ಹೈದರಾಬಾದ್: ಚಿತ್ರರಂಗದಲ್ಲಿ ಹಳೆ ಸಿನಿಮಾಗಳು ರೀ – ರಿಲೀಸ್ ಆಗುವ ಟ್ರೆಂಡ್ ಶುರುವಾಗಿದೆ. ರೀ – ರಿಲೀಸ್ ವಿಚಾರದಲ್ಲಿ ಸೌತ್ ಸಿನಿಮಾರಂಗ ಕೂಡ ಹಿಂದೆ ಬಿದ್ದಿಲ್ಲ.
ಟಾಲಿವುಡ್ನಲ್ಲಿ (Tollywood) ಸದ್ಯ ʼಪುಷ್ಪ-2ʼ ಹವಾ ಜೋರಾಗಿದೆ. ದಿನ ಕಳೆದಂತೆ ʼಪುಷ್ಪರಾಜ್ʼ ನೋಡಲು ಥಿಯೇಟರ್ನತ್ತ ಜನ ಬರುತ್ತಿದ್ದಾರೆ. ಹೊಸ ವರ್ಷಕ್ಕೆ ಟಾಲಿವುಡ್ನ ಥಿಯೇಟರ್ಗಳು ಮತ್ತೆ ಭರ್ತಿ ಆಗಲಿವೆ. ಈ ಹಿಂದೆ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ಸಿನಿಮಾಗಳು ಹೊಸ ವರ್ಷದ ಮೊದಲ ದಿನವೇ ಥಿಯೇಟರ್ಗೆ ಲಗ್ಗೆ ಇಡಲಿವೆ.
ಜನವರಿ 1, 2025 ರಂದು, ತೆಲುಗು ಚಿತ್ರರಂಗ (Telugu cinema) ಕಂಡ ಸೂಪರ್ ಹಿಟ್ ಸಿನಿಮಾಗಳು ಮತ್ತೆ ದೊಡ್ಡ ಪರದೆಗೆ ಅಪ್ಪಳಿಸಲಿದೆ.
2009ರಲ್ಲಿ ಬಂದಿದ್ದ ಆನಂದ ರಂಗ ನಿರ್ದೇಶನದ ʼಓಯ್ʼ ಸಿನಿಮಾ ಟಾಲಿವುಡ್ನಲ್ಲಿ ಹಿಟ್ ಸಾಲಿಗೆ ಸೇರಿತ್ತು. 2024 ರ ಪ್ರೇಮಿಗಳ ದಿನದಂದು ಚಿತ್ರ ರೀ – ರಿಲೀಸ್ ಆಗಿತ್ತು. ಒಂದು ವಾರ ಥಿಯೇಟರ್ನಲ್ಲಿದ್ದ ಸಿನಿಮಾಕ್ಕೆ ಹೌಸ್ ಫುಲ್ ಪ್ರತಿಕ್ರಿಯೆ ಬಂದಿತ್ತು. ಇದೀಗ ಜನವರಿ 1 ರಂದು ಅಂದರೆ ಹೊಸ ವರ್ಷಕ್ಕೆ ʼಓಯ್ʼ ಮತ್ತೊಮ್ಮೆ ರಿಲೀಸ್ ಆಗಲಿದೆ.
ʼಓಯ್ʼ ನಲ್ಲಿ ಸಿದ್ಧಾರ್ಥ್ (Siddharth) ಮತ್ತು ಶಾಮಿಲಿ (Shamili) ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದರು. ಇದೊಂದು ಲವ್ ಸ್ಟೋರಿ ಚಿತ್ರವಾಗಿತ್ತು.
ಸೂಪರ್ ಹಿಟ್ ನಿರ್ದೇಶಕ ಎಸ್ ಎಸ್ ರಾಜಮೌಳಿ (SS Rajamouli) ಅವರ ʼಸೈʼ ಟಾಲಿವುಡ್ನ ಎವರ್ ಗ್ರೀನ್ ಹಿಟ್ ಚಿತ್ರಗಳಲ್ಲಿ ಒಂದು. ನಿತಿನ್ ( Nithiin) ಮತ್ತು ಜೆನಿಲಿಯಾ (Genelia) ಅವರ ಈ ಸಿನಿಮಾದಲ್ಲಿ ನಿತಿನ್ ರಗ್ಬಿ ಆಟಗಾರನಾಗಿ ಮಿಂಚಿದ್ದರು. 2004ರಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ʼಸೈʼ ಹೊಸ ವರ್ಷಕ್ಕೆ ಮತ್ತೊಮ್ಮೆ ಬಿಗ್ ಸ್ಕೀನ್ಗೆ ಅಪ್ಪಳಿಸಲಿದೆ.
ಮುತ್ಯಾಲ ಸುಬ್ಬಯ್ಯ ನಿರ್ದೇಶನದಲ್ಲಿ 1997ರಲ್ಲಿ ತೆರೆಕಂಡ ʼ ಹಿಟ್ಲರ್ʼ ಹೊಸ ವರ್ಷಕ್ಕೆ ರೀ – ರಿಲೀಸ್ ಆಗಲಿದೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಸತತ ಸೋಲಿನಿಂದ ಕೆಂಗೆಟ್ಟಿದ್ದ ದಿನಗಳಲ್ಲಿ ತೆರೆಕಂಡ ʼಹಿಟ್ಲರ್ʼ ಸೂಪರ್ ಹಿಟ್ ಸಿನಿಮಾವಾಗಿ ಹೊರಹೊಮ್ಮಿತ್ತು. ಈ ಸಿನಿಮಾ ಜನವರಿ 1ಕ್ಕೆ ರೀ ರಿಲೀಸ್ ಆಗಲಿದೆ.
ಈ ಸಿನಿಮಾಗಳು ಸೇರಿದಂತೆ ಉಳಿದ ಸಿನಿಮಾಗಳು ಕೂಡ ರೀ- ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.