Advertisement

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

01:23 PM Jan 07, 2025 | Team Udayavani |

ಗದಗ: ನಗರದ ಜಿಲ್ಲಾಡಳಿತ ಭವನದ ಎದುರು ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲೆಯ ಕಡಲೆ ಬೆಳೆಗಾರರು, ರೈತರು ಜಿಲ್ಲಾಡಳಿತ ಭವನ ಗೇಟ್ ಗೆ ಜಾನುವಾರು ಕಟ್ಟಿ, ಮೇವು ಹಾಕಿ, ಅಡುಗೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

Advertisement

ರೈತರು ಬಾರಕೋಲ್ ಮೂಲಕ ಚಾಟಿ ಬೀಸಿ, ಒನಕೆ ಹಿಡಿದು ರಸ್ತೆ ಸಂಚಾರ ಬಂದ್ ಮಾಡಿ, ಮಾನವ ಸರಪಳಿ ನಿರ್ಮಿಸಿ, ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಬೈಕ್ ಗಳಿಗೆ ಒನಕೆ ಪೆಟ್ಟು ನೀಡಿದ ರೈತ ಮಹಿಳೆಯರು. ಕಡಲೆ ಬೆಳೆ ಬಾಕಿ ಹಣ ನೀಡದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಎನ್‌ಆರ್‌ಎಲ್‌ಎಂ ಗದಗ ಒಕ್ಕೂಟದಡಿ ನೇಮಿಸಿದ ‘ಕೃಷಿ ಸಖಿ’ ಅಡಿ ಬರುವ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಜಿಲ್ಲೆಯ ಗದಗ ಮತ್ತು ಮುಂಡರಗಿ ತಾಲೂಕಿನ 450 ರೈತರಿಂದ ಖರೀದಿಸಿದ್ದ ಕಡಲೆಗೆ 12 ತಿಂಗಳಾದರೂ ಬಾಕಿ ಹಣ ಪಾವತಿಸಿಲ್ಲ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಹಣ ಕೊಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯ್ತಿಯಿಂದ ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಎನ್‌ಆರ್‌ಎಲ್‌ಎಂ) ಗದಗ ಒಕ್ಕೂಟದಡಿ ‘ಕೃಷಿ ಸಖಿ’ ಎಂದು ನೇಮಿಸಿದೆ. ಇದರಡಿ ಬರುವ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ‘ಎನ್‌ಆರ್‌ಎಲ್‌ಎಂ’ ಜಿಪಂ ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರಶೇಖರ ಎಲಿಗಾರ, ತಾಪಂ ಕಾರ್ಯಕ್ರಮ ವ್ಯವಸ್ಥಾಪಕ ಆನಂದ ಬೆಳವಣಿಕಿ ಹಾಗೂ ತಾಲೂಕ ತಾಂತ್ರಿಕ ಸಂಯೋಜಕ ಜಗದೀಶ ಕಂಬಾಳಿಮಠ ಎಂಬುವವರು ದಾವಣಗೆರೆಯ ಮಾರುತಿ ಗೌಡ ಎಂಬುವವರೊಂದಿಗೆ ಮಧ್ಯಸ್ಥಿಕೆ ವಹಿಸಿ ಮೂರು ತಿಂಗಳಲ್ಲಿ ಅಂದಾಜು 27 ಕೋಟಿ ರೂ. ಮೌಲ್ಯದ ಕಡಲೆಯನ್ನು ಹಲವು ಗ್ರಾಮಗಳಲ್ಲಿ ಖರೀದಿಗೆ ಕೊಡಿಸಿದ್ದಾರೆ.

Advertisement

ಈ ಪೈಕಿ 20 ಕೋಟಿ ರೂ. ಹಣವನ್ನು ಆರ್‌ಟಿಜಿಎಸ್ ಮೂಲಕ ಪಾವತಿಸಿದ್ದು, ಬಾಕಿ ಉಳಿದ 6.50 ಕೋಟಿ ರೂ. ಹಣವನ್ನು ಪಾವತಿಸುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೆಲವರು 2023 ರ ಆಗಷ್ಟಗೆ ಇದು ಅಂತ್ಯಗೊಂಡಿದೆ ಎನ್ನುತ್ತಾರೆ. ಆದರೆ, 2024 ರ ಜನವರಿಯಲ್ಲಿ ಇವರು ಕಡಲೆ ಖರೀದಿಸಿದ್ದು ಹೇಗೆ? ಎಂಬುದು ತಿಳಿಯುತ್ತಿಲ್ಲ. ಕೂಡಲೇ ಕಡಲೆ ಬೆಳೆಗಾರರ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಕಡಲೆ ನೀಡಿದ ರೈತರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಚಿವ ಎಚ್.ಕೆ ಪಾಟೀಲ ಅವರನ್ನು ರೈತರು 2-3 ಬಾರಿ ಭೇಟಿಯಾದರೂ ಕೇವಲ ಹಾರಿಕೆ ಉತ್ತರವನ್ನು ನೀಡಿ, ಕಳುಹಿಸಿದ್ದಾರೆ. ರೈತರ ಸಮಸ್ಯೆ ಬಗೆಹರಿಸಲು ಇದುವರೆಗೂ ಯಾವುದೇ ಸಭೆ ಕರೆದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

Advertisement

Udayavani is now on Telegram. Click here to join our channel and stay updated with the latest news.

Next