Advertisement

ಲಖಮಾಪುರ ಗ್ರಾಮ ಸ್ಥಳಾಂತರಕ್ಕೆ ಚಿಂತನೆ

06:02 PM Jan 06, 2022 | Team Udayavani |

ನರಗುಂದ: ಸಣ್ಣ ಗ್ರಾಮ ಲಖಮಾಪುರ ಸ್ಥಳಾಂತರಕ್ಕೆ ಇನ್ನೂ ಕಾಲ ಕೂಡಿ ಬಂದಂತಿಲ್ಲ. ಕಂದಾಯ ವ್ಯಾಪ್ತಿಯ ತೊಡಕಿನಿಂದಾಗಿ ಈ ಗ್ರಾಮ ಬೇರೆ ಜಿಲ್ಲೆಗೆ ಹೋಗದಂತೆ ಸ್ಥಳಾಂತರ ಮಾಡುವ ಬಗ್ಗೆ ಸಾಕಷ್ಟು ಚಿಂತನೆ ನಡೆಸಲಾಗಿದೆ ಎಂದು ಲೋಕೋಪಯೋಗಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

Advertisement

ತಾಲೂಕಿನ ಗಡಿ ಗ್ರಾಮ ಲಖಮಾಪುರ ಗ್ರಾಮದ 2 ಕಿಮೀ ಮುಖ್ಯರಸ್ತೆಯನ್ನು ಲೋಕೋಪಯೋಗಿ ಇಲಾಖೆ 3054 ಅತಿವೃಷ್ಟಿ ಅನುದಾನದಡಿ 1.5 ಕೋಟಿ ರೂ. ವೆಚ್ಚದಲ್ಲಿ ಸಿಡಿಗಳನ್ನು ಒಳಗೊಂಡ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ನಂತರ ನಡೆದ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

ಸದ್ಯಕ್ಕೆ ಈ ಗ್ರಾಮದ ಜನರು ಪ್ರವಾಹ ಸಂದರ್ಭದಲ್ಲಿ ಸುರಕ್ಷಿತವಾಗಿ ಹೊರಗೆ ಬರುವಂತೆ ಅಗತ್ಯ ರಸ್ತೆ ಸುಧಾರಣೆಗೆ ಚಾಲನೆ ನೀಡಿದ್ದು, ಪ್ರವಾಹ ಸಂದರ್ಭದಲ್ಲಿ ಹಿನ್ನೀರು ಸರಾಗವಾಗಿ ಸಾಗುವಂತೆ ಎತ್ತರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಒಂದೂವರೆ ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಗ್ರಾಮದ ಒಳಗಿನ ಸಿಸಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.

ವೇಗವಾಗಿ ಹರಡುತ್ತಿದೆ 3ನೇ ಅಲೆ: ನಿಶ್ಚಿತವಾಗಿ ಪ್ರವೇಶಿಸಲಿರುವ ಕೊರೊನಾ ಮೂರನೇ ಅಲೆ ಭೀಕರವಾಗಿದೆ. ಈಗಾಗಲೇ ತಜ್ಞರ ಮಾಹಿತಿಯಂತೆ ಅದರ ಹರಡುವಿಕೆ ವೇಗವಾಗಿದೆ. ಸರ್ಕಾರ ಯಾವುದೇ ಕ್ಷಣ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗುತ್ತದೆ. ಇದರಿಂದ ದುಡಿಯುವ ಜನರಿಗೆ ಬಹಳಷ್ಟು ತೊಂದರೆ ಜೊತೆಗೆ ಸರ್ಕಾರಕ್ಕೂ ಆರ್ಥಿಕ ಹೊರೆಯಾಗಲಿದೆ. ಫೆಬ್ರವರಿ ಅಂತ್ಯಕ್ಕೆ ಇದು ತಾರಕಕ್ಕೇರಲಿದೆ. ಆದ್ದರಿಂದ 2, 3 ತಿಂಗಳು ಮುಂಜಾಗ್ರತೆ ವಹಿಸಬೇಕಿದೆ. ಎಲ್ಲರೂ ಕಡ್ಡಾಯವಾಗಿ ಎರಡನೇ ಡೋಸ್‌ ಲಸಿಕೆ ಹಾಕಿಸಿಕೊಂಡು ಕೊರೊನಾ ವಿರುದ್ಧದ ಸರ್ಕಾರದ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದರು.

ಗೋಪಾಲಜ್ಜ ಪೂಜಾರ, ವಾಸನ ಗ್ರಾಪಂ ಅಧ್ಯಕ್ಷೆ ಕಾಶವ್ವ ನೀಲರಡ್ಡಿ, ಉಪಾಧ್ಯಕ್ಷೆ ರುಕುಮವ್ವ ತಳವಾರ, ಸದಸ್ಯೆ ಯಲ್ಲಮ್ಮ ಮಾದರ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎಂ.ಎಸ್‌ .ಪಾಟೀಲ, ಶಂಕರಗೌಡ ನಡಮನಿ, ಗುರಪ್ಪ ಆದೆಪ್ಪನವರ, ತಿಪ್ಪಣ್ಣ ಹಿರ್ಲವರ, ಬಾಬು  ಹಿರೇಹೊಳಿ, ವಿ.ಬಿ.ಕರಬಸಣ್ಣವರ, ಚಂದ್ರು ದಂಡಿನ, ಬಿ.ಬಿ.ಐನಾಪೂರ, ಮಲ್ಲಪ್ಪ ಮೇಟಿ, ನಿಂಗಪ್ಪ ಸೋಮಾಪೂರ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next