ಚನ್ನಪಟ್ಟಣ/ಶಿಗ್ಗಾಂವಿ/ಸಂಡೂರು: ರಾಜ್ಯದ ಜನತೆಯನ್ನು ಕುತೂಹಲದತ್ತ ದೂಡಿದ್ದ ಮೂರು ವಿಧಾನಸಭಾ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದು, ವಿಪಕ್ಷ ಬಿಜೆಪಿ-ಜೆಡಿಎಸ್ ಮೈತ್ರಿತ ವ್ರ ಮುಖಭಂಗ ಅನುಭವಿಸಿದೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ನ ಯಾಸಿರ್ ಖಾನ್ ಪಠಾಣ್ ಹಾಗೂ ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಜಯಭೇರಿ ಬಾರಿಸಿದ್ದಾರೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಸ್ವಾಮಿ 73,417. ಕಾಂಗ್ರೆಸ್ ನ ಸಿಪಿ ಯೋಗೇಶ್ವರ್ 99,320 ಮತ ಪಡೆದಿದ್ದು, 14ನೇ ಸುತ್ತಿನಲ್ಲೂ ಸಿಪಿವೈ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಶಿಗ್ಗಾಂವಿಯಲ್ಲಿ ಯಾಸಿರ್ ಖಾನ್ ಪಠಾಣ್ 93,234 ಮತ ಪಡೆದಿದ್ದು, ಭರತ್ ಬೊಮ್ಮಾಯಿ 79,756 ಮತ ಪಡೆದಿದ್ದಾರೆ. ಸಂಡೂರಿನಲ್ಲಿ ಕಾಂಗ್ರೆಸ್ ನ ಅನ್ನಪೂರ್ಣ ತುಕಾರಾಂ 93,051 ಮತ ಪಡೆದಿದ್ದು,ಬಿಜೆಪಿಯ ಬಂಗಾರು ಹನುಮಂತು 83,483 ಮತ ಪಡೆದಿದ್ದಾರೆ.
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ 15ನೇ ಸುತ್ತಿನಲ್ಲಿ 25,000ಕ್ಕೂ ಅಧಿಕ ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ. ಚನ್ನಪಟ್ಟಣದ 20ನೇ ಸುತ್ತಿನ ಮತಎಣಿಕೆಯಲ್ಲಿ ಸಿ.ಪಿ.ಯೋಗೇಶ್ವರ್ 1,12,388 ಮತ ಪಡೆದಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 87,031 ಮತ ಪಡೆದು ಸೋಲುಂಡಿದ್ದಾರೆ.
ಮತಎಣಿಕೆ ಕೇಂದ್ರದಿಂದ ಹೊರನಡೆದ ಭರತ್:
15ನೇ ಸುತ್ತಿನ ಮತಎಣಿಕೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ 13,288 ಮತಗಳ ಮುನ್ನಡೆ ಸಾಧಿಸಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಘಟನೆ ನಡೆಯಿತು.