Advertisement

Udupi:ಸದ್ಯ ವಾತಾವರಣವೇನೋ ಚೆನ್ನಾಗಿದೆ ಆದರೆ ಕಲ್ಲಂಗಡಿ ಬೆಳೆಗಾರರಲ್ಲಿನ್ನೂ ಮನೆ ಮಾಡಿದ ಆತಂಕ

03:13 PM Dec 02, 2024 | Team Udayavani |

ಉಡುಪಿ: ಬೈಂದೂರು, ಕುಂದಾಪುರ, ಕೋಟ, ಸಾಲಿಗ್ರಾಮ ಮೊದಲಾದ ಭಾಗದಲ್ಲಿ ಮುಂಗಾರಿನ ಭತ್ತದ ಕಟಾವು ಮುಗಿಯುತ್ತಿದ್ದಂತೆ ಗದ್ದೆಗಳನ್ನು ಹದಗೊಳಿಸಿ ಕಲ್ಲಂಗಡಿ ಬೀಜ ಬಿತ್ತನೆ ಮಾಡುವ ಪರಿಪಾಠ ಕೆಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದರೂ ಕಳೆದ ವರ್ಷ ಬೆಳೆಯಲ್ಲಾದ ನಷ್ಟದಿಂದ ಈ ಬಾರಿ ಕೃಷಿಕರು ಕಲ್ಲಂಗಡಿ ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ.

Advertisement

ಕಳೆದ ವರ್ಷ ಮಳೆ ಕಡಿಮೆ ಇದ್ದು ಕಲ್ಲಂಗಡಿ ಇಳುವರಿಗೆ ಪೂರಕ ವಾತಾವರಣ ಕಂಡು ಬಂದಿದ್ದರೂ ಬಿತ್ತನೆಯ ಅನಂತರ ಹವಾಮಾನ ಕೈಕೊಟ್ಟ ಹಿನ್ನೆಲೆಯಲ್ಲಿ ಬಹುತೇಕ ಕೃಷಿಕರು ನಷ್ಟ ಅನುಭವಿಸಿದ್ದರು. ಈ ವರ್ಷ ಈಗಾಗಲೇ ಮಳೆ ಕಡಿಮೆಯಾಗಿರುವುದರಿಂದ ಕಲ್ಲಂಗಡಿ ಬಿತ್ತನೆಗೆ ವಾತಾವರಣ ಚೆನ್ನಾಗಿದೆ ಮತ್ತು ಇದು ಬಿತ್ತನೆಗೆ ಸಕಾಲವೂ ಆಗಿದೆ. ಆದರೆ ಹವಾಮಾನ ವ್ಯತ್ಯಾಸವಾಗಬಹುದು ಎಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ.

ಮಳೆ ಬರಲೇ ಬಾರದು
ಕಲ್ಲಂಗಡಿ ಬಿತ್ತನೆ ಪೂರ್ವದಲ್ಲಿ ಏರಿ ಮಾಡಲಾಗುತ್ತದೆ. ಏರಿ ಮಾಡುವ ಸಂದರ್ಭದಲ್ಲಿ ಹಾಗೂ ಬಿತ್ತನೆ ಸಂದರ್ಭದಲ್ಲಿ ಮಳೆ ಬಂದರೆ ಇಳುವರಿ ಮೇಲೆ ನೇರ ಪರಿಣಾಮ ಬೀರುತ್ತದೆ. ಕಳೆದ ವರ್ಷ ಬಿತ್ತನೆ ಸಂದರ್ಭದಲ್ಲಿ ಮಳೆ ಎದುರಾಗಿತ್ತು. ಅನಂತರವೂ ಮಳೆ ಬಂದಿದ್ದರಿಂದ ಬೆಳೆಗಾರರು ನಷ್ಟ ಅನುಭವಿಸುವಂತಾಗಿತ್ತು.

ಬಿತ್ತನೆಗಾಗಿ ಗದ್ದೆಯಲ್ಲಿ ಏರಿ ಮಾಡುವಾಗ ಮಣ್ಣು ಸಂಪೂರ್ಣವಾಗಿ ಒಣಗಿರಬೇಕು. (ಧೂಳು ಹಾರುವಂತೆ ಇರಬೇಕು). ಇದೇ ವಾತಾವರಣ ಬಿತ್ತನೆಯ ವರೆಗೂ ಇದ್ದರೆ ಚೆನ್ನಾಗಿ ಬಿತ್ತನೆ ಮಾಡಿದ ಮೇಲೆ ನೀರು ಹಾಯಿಸಿದರೆ ಬೀಜ ಮೊಳಕೆ ಒಡೆಯಲು ಅನುಕೂಲ ಆಗುತ್ತದೆ, ಮಳೆ ಬಂದರೆ ಏರಿ ಕಟ್ಟಲು ಆಗುವುದಿಲ್ಲ ಮತ್ತು ಬೀಜ ಮೊಳಕೆ ಒಡೆದು ಬೇರು ಕೆಳಕ್ಕೆ ಇಳಿಯಲು ಸಮಸ್ಯೆಯಾಗುತ್ತದೆ. ಗಿಡ ಚಿಗುರಿದ ಅನಂತರವೂ ಮಳೆ ಬಂದರೆ ಕಷ್ಟ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಕಳೆ ಬೆಳೆಯುವ ಅಪಾಯ
ಬಿತ್ತನೆ ಸಂದರ್ಭದಲ್ಲಿ ಮಳೆ ಬಂದರೆ ಬಿತ್ತನೆ ಕಷ್ಟ, ಬಿತ್ತನೆಯ ಅನಂತರದಲ್ಲಿ ಮಳೆ ಬಂದರೆ ಗದ್ದೆಯಲ್ಲಿ ಕಳೆ ಜಾಸ್ತಿಯಾಗುತ್ತದೆ, ಕಳೆ ಕೀಳುತ್ತಲೇ ಕಲ್ಲಂಗಡಿ ಗಿಡಗಳನ್ನು ಪೋಷಣೆ ಮಾಡಬೇಕಾಗುತ್ತದೆ. ಕಳೆ ಬಿಟ್ಟರೆ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಹೂ ಬಿಡುವ ಸಂದರ್ಭದಲ್ಲೂ ಮಳೆ ಬಂದರೆ ಕಾಯಿಗಳ ಬಲವರ್ದನೆಗೂ ಸಮಸ್ಯೆಯಾಗುತ್ತದೆ. ಒಟ್ಟಿನಲ್ಲಿ ಕಲ್ಲಂಗಡಿ ಕೃಷಿಗೆ ಒಣ ಹವ ಇದ್ದರೆ ಉತ್ತಮ. ಹಾಗಂತ ನೀರು ಹಾಕದೇ ಇರಬಾರದು. ಬಿತ್ತನೆಯ ಅನಂತರದಲ್ಲಿ ನಿರಂತರವಾಗಿ ನೀರು ಪೂರೈಕೆ ಮಾಡುತ್ತಲೇ ಇರಬೇಕು ಎನ್ನುತ್ತಾರೆ ಬ್ರಹ್ಮಾವರ ಕೃಷಿ ಕೇಂದ್ರದ ಹಿರಿಯ ವಿಜ್ಞಾನ ಡಾ| ಧನಂಜಯ.

Advertisement

ಚಂಡ ಮಾರುತದ ಮತ್ತು ಹವಾಮಾನ ವೈಪರೀತ್ಯವಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದ್ದು ಬೆಳೆಗಾರರನ್ನು ಆತಂಕಕ್ಕೀಡುಮಾಡಿದೆ.

ವಾತಾವರಣ ತುಂಬ ಚೆನ್ನಾಗಿದೆ
ಈ ವರ್ಷ ಕಲ್ಲಂಗಡಿ ಬಿತ್ತನೆಗೆ ವಾತಾವರಣ ತುಂಬ ಚೆನ್ನಾಗಿದೆ. ಅಲ್ಲದೆ ಈಗ ಕೆಲವೆಡೆ ಬಿತ್ತನೆ ಆರಂಭವಾಗಿದೆ. ಹೈಬ್ರಿಡ್‌ ತಳಿಯ ಬೀಜವಾದರೆ ಎಕ್ರೆಗೆ 20ರಿಂದ 25 ಟನ್‌ ಬೆಳೆಯಬಹುದು. ಸಾಮಾನ್ಯ ಬೀಜ ಅಥವಾ ಹಣ್ಣಿನ ಒಳಗೆ ಹಳದಿ ಬಣ್ಣ ಬರುವ ಬೀಜವಾದರೆ ಎಕ್ರೆಗೆ 10ರಿಂದ 12 ಟನ್‌ ಇಳುವರಿ ಪಡೆಯಬಹುದು. ಆರೈಕೆಯೂ ಹಾಗೆಯೇ ಮಾಡಬೇಕಾಗುತ್ತದೆ.-ಸುರೇಶ್‌ ನಾಯಕ್‌, ಹಿರಿಯಡಕ, ಕಲ್ಲಂಗಡಿ ಬೆಳೆಗಾರರು

ಬೆಳೆಗೆ ಉತ್ತೇಜನ
ಮುಂಗಾರು ಅನಂತರದಲ್ಲಿ ಜಿಲ್ಲೆಯ ಕೆಲವು ಭಾಗದಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆಯಲಾಗುತ್ತದೆ. ಇಲಾಖೆಯಿಂದ ಕಲ್ಲಂಗಡಿ ಹಣ್ಣಿನ ಬೆಳೆಗೆ ಉತ್ತೇಜನ ನೀಡುತ್ತಿದ್ದೇವೆ. ಮಳೆ ಬಾರದೆ ಇದ್ದರೆ ಚೆನ್ನಾಗಿ ಇಳುವರಿ ಪಡೆಯಬಹುದಾಗಿದೆ. ಹಸುಗಳು ಗದ್ದೆಗೆ ಲಗ್ಗೆ ಇಡದಂತೆಯೂ ನೋಡಿಕೊಳ್ಳಬೇಕು.
-ಭುವನೇಶ್ವರಿ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ

ಎಲ್ಲೆಲ್ಲಿ ಕಲ್ಲಂಗಡಿ ಹೆಚ್ಚು?
ಜಿಲ್ಲೆಯ ವಡ್ಡರ್ಸೆ, ಮಣೂರು, ಕೋಡಿ, ಕೋಟ, ಮಟ್ಟು, ಹಿರಿಯಡಕ, ನಾಗೂರು, ಹೇರಂಜಾಲು, ಹೇರೂರು, ಬಿಜೂರು, ಉಪ್ಪುಂದ, ನಾಡ, ಶಿರೂರು, ನಾವುಂದ, ಪಡುವರೆ ಮೊದಲಾದ ಭಾಗದಲ್ಲಿ ಕಲ್ಲಂಗಡಿ ಹೆಚ್ಚು ಬೆಳೆಯಲಾಗುತ್ತದೆ. ಈ ಬಾರಿ ಸುಮಾರು 220 ಎಕ್ರೆ ಪ್ರದೇಶದಲ್ಲಿ ಬಿತ್ತನೆಗೆ ಸಿದ್ದತೆ ನಡೆದಿದೆ. ಆದರೆ ತೋಟಗಾರಿಕೆ ಇಲಾಖೆ ಸುಮಾರು 8 ಸಾವಿರ ಎಕ್ರೆ ಪ್ರದೇಶದಲ್ಲಿ ಕಲ್ಲಂಗಡಿ ಬಿತ್ತನೆಗೆ ಉತ್ತೇಜನ ನೀಡುತ್ತಿದೆಯಾದರೂ ರೈತರು ಮುಂದೆ ಬರುತ್ತಿಲ್ಲ.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next