Advertisement

Davangere: ಉತ್ತಮ ಹಿಂಗಾರು: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

12:23 PM Dec 28, 2024 | Team Udayavani |

ದಾವಣಗೆರೆ: ಪ್ರಸಕ್ತ ವರ್ಷ ಮುಂಗಾರು ಮಳೆ ಉತ್ತಮವಾಗಿ ಸುರಿದು ಅನ್ನದಾತರಲ್ಲಿ ಹರ್ಷ ಮೂಡಿಸಿದ ಬೆನ್ನಲ್ಲೇ ಈಗ ಹಿಂಗಾರು ಮಳೆ ಕೂಡ ಉತ್ತಮವಾಗಿ ಸುರಿದು ರೈತರ ಖುಷಿ ಇಮ್ಮಡಿಸಿದೆ. ಹಿಂಗಾರು ಹಂಗಾಮಿಗಾಗಿ ರಾಜ್ಯದಲ್ಲಿ ಈವರೆಗೆ (ಅ. 1ರಿಂದ ಡಿ. 13ವರೆಗೆ) ಶೇ. 33ರಷ್ಟು ಹೆಚ್ಚು ಮಳೆ ಸುರಿದಿದ್ದು, ಹಿಂಗಾರಿನಲ್ಲಿಯೂ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ.

Advertisement

ಈ ಸಲ ಹಿಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ಒಟ್ಟು 114.49 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದು ಇದರಿಂದ ಆಹಾರಧಾನ್ಯ 148.39 ಲಕ್ಷ ಟನ್‌ ಹಾಗೂ ಎಣ್ಣೆಕಾಳು 13.89 ಲಕ್ಷ ಟನ್‌ ಉತ್ಪಾದನೆ ನಿರೀಕ್ಷಿಸಲಾಗಿದೆ. ಕೃಷಿ ಇಲಾಖೆಯ ಡಿ.13ರ ವರೆಗಿನ ವರದಿ ಪ್ರಕಾರ, ಪ್ರಸಕ್ತ ಹಿಂಗಾರು ಹಂಗಾಮಿನ ಪ್ರಸ್ತಾವಿತ ಬಿತ್ತನೆ ಗುರಿ 25.53 ಲಕ್ಷ ಹೆಕ್ಟೇರ್‌ ಇದ್ದು, ಈವರೆಗೆ 22.29 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದ್ದು ಶೇ. 87 ಬಿತ್ತನೆಯಾದಂತಾಗಿದೆ. ಕಳೆದ ವರ್ಷ ಮಳೆ ಕೊರತೆ ಕಾರಣದಿಂದ ಈ ಅವಧಿಗೆ ಶೇ. 20.24ರಷ್ಟು ಮಾತ್ರ ಬಿತ್ತನೆಯಾಗಿತ್ತು.

ರಾಜ್ಯದಲ್ಲಿ ಹಿಂಗಾರು ವಾಡಿಕೆ ಮಳೆ (ಅ. 1ರಿಂದ ಡಿ. 13ವರೆಗೆ) ಸರಾಸರಿ 178.7 ಮಿಮೀ ಇದ್ದರೆ, ವಾಸ್ತವಿಕವಾಗಿ 237 ಮಿಮೀ ಮಳೆ ಸುರಿದಿದೆ. ಶೇ. 33ರಷ್ಟು ಹೆಚ್ಚು ಮಳೆಯಾಗಿದೆ. ಪ್ರಸಕ್ತ ಹಿಂಗಾರು ಅವಧಿಯಲ್ಲಿ ರಾಯಚೂರು (ಶೇ. 44), ಯಾದಗಿರಿ (ಶೇ. 31), ಬೀದರ್‌ (ಶೇ. 23) ಹಾಗೂ ವಿಜಯಪುರ (ಶೇ. 34) ಜಿಲ್ಲೆಗಳಲ್ಲಿ ಒಂದಿಷ್ಟು ಮಳೆ ಕೊರತೆಯಾಗಿದ್ದು ಹೊರತುಪಡಿಸಿದರೆ ರಾಜ್ಯದ ಉಳಿದೆಲ್ಲ ಜಿಲ್ಲೆಗಳಲ್ಲಿ ಡಿ. 13ರ ವರೆಗಿನ ಅಂಕಿ-ಅಂಶದ ಪ್ರಕಾರ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿರುವುದು ವಿಶೇಷ.

ಹಿಂಗಾರು ಹಂಗಾಮಿನ ಆಹಾರಧಾನ್ಯಗಳ ಬಿತ್ತನೆ ಗಮನಿಸಿದರೆ 22.02 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಈವರೆಗೆ 19.61 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇ. 89ರಷ್ಟು ಗುರಿ ಸಾಧಿಸಲಾಗಿದೆ. ಹಿಂದಿನ ವರ್ಷ ಈ ಅವಧಿಗೆ ಕೇವಲ ಶೇ. 18.09ರಷ್ಟು ಬಿತ್ತನೆಯಾಗಿತ್ತು. ಎಣ್ಣೆಕಾಳುಗಳ ಹಿಂಗಾರು ಹಂಗಾಮಿನ ಬಿತ್ತನೆಯಲ್ಲಿ ಶೇ. 71ರಷ್ಟು ಸಾಧನೆಯಾಗಿದೆ. ಒಟ್ಟು 2.62 ಲಕ್ಷ ಹೆಕ್ಟೇರ್‌ ಗುರಿಯಲ್ಲಿ ಶೇ. 1.86ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ವಾಣಿಜ್ಯ ಬೆಳೆಗಳ ಬಿತ್ತನೆಯಲ್ಲಿ ಶೇ. 92ರಷ್ಟು ಸಾಧನೆಯಾಗಿದ್ದು ಒಟ್ಟು 0.89 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 0.82 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ.

ಗುರಿ ಮೀರಿ ಬಿತ್ತನೆ ಹಿಂಗಾರು ಹಂಗಾಮು ಬಿತ್ತನೆಯಲ್ಲಿ ಮಂಡ್ಯ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು ಬಿತ್ತನೆಯಲ್ಲಿ, ಶೇ. 130ರಷ್ಟು ಸಾಧನೆ ಮಾಡಿದೆ. ಜಿಲ್ಲೆಯಲ್ಲಿ 0.24 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಇದ್ದರೆ, ಈಗಾಗಲೇ 0.27 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

Advertisement

ಕೋಲಾರ ಜಿಲ್ಲೆಯಲ್ಲಿ ಶೇ. 106ರಷ್ಟು ಹಿಂಗಾರು ಬಿತ್ತನೆಯಾಗಿದೆ. 0.05 ಲಕ್ಷ ಹೆಕ್ಟೇರ್‌ ಗುರಿಯಲ್ಲಿ 0.06 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ರಾಜ್ಯದ ಹಿಂಗಾರು ಬಿತ್ತನೆಯಲ್ಲಿ ಎರಡನೇ ಸ್ಥಾನದಲ್ಲಿದೆ.

ಕೊಪ್ಪಳ ಜಿಲ್ಲೆಯಲ್ಲಿ ಶೇ.100ರಷ್ಟು ಬಿತ್ತನೆಯಾಗಿದೆ. 1.69 ಲಕ್ಷ ಹೆಕ್ಟೇರ್‌ ಗುರಿಯಲ್ಲಿ 1.70 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಇನ್ನುಳಿದಂತೆ ಗದಗ ಹಾಗೂ ಮೈಸೂರು ಜಿಲ್ಲೆ ಶೇ. 99, ಧಾರವಾಡ ಶೇ. 98, ರಾಯಚೂರು ಶೇ. 97, ಬಾಗಲಕೋಟೆ ಶೇ. 91, ಯಾದಗಿರಿ ಜಿಲ್ಲೆ ಶೇ. 90ರಷ್ಟು ಹಿಂಗಾರು ಬಿತ್ತನೆಯಾಗಿದೆ. ಹಿಂಗಾರು ಮಳೆ ಈ ಬಾರಿ ಉತ್ತಮವಾಗಿದ್ದು ಉತ್ತಮ ಇಳುವರಿಯ ನಿರೀಕ್ಷೆ ಇದೆ.

ಬೀಜ, ಗೊಬ್ಬರ ದಾಸ್ತಾನು ವಿವರ ಹಿಂಗಾರು, ಬೇಸಗೆ ಹಂಗಾಮಿನಲ್ಲಿ 3.75 ಲಕ್ಷ ಕ್ವಿಂಟಲ್‌ ಪ್ರಮಾಣಿತ ಬಿತ್ತನೆ ಬೀಜಗಳ ಬೇಡಿಕೆಯಿದ್ದು, ಈವರೆಗೆ 2.85 ಲಕ್ಷ ಕ್ವಿಂಟಾಲ್‌ (13-12-24ವರೆಗೆ) ವಿತರಣೆ ಮಾಡಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 0.20 ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಜ ದಾಸ್ತಾನು ಇದೆ. ಅದೇ ರೀತಿ ಪ್ರಸಕ್ತ ಹಿಂಗಾರು ಹಂಗಾಮಿಗೆ 15.69 ಲಕ್ಷ ಮೆಟ್ರಿಕ್‌ ಟನ್‌ ವಿವಿಧ ರಾಸಾಯನಿಕ ಗೊಬ್ಬರಗಳ ಬೇಡಿಕೆಯಿದ್ದು, ಪ್ರಸ್ತುತ ರಾಜ್ಯದಲ್ಲಿ 15.91ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಇದೆ. 7.55 ಲಕ್ಷ ಮೆ.ಟನ್‌ ಮಾರಾಟವಾಗಿ 8.35 ಲಕ್ಷ ಮೆಟ್ರಿಕ್‌ ಟನ್‌ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ತಿಳಿಸಿದೆ.

 ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next