Advertisement

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

03:29 PM Dec 27, 2024 | Team Udayavani |

ಉದಯವಾಣಿ ಸಮಾಚಾರ
ಕೊಪ್ಪಳ: ಕಲ್ಲಂಗಡಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಜಿಲ್ಲೆಯ ರೈತರಿಗೆ ಅಗತ್ಯ ಸಲಹೆಗಳನ್ನು ನೀಡಲಾಗಿದೆ. ಜಿಲ್ಲೆಗೆ ಕಲ್ಲಂಗಡಿ ಒಂದು ಮುಖ್ಯವಾದ ಕುಂಬಳ ಜಾತಿ ಅತ್ಯಂತ ಲಾಭದಾಯಕ ಅಲ್ಪಾವಧಿ ಬೆಳೆಯಾಗಿದೆ. ಇತ್ತೀಚೆಗೆ ಕಲ್ಲಂಗಡಿಯನ್ನು ವರ್ಷಪೂರ್ತಿ ಬೆಳೆಯಲಾಗುತ್ತಿದ್ದು, ಹಲವಾರು ಕಂಪನಿಗಳು ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ.

Advertisement

ಕಲ್ಲಂಗಡಿ ಒಂದು ಚಳಿಗಾಲದ ಬೆಳೆಯಾಗಿದ್ದು, ಅಕ್ಟೋಬರ್‌ನಿಂದ ಜನವರಿವರೆಗೂ ಉತ್ತಮ ಇಳುವರಿ ಪಡೆಯಬಹುದು. ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಹಣ್ಣುಗಳು ಬರುವಂತೆ ಯೋಜನೆ ಹಾಕಿಕೊಂಡಲ್ಲಿ ರೈತರಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಕಲ್ಲಂಗಡಿಯನ್ನು ಸಾಮಾನ್ಯವಾಗಿ ಮಸಾರಿ ಮತ್ತು ಮರಳು ಮಿಶ್ರಿತ ಕಪ್ಪು ಮಣ್ಣು ಮತ್ತು ನೀರು ಬಸಿದು ಹೋಗುವ ಮಣ್ಣು ಮತ್ತು ಕೆರೆ ಹಾಗೂ ನದಿ ತೀರ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯಬಹುದು.

ಮಣ್ಣಿನ ರಸ ಸಾರ 6ರಿಂದ 7, ಉಷ್ಣಾಂಶ 15 ಡಿ.ಸೆ. ಯಿಂದ 40 ಡಿ.ಸೆ., ಆದ್ರತೆ ಶೇ. 60 ರಿಂದ 70 ಮತ್ತು ಮಳೆಯ ಪ್ರಮಾಣ 200 ಮಿ.ಮಿ. ಯಿಂದ 650 ಮಿ.ಮಿ., ಹೆಚ್ಚು ಉಷ್ಣ ಹಾಗೂ ಬಿಸಿಲು ಇರುವ ವಾತಾವರಣ ಸೂಕ್ತವಾಗಿದೆ. ಕಲ್ಲಂಗಡಿಯಲ್ಲಿ ಮುಖ್ಯವಾಗಿ ನಾಮಧಾರಿತ ತಳಿಗಳು, ಕಪ್ಪು ಬಣ್ಣದ ಕೆಂಪು ಮತ್ತು ಕಡು ಕೆಂಪು ತಿರುಳು ಹೊಂದಿರುವ ತಳಿಗಳು. ಅಲ್ಲದೇ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ ಅರ್ಕಾ ಮಾಣಿಕ್‌ ಮತ್ತು ಅರ್ಕಾ ಮುತ್ತು ಎನ್ನುವ ತಳಿಗಳು ಇವೆ.

ಇದಲ್ಲದೇ ಅನೇಕ ಖಾಸಗಿ ಕಂಪನಿಗಳ ಸಂಕರಣ ತಳಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಕಲ್ಲಂಗಡಿ ಬೆಳೆಯನ್ನು 2.5 ಮೀ ರಿಂದ 3 ಮೀ , 1 ಮೀ ಅಂತರದಲ್ಲಿ ಏರು ಮಡಿ ಮಾಡಿ ಪ್ಲಾಸ್ಟಿಕ್‌ ಹೊದಿಕೆ ಹಾಕಿ ಬೆಳೆಯುವುದು ಆಧುನಿಕ ಪದ್ದತಿಯಾಗಿದೆ. ಇದರಿಂದ ಕೀಟ ಮತ್ತು ರೋಗಗಳ ಪರಿಣಾಮಕಾರಿ ನಿಯಂತ್ರಣ ಮಾಡಬಹುದು.

Advertisement

ಎಕರೆಗೆ ಬೇಕಾಗುವ ಬೀಜಗಳ ಪ್ರಮಾಣ ಸಂಕರಣ ತಳಿಗಳಾದಲ್ಲಿ 300 ರಿಂದ 400 ಗ್ರಾಂ ಮತ್ತು ಇತರೆ ತಳಿಗಳಾದಲ್ಲಿ 750 ಗ್ರಾಂ. ಆದಷ್ಟು ಕೊಟ್ಟಿಗೆ ಮತ್ತು ಸಾವಯವ ಗೊಬ್ಬರ ಅಲ್ಲದೇ ಎರೆಹುಳು ಗೊಬ್ಬರಗಳನ್ನು ಜೈವಿಕ ಗೊಬ್ಬರಗಳಾದ ಟ್ರೈಕೊಡರ್ಮ, ಸೂಡೊಮೋನಾಸ್‌ ಮತ್ತು ವ್ಯಾಮ್‌ನೊಂದಿಗೆ ಸಮೃದ್ಧಿಗೊಳಿಸಿ ಬಳಸುವುದರಿಂದ ರೋಗ ಮತ್ತು ಕೀಟದ ಬಾಧೆ ತಡೆಗಟ್ಟಬಹುದು ಎಂದಿದ್ದಾರೆ.

ಪ್ರತಿ ಎಕರೆಗೆ 1 ಕ್ವಿಂಟಾಲ್ ಬೇವಿನ ಹಿಂಡಿ ಬೆರೆಸುವುದು ಸೂಕ್ತ. ಬಿತ್ತನೆ ಮಾಡಿದ 20 ರಿಂದ 30 ದಿನಗಳೊಳಗೆ ಕುಡಿ
ಚಿವುಟುವದರಿಂದ ಹೆಚ್ಚಿನ ಇಲುಕುಗಳು ಬಿಟ್ಟು ಇಳುವರಿ ಹೆಚ್ಚಾಗುವುದು ಅಲ್ಲದೇ ಕೀಟಗಳ ಬಾಧೆ ತಡೆಗಟ್ಟಬಹುದು. ಬಳ್ಳಿಗೆ 7ರಿಂದ 8 ಗಿಣ್ಣುಗಳ ಬಿಡುವ ಹೂವುಗಳು ಫಲಪ್ರದವಾಗಿರುತ್ತವೆ. 11 ಗಿಣ್ಣಿನ ನಂತರ ಬರುವ ಹೆಣ್ಣು ಹೂವುಗಳನ್ನು ತೆಗೆಯುವುದು ಸೂಕ್ತವಾಗಿವೆ.

ಹೆಚ್ಚಿನ ಮಾಹಿತಿಗೆ ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳು ಡಾ| ಎಂ.ವಿ.ರವಿ ಮೊ.9480247745 ಮತ್ತು
ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ಮೊ.ನಂ. 8217696837 ಅವರನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next