Advertisement

ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್‌ ಮುದ್ರಣ ಭರಾಟೆ; ಕ್ಯಾಲೆಂಡರ್‌-ತೂಗು ಪಂಚಾಂಗಗಳಿಗೆ ಖ್ಯಾತಿ

02:56 PM Dec 27, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಮುದ್ರಣ ಕ್ಷೇತ್ರದ ಕಾಶಿ ಎಂದೇ ಖ್ಯಾತಿ ಪಡೆದ ಗದಗ-ಬೆಟಗೇರಿ ಅವಳಿ ನಗರದಲ್ಲಿ 2025ರ ಪಂಚಾಂಗ, ಕ್ಯಾಲೆಂಡರ್‌, ಡಿಕ್ಷನರಿ ಮುದ್ರಣ ಜತೆಗೆ ಮಾರಾಟವೂ ಭರದಿಂದ ಸಾಗಿದೆ. ಮುದ್ರಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಪಿ.ಸಿ. ಶಾಬಾದಿಮಠ ಆಫ್‌ಸೆಟ್‌ ಪ್ರಿಂಟರ್ಸ್‌, ಎಂ.ಎಸ್‌. ಶಾಬಾದಿಮಠ ಆಫ್‌ಸೆಟ್‌ ಪ್ರಿಂಟರ್ಸ್‌, ಸಂಕೇಶ್ವರ ಪ್ರಿಂಟರ್ಸ್‌ ಪ್ರೈ ಲಿ. ಸಂಸ್ಥೆ, ವಿದ್ಯಾನಿಧಿ ಪ್ರಕಾಶನ ಸೇರಿ 70ಕ್ಕೂ ಹೆಚ್ಚು ಮುದ್ರಣ ಸಂಸ್ಥೆಗಳು ನವನವೀನ ಪಂಚಾಂಗ, ಪಾಕೆಟ್‌ ಕ್ಯಾಲೆಂಡರ್‌, ಮಿನಿ
ಪಂಚಾಂಗ ಮುದ್ರಿಸುತ್ತ ಹೆಸರುವಾಸಿಗಿದ್ದು, ಗ್ರಾಹಕರಿಂದ ಸೈ ಎನಿಸಿವೆ.

Advertisement

ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರ್ಗಿ ಸೇರಿ ರಾಜ್ಯಾದ್ಯಂತ ಹಾಗೂ ಪಕ್ಕದ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಭಾಗಗಳಲ್ಲಿ ಕ್ಯಾಲೆಂಡರ್‌, ತೂಗು ಪಂಚಾಂಗಗಳು ಮಾರಾಟವಾಗುತ್ತಿವೆ.

1921ರಲ್ಲಿ ಆರಂಭಗೊಂಡ ಪಿ.ಸಿ. ಶಾಬಾದಿಮಠ ಆಫ್‌ಸೆಟ್‌ ಪ್ರಿಂಟರ್ಸ್‌ ಮುದ್ರಿಸುವ ಜಗಜ್ಯೋತಿ ಬಸವೇಶ್ವರ ತೂಗು ಪಂಚಾಂಗ, ಪಿ.ಸಿ. ಶಾಬಾದಿಮಠ ಕ್ಯಾಲೆಂಡರ್‌, 1944ರಲ್ಲಿ ಆರಂಭವಾದ ಸಂಕೇಶ್ವರ ಪ್ರಿಂಟರ್ಸ್‌ ಪ್ರೈ. ಲಿ. ಸಂಸ್ಥೆ ಮುದ್ರಿಸುವ ಶ್ರೀ ಬಸವೇಶ್ವರ ಪಂಚಾಂಗ, ಶ್ರೀ ಗಣೇಶ, ಶ್ರೀ ಗೌರಿ ಗಣೇಶ, ಶ್ರೀ ವಿನಾಯಕ ಪಾಕೆಟ್‌ ಕ್ಯಾಲೆಂಡರ್‌ ಹಾಗೂ ಪಂಚಾಂಗಗಳಿಗೆ ಬಹುಬೇಡಿಕೆ ಇದೆ. ಅವಳಿ ನಗರದಲ್ಲಿರುವ ಬಹುತೇಕ ಮುದ್ರಣ ಸಂಸ್ಥೆಗಳು ವಿಭಿನ್ನ, ವಿಶಿಷ್ಟ ಗುಣಮಟ್ಟ, ಅಚ್ಚುಕಟ್ಟುತನ, ಕಾರ್ಯವೈಖರಿಗೆ ಹೋಲಿಕೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿವೆ.

ಜಿಲ್ಲೆಯ ಹಲವಾರು ಮುದ್ರಣ ಸಂಸ್ಥೆಗಳು ಕಳೆದ 100 ವರ್ಷಗಳಿಂದ ಪ್ರಕಾಶನ-ಮುದ್ರಣ ಸೇವೆಯಲ್ಲಿ ತೊಡಗಿದ್ದು, ರಾಜ್ಯದ ಜನತೆಗೆ‌ ಹಬ್ಬ, ಮದುವೆ, ಗೃಹಪ್ರವೇಶ, ಮಳೆ ವಿಚಾರ, ರಾಶಿ ಭವಿಷ್ಯ, ರಾಷ್ಟ್ರೀಯ ಹಬ್ಬ, ವ್ಯಾಪಾರ ವಹಿವಾಟು, ಉಪನಯನ, ಅಮಾವಾಸ್ಯೆ, ಹುಣ್ಣಿಮೆ, ಜಾತ್ರೆ, ಸೂರ್ಯೋದಯ, ಚಂದ್ರೋದಯ, ಅದೃಷ್ಟ ಗ್ರಹಗಳು, ಪ್ರಯಾಣದ ಶುಭದಿನ, ತಿಥಿ-ನಕ್ಷತ್ರ, ರೈತರಿಗೆ ಅವಶ್ಯವಾದ ಬೆಳೆಯ ಆಣೆವಾರಿ ಕೋಷ್ಟಕಗಳು, ಸೀಮಂತ ಕಾರಣ, ಮಗು ಜನನ, ನಾಮಕರಣ ಸೇರಿದಂತೆ ವಿವಿಧ ಧರ್ಮೀಯರು ಆಚರಿಸುವ ಎಲ್ಲಾ ಮಾಹಿತಿಗಳ ಮೂಲಕ ಸಮಗ್ರ ಮಾಹಿತಿ ನೀಡುತ್ತಿವೆ.

Advertisement

ತಗ್ಗಿದ ಮುದ್ರಣಗಳ ಸಂಖ್ಯೆ: ಪ್ರತಿಯೊಂದು ಮುದ್ರಣ ಸಂಸ್ಥೆಗಳಲ್ಲಿ ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಕ್ಯಾಲೆಂಡರ್‌, ಪಂಚಾಂಗ ಮುದ್ರಣ ಕಾರ್ಯ ಹಗಲಿರುಳು ನಡೆಯುತ್ತಿದೆ. ತಲಾ ಒಂದೊಂದು ಸಂಸ್ಥೆಗಳು ಪ್ರತಿ ವರ್ಷ 8ರಿಂದ 10 ಲಕ್ಷ ಪಂಚಾಂಗಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದವು. ಕೋವಿಡ್‌ ನಂತರದ ವರ್ಷಗಳಲ್ಲಿ ಪ್ರತಿ ಸಂಸ್ಥೆಗಳಲ್ಲಿ ಅಂದಾಜು 2 ಲಕ್ಷ ಪ್ರತಿಗಳ ಸಂಖ್ಯೆ ಕ್ಷೀಣಿಸಿದೆ.

ಕ್ಷೀಣಿಸಿದ ಮುದ್ರಕರ ಸಂಖ್ಯೆ: ಕಳೆದ ಎರಡು ದಶಕಗಳ ಹಿಂದೆ 140ಕ್ಕೂ ಹೆಚ್ಚು ಮುದ್ರಣ ಸಂಸ್ಥೆಗಳು ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ತದನಂತರ ಕಾಲಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನ ಆಗಮಿಸಿದ್ದರಿಂದ ಕೆಲ ಮುದ್ರಣ ಸಂಸ್ಥೆಗಳು ಬಂದ್‌ ಆಗಿ ಸದು 70 ಮುದ್ರಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.

ಗದಗ-ಬೆಟಗೇರಿಯ ಜರ್ಮನ್‌ ಪಾದ್ರಿಗಳ ಸಮೂಹದಲ್ಲಿ ಒಬ್ಬರಾಗಿದ್ದ ಸ್ಯಾಮುವೆಲ್‌ ಎಂಬುವರು ಗದಗಿನಲ್ಲಿ ಮೊದಲು
ಮುದ್ರಣಾಲಯ ಆರಂಭಿಸಿದರು. ನಂತರ 1900ರಲ್ಲಿ ಶಂಕರನಾರಾಯಣ ಮುದ್ರಣಾಲಯ, 1919ರಲ್ಲಿ ಎಂ.ಎಸ್‌. ಮಡಿವಾಳಪ್ಪನವರು ಶಂಕರ ಪ್ರಿಂಟಿಂಗ್‌ ಪ್ರೆಸ್‌ ಎಂಬ ಹೆಸರಿನಲ್ಲಿ ಮುದ್ರಣಾಲಯ ಸ್ಥಾಪಿಸಿದರು. ಹೀಗೆ ಮುಂದುವರಿಯುತ್ತ
ಗದಗ ಮುದ್ರಣ ಕಾಶೀ ಎಂದೇ ಪ್ರಖ್ಯಾತಿ ಪಡೆಯಿತು.

1921ರಲ್ಲಿ ಆರಂಭವಾದ ಪಿ.ಸಿ. ಶಾಬಾದಿಮಠ ಆಫ್‌ಸೆಟ್‌ ಪ್ರಿಂಟರ್ಸ್‌ ಶತಕ ಬಾರಿಸಿ ನಾಲ್ಕು ವರ್ಷಗಳು ಕಳೆದಿವೆ. ನಮ್ಮಲ್ಲಿ ಮುದ್ರಿಸಲಾದ ಜಗಜ್ಯೋತಿ ಬಸವೇಶ್ವರ, ಜಯಲಕ್ಷ್ಮಿ ತೂಗು ಪಂಚಾಂಗಗಳು ರಾಜ್ಯಾದ್ಯಂತ ಹೆಸರಾಗಿವೆ. ಕಳೆದ 101 ವರ್ಷಗಳಿಂದ ಯಾವುದೇ ಲೋಪ ಇಲ್ಲದೇ ಅಚ್ಚುಕಟ್ಟುತನ ಜತೆಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಪಂಚಾಂಗ ಮತ್ತು ಕ್ಯಾಲೆಂಡರ್‌ಗಳನ್ನು ತಯಾರಿಸಲಾಗುತ್ತಿದೆ.
*ಮೃತ್ಯುಂಜಯ ಹಿರೇಮಠ, ಪಿ.ಸಿ. ಶಾಬಾದಿಮಠ
ಆಫ್‌ಸೆಟ್‌ ಪ್ರಿಂಟರ್ಸ್‌ ವ್ಯವಸ್ಥಾಪಕ

*ಅರುಣಕುಮಾರ ಹಿರೇಮಠ

 

Advertisement

Udayavani is now on Telegram. Click here to join our channel and stay updated with the latest news.

Next