ಕಲಬುರಗಿ: ಸುಮಾರು 300 ಕೋ.ರೂ ವೆಚ್ಚದಲ್ಲಿ ಕಲಬುರಗಿಯಲ್ಲಿ ಹೊಸದಾಗಿ ನಿರ್ಮಿಸಲಾದ ಜಯದೇವ ಹೃದ್ರೋಗ ಆಸ್ಪತ್ರೆಯ ಹೊಸ ಕಟ್ಟಡ ಈ ತಿಂಗಳು ಹಾಗೂ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಜಯದೇವ ಅಸ್ಪತ್ರೆ ಮುಂದಿನ ವರ್ಷಾಂತ್ಯಕ್ಕೆ ನಾಡಿಗೆ ಸಮರ್ಪಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಮಂಗಳವಾರ (ಡಿ.03) ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (KKRDB) ಮಂಡಳಿಯ ಅನುದಾನದಲ್ಲಿ ನಿರ್ಮಾಣಗೊಂಡ ಜಯದೇವ ಹೃದಯ ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, ಆಸ್ಪತ್ರೆ ಕಟ್ಟಡ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಿದೆ. ಬೆಳಗಾವಿ ಅಧಿವೇಶನ ಮುಕ್ತಾಯವಾದ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಮಾಲೋಚಿಸಿ ದಿನಾಂಕ ನಿಗದಿ ಮಾಡಲಾಗುವುದು. ನೂತನ ಕಟ್ಟಡದಲ್ಲಿ ಎರಡು ಕ್ಯಾಥಲಾಬ್ ಹಾಗೂ ಎರಡು ಸುಸಜ್ಜಿತ ಆಸ್ಪತ್ರೆಯ ಥೇಟರ್ ರೆಡಿಯಾಗಿವೆ. ಪ್ರಮುಖವಾಗಿ ಈಗಾಗಲೇ ನೂತನ ಕಟ್ಟಡಕ್ಕೆ ಕ್ಯಾಥಲಾಬ್‌ವೊಂದು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.
371 ಹಾಸಿಗೆಯುಳ್ಳ ಕಲಬುರಗಿ ಜಯದೇವ ಆಸ್ಪತ್ರೆಯು 371 ಜಾರಿಯಾದ ದಶಮಾನೋತ್ಸವ ಸಂಭ್ರಮದಲ್ಲಿ ಲೋಕಾರ್ಪಣೆಗೊಳ್ಳುವುದು ಮೆರಗು ತರುವಂತಿದೆ. ಪ್ರಮುಖವಾಗಿ ಹಣಕಾಸು ಇಲಾಖೆ ಜಯದೇವದಲ್ಲಿನ 120 ನರ್ಸ್ ಹಾಗೂ 24 ನುರಿತ ವೈದ್ಯರ ನೇಮಕಾತಿಗೆ ಅನುಮತಿ ನೀಡಿದೆ. ಜಯದೇವ ಆಸ್ಪತ್ರೆಯಿಂದ ಅಧಿಸೂಚನೆ ಹೊರಬಿದ್ದು, ವಾಕ್ ಇನ್ ಇಂಟರ್ವ್ಯೂ ನಡೆದ ನಂತರ ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಬೆಂಗಳೂರು, ಮೈಸೂರು ನಂತರ ಕಲಬುರಗಿಯದ್ದು ಮೂರನೇ ಜಯದೇವ ಆಸ್ಪತ್ರೆಯಾಗಿದ್ದು, ಹುಬ್ಬಳ್ಳಿಯಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಶುರುವಾಗಿದೆ. 2025ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ವಿವರಣೆ ನೀಡಿದರು.
ಎಲ್ಲ ಆಸ್ಪತ್ರೆಗಳಿಗೆ ಸೂಚನೆ: ಕಲಬುರಗಿಯಲ್ಲಿನ ಜಿಮ್ಸ್ ಆಸ್ಪತ್ರೆಯಿಂದ ಮಗು ಅಪಹರಣವಾಗಿದ್ದನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ಪೊಲೀಸರು ಹೆಚ್ಚಿನ ಮುತುವರ್ಜಿ ವಹಿಸಿ ಪತ್ತೆ ಹಚ್ಚಿದ್ದಾರೆ. ಈಗಾಗಲೇ ಅಪಹರಣ ಸಂಬಂಧ ವರದಿ ಸಲ್ಲಿಕೆಯಾಗಿದೆ. ಅದರಂತೆ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಇಂದಿರಾಗಾಂಧಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: 92 ಕೋ.ರೂ ವೆಚ್ಚದಲ್ಲಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಗುಲ್ಬರ್ಗ ವಿವಿ ಆವರಣದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಬೆಂಗಳೂರು ನಂತರ ರಾಜ್ಯದ ಎರಡನೇ ಮಕ್ಕಳ ಆಸ್ಪತ್ರೆ ಇದಾಗಲಿದೆ. ಅದೇ ತೆರನಾಗಿ ತಾಯಿ ಮತ್ತು ಮಗುವಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಳೇ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ. ಪ್ರಮುಖವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಜಿಮ್ಸ್ 8, 9 ಹಾಗೂ 10ನೇ ಕಟ್ಟಡದಲ್ಲಿ 2-3 ತಿಂಗಳಲ್ಲಿ ಪ್ರಾರಂಭಿಸಲಾಗುವುದು. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮೇಲ್ದರ್ಜೆಗೇರಿಸಲಾಗಿದೆ. ಒಟ್ಟಾರೆ ಕಲಬುರಗಿ ಮೆಡಿಕಲ್ ಹಬ್ ಆಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ವಿವರಣೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಮಾತನಾಡಿ, ಮಂಡಳಿಯಿಂದ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಅನುದಾನ ಖರ್ಚು ಮಾಡಲಾಗುತ್ತಿದೆ. ಪ್ರಮುಖವಾಗಿ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಕ ಭಾಗದ ಆಸ್ಪತ್ರೆಗಳ ಮೇಲ್ದರ್ಜೆಗೇರಿಸುವ ಸಂಬಂಧಪಟ್ಟಂತೆ ನಿರ್ಣಯ ಕೈಗೊಳ್ಳಲಾಗಿದ್ದು, ಈಗಾಗಲೇ 441 ಕೋ.ರೂ ವೆಚ್ಚದ ಡಿಪಿಆರ್ ಸಿದ್ಧವಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು ಉಪಸ್ಥಿತರಿದ್ದರು.