳ್ಳಾರಿ, ಶಿವಮೊಗ್ಗ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಪುನರ್ ಚಿಂತನೆ ನಡೆಯಲಿದೆ ಎಂಬ ಮಾತುಗಳು ಇವೆ.
ಐದು ಕ್ಷೇತ್ರಗಳಲ್ಲಿ ಗೆಲುವು ದೊರೆತರೆ ಸಮ್ಮಿಶ್ರ ಸರ್ಕಾರ ಮತ್ತಷ್ಟು ಗಟ್ಟಿಗೊಳ್ಳಲಿದ್ದು ಮುಂದಿನ ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಲು ಸಹಕಾರಿಯಾಗಲಿದೆ ಎಂಬುದು ಕಾಂಗ್ರೆಸ್-ಜೆಡಿಎಸ್ ಬಯಕೆಯಾಗಿದೆ.