Advertisement

ಟಿಕೆಟ್‌ ವಂಚಿತ ಪ್ರಕಾಶ ಈಗ “ದಳ’ಪತಿ!

04:11 PM Apr 20, 2018 | |

ಬೀದರ: ಬಿಜೆಪಿ ಟಿಕೆಟ್‌ ಕೈ ತಪ್ಪಿದ್ದರಿಂದ ಕಮಲ ಪಾಳಯದ ವಿರುದ್ಧ ಬಂಡಾಯ ಎದ್ದಿರುವ ಜಿಲ್ಲೆಯ ಬಿಜೆಪಿ ಆಕಾಂಕ್ಷಿಗಳು
ತೆನೆ ಹೊರಲು ಸಜ್ಜಾಗಿದ್ದಾರೆ. ಇದರಿಂದ ಬಹುತೇಕ ಕ್ಷೇತ್ರಗಳಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗದ ಜೆಡಿಎಸ್‌ಗೆ ಈಗ ಆನೆ ಬಲ ಬಂದಂತಾಗಿದ್ದು, ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧೆ ನೀಡಲು ತಯಾರಾಗುತ್ತಿದೆ.

Advertisement

ಜಿಲ್ಲೆಯ ಭಾಲ್ಕಿ, ಔರಾದ ಮತ್ತು ಬೀದರ ಕ್ಷೇತ್ರದಲ್ಲಿ ಈವರೆಗೆ ಜೆಡಿಎಸ್‌ಗೆ ಮತದಾರರು ಆಶೀರ್ವಾದ ಮಾಡಿಲ್ಲ. ಹಾಗಾಗಿ ಈ ಕ್ಷೇತ್ರದಲ್ಲಿ ಪಕ್ಷ ಬಲಪಡಿಸಿಕೊಳ್ಳಲು ಒದ್ದಾಡುತ್ತಿತ್ತು. ಪ್ರತಿ ಚುನಾವಣೆ ವೇಳೆ ಕಣಕ್ಕಿಳಿಸಲು ಜೆಡಿಎಸ್‌ ಅಭ್ಯರ್ಥಿಗಳನ್ನು ಹುಡುಕಾಡಬೇಕಾದಂಥ ಪರಿಸ್ಥಿತಿ ಇತ್ತು. ಆದರೆ, ಈ ಬಾರಿ ಟಿಕೆಟ್‌ ವಂಚಿತ ಬಿಜೆಪಿ ಆಕಾಂಕ್ಷಿಗಳು ಜೆಡಿಎಸ್‌ ಬಾಗಿಲು ತಟ್ಟಿರುವುದು ಪಕ್ಷದ ಶಕ್ತಿ ಹೆಚ್ಚಿಸಿದೆ.

ಈವರೆಗೆ ಜಿಲ್ಲೆಯಲ್ಲಿ ಬಸವಕಲ್ಯಾಣ, ಹುಮನಾಬಾದ ಮತ್ತು ಬೀದರ ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್‌ ತನ್ನ ಖಾತೆ ತೆರೆಯಲು ಸಾಧ್ಯವಾಗಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ 4 ಬಾರಿ, ಹುಮನಾಬಾದ 2 ಮತ್ತು ಬೀದರ ದಕ್ಷಿಣ ಕ್ಷೇತ್ರದಲ್ಲಿ 1 ಸಲ ಜೆಡಿಎಸ್‌ ಗೆಲುವಿನ ನಗೆ ಬೀರಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖೂಬಾ ಒಬ್ಬರು ಮಾತ್ರ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 

ಈಗ ಬಸವಕಲ್ಯಾಣದ ಶಾಸಕ ಮಲ್ಲಿಕಾರ್ಜುನ ಖೂಬಾ ಜೆಡಿಎಸ್‌ ತೊರೆದು ಬಿಜೆಪಿಗೆ ಸೇರಿದ್ದಾರೆ. ಬಿಜೆಪಿಯ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಂ.ಜಿ. ಮುಳೆ ಜೆಡಿಎಸ್‌ಗೆ ಸೇರಿ ಖೂಬಾ ಅವರಿಂದ ಖಾಲಿಯಾಗಿದ್ದ ಸ್ಥಾನ ತುಂಬಿದ್ದಾರೆ. ಆದರೆ, ಮರಾಠಾ ಸಮಾಜದ ಹಿರಿಯ ಮುಖಂಡ, ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ಅವರು ಬಸವಕಲ್ಯಾಣದಿಂದ ಕಣಕ್ಕಿಳಿಯಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮುಳೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಇನ್ನೂ ಭಾಲ್ಕಿ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಪ್ರಕಾಶ ಖಂಡ್ರೆಗೆ ಬಿಜೆಪಿ ಟಿಕೆಟ್‌ ಕೈ ತಪ್ಪಿದ್ದರಿಂದ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದು, ಗುರುವಾರ ರಾತ್ರಿ ಜೆಡಿಎಸ್‌ ಸೇರ್ಪಡೆಯಾಗಲಿದ್ದಾರೆ. 

Advertisement

ಇದರೊಟ್ಟಿಗೆ ಔರಾದ ಕ್ಷೇತ್ರದಲ್ಲಿ ಅಭ್ಯರ್ಥಿಯ ಕೊರತೆ ತುಂಬಲು ಧನಾಜಿ ಜಾಧವ ಸಿದ್ಧರಾಗಿದ್ದು ಪಕ್ಷದ ನಾಯಕರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಜಾಧವ ಈ ಬಾರಿ ಬಿಜೆಪಿಯ ಆಕಾಂಕ್ಷಿಯಾಗಿದ್ದರು.

ರಾಜ್ಯದಲ್ಲಿ ಈ ಬಾರಿ ಜೆಡಿಎಸ್‌ ಅಧಿಕಾರಕ್ಕೆ ತರಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಪಕ್ಷ ಬಹುಜನ ಸಮಾಜ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಶರದ್‌ ಪವಾರ ನೇತೃತ್ವದ ಎನ್‌ಸಿಪಿ ಸಹ ಬೆಂಬಲ ಸೂಚಿಸಲು ತೀರ್ಮಾನಿಸಿದೆ. ಇದರಿಂದ ಜೆಡಿಎಸ್‌ಗೆ ಮತ್ತಷ್ಟು ಶಕ್ತಿ ತುಂಬಿದಂತಾಗಿದ್ದು, ಬಿಜೆಪಿ ಅತೃಪ್ತ ಆಕಾಂಕ್ಷಿಗಳಿಗೆ ಗಾಳ ಹಾಕುತ್ತಿದ್ದಾರೆ.

ಚುನಾವಣೆ ಹಂತದಲ್ಲಿ ಬದಲಾವಣೆ ಆಗುತ್ತಿದ್ದು, ಜೆಡಿಎಸ್‌ನ ಸಿದ್ಧಾಂತ ನಂಬಿಕೊಂಡು ಸಾಕಷ್ಟು ಬಿಜೆಪಿ ನಾಯಕರು ಪಕ್ಷಕ್ಕೆ
ಸೇರ್ಪಡೆಯಾಗುತ್ತಿದ್ದಾರೆ. ಮಾಜಿ ಶಾಸಕ ಪ್ರಕಾಶ ಖಂಡ್ರೆ, ಧನಾಜಿ ಜಾಧವ ಆಗಮನದಿಂದ ಭಾಲ್ಕಿ ಮತ್ತು ಔರಾದನಲ್ಲಿ ಶಕ್ತಿಹೀನವಾಗಿದ್ದ ಜೆಡಿಎಸ್‌ಗೆ ಬಲ ಬಂದಿದೆ. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಪೈಪೋಟಿ ನೀಡಲಿದೆ. ಗುರುವಾರ ರಾತ್ರಿ ಪ್ರಕಾಶ ಖಂಡ್ರೆ ಪಕ್ಷಕ್ಕೆ ಸೇರಲಿದ್ದು, ಜಾಧವ ಸಹ ಶುಕ್ರವಾರ ಸೇರ್ಪಡೆಯಾಗುವ ಸಾಧ್ಯತೆ ಇದೆ.
 ಬಂಡೆಪ್ಪ ಖಾಶೆಂಪುರ, ಮಾಜಿ ಸಚಿವ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next