Advertisement

ದಾಹ ತಣಿಸುವ ಕಲ್ಲಂಗಡಿ

11:12 AM Mar 10, 2019 | |

ಹರಪನಹಳ್ಳಿ: ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ತಾಲೂಕಿನಲ್ಲಿ ಈಗ ನಿಗಿನಿಗಿ ಬಿಸಿಲು. ಎಷ್ಟೇ ನೀರು ಕುಡಿದರೂ ದಾಹ ನೀಗುವುದೇ ಇಲ್ಲ. ತಂಪು ಪಾನೀಯ ಸೇವಿಸಿದರೂ ಗಂಟಲು ಒಣಗೋದು ಕಡಿಮೆಯಾಗಲ್ಲ. ಬೆವರಿನ ಸ್ನಾನ ಮಾಮೂಲಾಗಿದ್ದು, ಬಿಸಿಲಿನ ಝಳದಿಂದ ಪಾರಾಗಲು ಜನ ತಂಪು ಪಾನೀಯದ ಜೊತೆಗೆ ಕಲ್ಲಂಗಡಿ ಹಣ್ಣು ಹಾಗೂ ಎಳೆನೀರಿನ ಮೊರೆ ಹೋಗುತ್ತಿದ್ದಾರೆ. 

Advertisement

 ತೀವ್ರಗೊಂಡ ಸೆಖೆ, ಬೆವರಿನಿಂದ ತಪ್ಪಿಸಿಕೊಳ್ಳಲು ದಿನವೀಡಿ ಮನೆ, ಕಚೇರಿಗಳಲ್ಲಿ ಫ್ಯಾನ್‌ಗಳ ಮೊರೆ ಹೋಗಬೇಕಾಗಿದೆ. ಮನೆ ಒಳಗಿದ್ದರೆ ತುಂಬಾ ಸೆಖೆ, ಹೊರಗೆ ಬಂದರೆ ರಣಬಿಸಿಲು. ಗಾಳಿ ಬೀಸದಿರುವುದರಿಂದ ಜನ ಮತ್ತಷ್ಟು ಹೈರಾಣಾಗಿದ್ದಾರೆ. ಸದ್ಯ ಪ್ರತಿದಿನ ಗರಿಷ್ಠ 38 ಡಿಗ್ರಿ
ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುತ್ತಿದ್ದು, ಮಾರ್ಚ್‌ ತಿಂಗಳಲ್ಲೇ ಹೀಗಾದರೆ ಏಪ್ರಿಲ್‌, ಮೇ ತಿಂಗಳಲ್ಲಿ ಸ್ಥಿತಿ ಹೇಗಾಗಬಹುದು ಎಂಬ ಚಿಂತೆ ಜನರನ್ನು ಕಾಡುತ್ತಿದೆ. ಬಿಸಿಲಿನ ಪ್ರಖರತೆಯಿಂದ ಮಾರುಕಟ್ಟೆಯಲ್ಲಿ ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಜನ ಸಂಚಾರ ಕಡಿಮೆಯಾಗಿದೆ.

ಸೂರ್ಯೋದಯವಾಗುತ್ತಿದ್ದಂತೆಯೇ ಬಿಸಿಲಿನ ತಾಪ ಏರತೊಡಗುತ್ತದೆ. ಹೀಗಾಗಿ ಪಟ್ಟಣದ ಬಹುತೇಕ ತಂಪುಪಾನೀಯ ಅಂಗಡಿಗಳಿಗೆ ಈಗ ಶುಕ್ರದೆಸೆ ಶುರುವಾಗಿದೆ. ಸೋಡಾ, ಶರಬತ್‌, ಮಜ್ಜಿಗೆ, ಲಸ್ಸಿ ಮತ್ತಿತರ ತಂಪು ಪಾನೀಯ ಕುಡಿಯಲು ಜನ ಮುಗಿಬೀಳುತ್ತಿದ್ದಾರೆ. ತಳ್ಳು ಗಾಡಿಗಳಲ್ಲಿ ಕಬ್ಬಿನ ಹಾಲು ಮಾರಾಟ ಜೋರಾಗಿದೆ.

ಕಲ್ಲಂಗಡಿ ಹಣ್ಣಿಗೆ ಡಿಮ್ಯಾಂಡ್‌: ಬಿಸಿಲು ಏರುತ್ತಿದ್ದಂತೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಕಲ್ಲಂಗಡಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಬೊಗಸೆ ಗಾತ್ರದ ಕಲ್ಲಂಗಡಿಗೆ 100ರಿಂದ 150ರೂ.ವರೆಗೆ ದರ ನಿಗದಿ ಮಾಡಲಾಗಿದೆ. ಪಟ್ಟಣದ ಹಳೇ ಬಸ್‌ ನಿಲ್ದಾಣ, ಹೊಸ ಬಸ್‌ ನಿಲ್ದಾಣ, ಐಬಿ ವೃತ್ತ, ಎಸ್‌ಬಿಎಂ ಬ್ಯಾಂಕ್‌ ಸಮೀಪದ ರಸ್ತೆ ಪಕ್ಕ ಸೇರಿದಂತೆ ಅಲ್ಲಲ್ಲಿ ಕಲ್ಲಂಗಡಿ ಹಣ್ಣುಗಳ ವ್ಯಾಪಾರ ಜೋರಾಗಿದೆ. ಕಲ್ಲಂಗಡಿ ಸ್ವಲ್ಪ ತುಟ್ಟಿಯಾಗಿದ್ದರೂ ಕೊನೆಗೆ ಗ್ರಾಹಕರು ಚೌಕಾಸಿ ಮಾಡಿದ ಬೆಲೆಗೆ ವ್ಯಾಪಾರಿಗಳು ಕೊಟ್ಟು ಕಳುಹಿಸುತ್ತಾರೆ. ದಿನದಿಂದ ದಿನಕ್ಕೆ ಧಗೆ ಹೆಚ್ಚಾದಂತೆಲ್ಲಾ ಎಲ್ಲೆಂದರಲ್ಲಿ ಕಲ್ಲಂಗಡಿ ಹಣ್ಣುಗಳ ಶೆಡ್‌ಗಳು ತೆರೆದುಕೊಳ್ಳುತ್ತಿವೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣು ಹೆಚ್ಚು ಜನರ ದಾಹ ತೀರಿಸುತ್ತಿದೆ.

ಇದಲ್ಲದೇ ಎಳನೀರು ಒಂದಕ್ಕೆ 30 ರೂ. ದರ ಇದ್ದು ಇದರ ಬೇಡಿಕೆಯೂ ಹೆಚ್ಚಿದೆ. ಒಟ್ಟಿನಲ್ಲಿ ಹರಪನಹಳ್ಳಿಯಲ್ಲಿ ಬಿಸಿಲ ತಾಪ ಹೆಚ್ಚುತ್ತಲೇ ಇದ್ದು ಜನ ಹೈರಾಣಾಗಿದ್ದಾರೆ.

Advertisement

ಕಚೇರಿ ಕೆಲಸಕ್ಕೆ ಹರಪನಹಳ್ಳಿ ಪಟ್ಟಣಕ್ಕೆ ಬಂದಿದ್ವಿ, ಇಲ್ಲಿನ ಬಿಸಿಲು ತಡೆದುಕೊಳ್ಳಲು ಆಗುತ್ತಿಲ್ಲ. ಬಿಸಿಲು ಹೆಚ್ಚಾಗಿರುವುದರಿಂದ ಊಟ ಮಾಡಲು ಮನಸ್ಸು ಬರುತ್ತಿಲ್ಲ. ಹಾಗಾಗಿ ಕಲ್ಲಂಗಡಿ ಹಣ್ಣು ತಿಂದು ಹಸಿವು ನೀಗಿಸಿಕೊಳ್ಳುತ್ತೇವೆ. ಇಂತಹ ಬಿಸಿಲನ್ನು ನಾವು ಹಿಂದೆದೂ ಕಂಡಿರಲಿಲ್ಲ .  ಸಂತೋಷ ನಾಯ್ಕ, ಅರಸನಾಳು ಮಾರುತಿ.
ಮಾಡ್ಲಿಂಗೇರಿ ತಾಂಡಾ ನಿವಾಸಿಗಳು 

ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಹಣ್ಣು ಬಿಸಿಲು ಹೆಚ್ಚಾದಂತೆ ದಿನದಿಂದ ದಿನಕ್ಕೆ ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೂ ಸಹ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಒಂದು ಪ್ಲೇಟ್‌ ಗೆ 10 ರೂ. ದರವಿದ್ದು, ಪ್ರತಿದಿನ 3ರಿಂದ 4 ಸಾವಿರ ರೂ. ವ್ಯಾಪಾರವಾಗುತ್ತಿದೆ. ಜನರು ಹಣಕ್ಕಿಂತ ಹಣ್ಣಿನ ರುಚಿಗೆ ಹೆಚ್ಚಿನ ಗಮನ ಹರಿಸುತ್ತಾರೆ. ಹಾಗಾಗಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಉತ್ತಮವಾದ ಹಣ್ಣುಗಳನ್ನು ತಮಿಳುನಾಡಿನಿಂದ ತಂದು ಮಾರಾಟ ಮಾಡಲಾಗುತ್ತಿದೆ. 
 ಸಲೀಂ,ಕಲ್ಲಂಗಡಿ ವ್ಯಾಪಾರಿ

ಕಲ್ಲಂಗಡಿ ಸೇವನೆಯಿಂದ ಚೈತನ್ಯ ಕಲ್ಲಂಗಡಿಯಲ್ಲಿ ಪ್ರತ್ಯಾಮ್ಲಗಳು ಅಧಿ ಕವಿದ್ದು, ಇದು ದೇಹಕ್ಕೆ ಹಾನಿಯುಂಟು ಮಾಡುವ ಬೇಡದ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ. ಇದರಲ್ಲಿ ವಿಟಮಿನ್‌-ಸಿ, ಫ್ಲೆàವೋನೈಡ್ಸ್‌ ಅಂದರೆ  ಕೋಪೆನೆ, ಬೀಟಾ ಕ್ಯಾರೋಟಿನ್‌, ಲ್ಯೂಟಿನ್‌ ಮುಂತಾದ ಅಂಶಗಳಿವೆ. ಬೇಸಿಗೆಯಲ್ಲಿ ದಿನಾ ಒಂದು ತುಂಡು ಕಲ್ಲಂಗಡಿ ಹಣ್ಣು ತಿನ್ನುವವರಿಗೆ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ತ್ವಚೆ ರಕ್ಷಣೆಯನ್ನು ಮಾಡುತ್ತದೆ. ತುಂಬಾ ಸುಸ್ತಾದಾಗ ಕಲ್ಲಂಗಡಿ ಹಣ್ಣು ಸೇವಿಸಿದರೆ ದೇಹದ ಚೈತನ್ಯ ಹೆಚ್ಚಿಸಿ ಸುಸ್ತು ಮಾಯವಾಗುತ್ತದೆ.
 ಡಾ| ಜಿ.ವಿ.ಹರ್ಷ, ವೈದ್ಯ

ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next