Advertisement

ರಾಜಧಾನಿಯಲ್ಲಿ ಇಂದು ಏಕತಾ ಓಟ

12:15 PM Oct 31, 2018 | |

ಬೆಂಗಳೂರು: ಅಖಂಡ ಭಾರತದ ಪರಿಕಲ್ಪನೆ ನೀಡಿ “ಉಕ್ಕಿನ ಮನುಷ್ಯ’ರೆಂದೇ ಖ್ಯಾತರಾದ ದೇಶದ ಪ್ರಥಮ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜನ್ಮ ದಿನಾಚರಣೆಯನ್ನು ಬುಧವಾರ (ಅ.31) ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸುತ್ತಿದ್ದು, ಅದರಂತೆ ಬಿಜೆಪಿಯು ಬೆಂಗಳೂರಿನಲ್ಲಿ ಏಕತಾ ಓಟ ಹಮ್ಮಿಕೊಂಡಿದೆ.

Advertisement

ಈ ಕುರಿತು ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, “ದೇಶ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಸ್ವತಂತ್ರ ಭಾರತವನ್ನು ಗಣತಂತ್ರವಾಗಿ ರೂಪಿಸಿದ ರೂವಾರಿ ಎನಿಸಿದ್ದಾರೆ.

ವಿಚ್ಛಿದ್ರಕಾರಿ ಸಂಘಟನೆಗಳು ದೇಶ ವಿಭಜನೆಯಲ್ಲಿ ತೊಡಗಿರುವ ಇಂತಹ ಸಂದರ್ಭದಲ್ಲಿ ಸರ್ದಾರ್‌ ಪಟೇಲ್‌ರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಏಕತಾ ದಿನದ ಮೂಲಕ ಒಗ್ಗಟ್ಟಿನ ಪರಿಕಲ್ಪನೆಗೆ ವಿಶೇಷ ಒತ್ತು ನೀಡಲಾಗಿದೆ. ಅದರಂತೆ ದೇಶಾದ್ಯಂತ ಏಕತಾ ಓಟ ನಡೆಯಲಿದ್ದು, ಬೆಂಗಳೂರು ಉತ್ತರ, ಕೇಂದ್ರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಏಕತಾ ಓಟ ಆಯೋಜಿಸಲಾಗಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಸುಮಾರು 20,000 ಟೆಕ್ಕಿಗಳು ಕಾರ್ಯ ನಿರ್ವಹಿಸುತ್ತಿದ್ದು, ಏಕತಾ ಓಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ. ಪ್ರತಿ ಕ್ಷೇತ್ರದಲ್ಲಿ ನಡೆಯುವ ಓಟದಲ್ಲೂ 5000 ಮಂದಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಧ್ವಜ ಹಿಡಿದು ಸ್ತಬ್ಧಚಿತ್ರದ ಮೆರವಣಿಗೆೆ ಸಾಗಲಿದೆ ಎಂದು ಮಾಹಿತಿ ನೀಡಿದರು.

ಪ್ರತಿಮೆ ಅನಾವರಣ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಜಗತ್ತಿನ ಅತಿ ಎತ್ತರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಏಕತಾ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ದೆಹಲಿಯಲ್ಲಿ ಸಮಾರಂಭ ನಡೆಯಲಿದ್ದು, ಕೇಂದ್ರ ಗೃಹ ಸಚಿವರು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವರು ದೆಹಲಿ ಸೇರಿದಂತೆ ರಾಷ್ಟ್ರಾದ್ಯಂತ ನಡೆಯುವ ಇಲಾಖಾವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

Advertisement

ರಾಜ್ಯ ಮಟ್ಟದಲ್ಲಿ ಏಕತೆಗಾಗಿ ಓಟ, ಪ್ರತಿಜ್ಞಾ ವಿಧಿ ಸ್ವೀಕಾರ, ರಾಜ್ಯ ಪೊಲೀಸ್‌ ಹಾಗೂ ಇತರೆ ಭದ್ರತಾ ಹೊಣೆಗಾರಿಕೆ ಸಂಸ್ಥೆಗಳಿಂದ ಕವಾಯಿತು ಮೂಲಕ ಏಕತಾ ದಿನ ಆಚರಿಸುವಂತೆ ಕೇಂದ್ರ ಗೃಹ ಸಚಿವರು ಈ ಹಿಂದೆಯೇ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಶಾಲಾ- ಕಾಲೇಜು, ಸರ್ಕಾರಿ ಸಂಸ್ಥೆಗಳಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ, ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಏಕತೆಗಾಗಿ ಓಟ, ರಾಜ್ಯ ಪೊಲೀಸ್‌ ಹಾಗೂ ಇತರೆ ಭದ್ರತಾ ಪಡೆಗಳಿಂದ ಸಂಜೆ ಕವಾಯತು ನಡೆಯಲಿದೆ. ಗೀತೆ ರಚನೆ, ಚಿತ್ರ ರಚನೆ ಸ್ಪರ್ಧೆ, ಪ್ರಬಂಧ, ರಸಪ್ರಶ್ನೆ, ಉಪನ್ಯಾಸ, ಚರ್ಚಾಕೂಟ ನಡೆಸುವಂತೆ ವಿಶ್ವವಿದ್ಯಾಲಯ ಹಾಗೂ ಸಾಂಸ್ಕೃತಿಕ ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ತಿಳಿಸಿದರು.

ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ವೈ.ಎ.ನಾರಾಯಣಸ್ವಾಮಿ, ಲೆಹರ್‌ ಸಿಂಗ್‌, ಮಾಜಿ ಉಪಮೇಯರ್‌ ಎಸ್‌.ಹರೀಶ್‌, ಸಹ ವಕ್ತಾರ ಎ.ಎಚ್‌. ಆನಂದ್‌ ಇತರರು ಉಪಸ್ಥಿತರಿದ್ದರು.

ಎಲ್ಲಿ ಎಷ್ಟು ಗಂಟೆಗೆ ಏಕತಾ ಓಟ?: ಬೆಳಗ್ಗೆ 8: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ. ಮಾನ್ಯತಾ ಟೆಕ್‌ಪಾರ್ಕ್‌ನಿಂದ ಹೊರವರ್ತುಲ ರಸ್ತೆವರೆಗೆ ಓಟ. ಭಾಗವಹಿಸುವ ಪ್ರಮುಖರು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ಎಸ್‌.ಮುನಿರಾಜು

ಬೆಳಗ್ಗೆ 8: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ. ಕಬ್ಬನ್‌ಪಾರ್ಕ್‌ನಿಂದ ವಸಂತನಗರ ಮಾರ್ಗವಾಗಿ ಸರ್ದಾರ್‌ ವಲಭಭಾಯಿ ಪಟೇಲ್‌ ಭವನದವರೆಗೆ ಓಟ. ಭಾಗವಹಿಸುವ ಪ್ರಮುಖರು- ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಅರವಿಂದ ಲಿಂಬಾವಳಿ, ಎಸ್‌.ಸುರೇಶ್‌ ಕುಮಾರ್‌, ಎಸ್‌.ರಘು.

ಬೆಳಗ್ಗೆ 9: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ.ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಿಂದ (ಶಾಲಿನಿ ಗ್ರೌಂಡ್‌) ಜಯನಗರ ವಾಣಿಜ್ಯ ಸಂಕೀರ್ಣ, 11ನೇ ಮುಖ್ಯರಸ್ತೆ ಮಾರ್ಗವಾಗಿ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದವರೆಗೆ ಓಟ. ಭಾಗವಹಿಸುವ ಪ್ರಮುಖರು- ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್‌.ಸದಾಶಿವ, ಶಾಸಕರಾದ ಎಲ್‌.ಎ.ರವಿಸುಬ್ರಹ್ಮಣ್ಯ, ಉದಯ್‌ ಗರುಡಾಚಾರ್‌.

ಕೇಂದ್ರ ಸಚಿವ ಅನಂತ ಕುಮಾರ್‌ ಅವರ ಆರೋಗ್ಯ ಸುಧಾರಿಸುತ್ತಿದ್ದು, ಚಿಕಿತ್ಸೆ ಮುಂದುವರಿದಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next