ಅಹಮದಾಬಾದ್: ಈ ಹಿಂದೆ ಕಾಂಗ್ರೆಸ್ ಪಕ್ಷದ ಬೆಂಬಲದಿಂದಾಗಿ ಸಮಾಜ ವಿರೋಧಿ ಶಕ್ತಿಗಳು ಗುಜರಾತ್ ನಲ್ಲಿ ದಳ್ಳುರಿಯಲ್ಲಿ ತೊಡಗಿದ್ದವು. ಆದರೆ 2002ರಲ್ಲಿ ಸಮಾಜಘಾತುಕರಿಗೆ ತಕ್ಕ ಪಾಠ ಕಲಿಸಿದ ನಂತರ, ಅವರು ಅಂತಹ ಚಟುವಟಿಕೆಯನ್ನು ನಿಲ್ಲಿಸಿದ್ದರು. ಆ ನಂತರ ರಾಜ್ಯದಲ್ಲಿ ಬಿಜೆಪಿ ಶಾಶ್ವತ ಶಾಂತಿಯನ್ನು ನೆಲೆಗೊಳ್ಳುವಂತೆ ಮಾಡಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು ಸ್ಪೋಟ ಪ್ರಕರಣ ತನಿಖೆಯನ್ನು ‘ಎನ್ಐಎ’ ಗೆ ವರ್ಗಾಯಿಸಿದ ರಾಜ್ಯ ಸರ್ಕಾರ
2002ರ ಫೆಬ್ರವರಿಯಲ್ಲಿ ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಕರಸೇವಕರಿದ್ದ ಬೋಗಿಗೆ ಬೆಂಕಿ ಹಚ್ಚಿದ್ದ ಘಟನೆಯಿಂದಾಗಿ ಗುಜರಾತ್ ನ ಹಲವು ಭಾಗಗಳು ಭಾರೀ ಪ್ರಮಾಣದ ಕೋಮುದಳ್ಳುರಿಗೆ ಸಾಕ್ಷಿಯಾಗುವಂತಾಗಿತ್ತು.
ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಖೇಡಾ ಜಿಲ್ಲೆಯ ಮಹುಧಾ ನಗರದ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ಬಿಜೆಪಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.
ಗುಜರಾತ್ ನಲ್ಲಿ ಕಾಂಗ್ರೆಸ್ (1995ಕ್ಕಿಂತ ಮೊದಲು) ಆಡಳಿತ ನಡೆಸುತ್ತಿದ್ದಾಗ ಕೋಮು ದಳ್ಳುರಿ ವ್ಯಾಪಕವಾಗಿತ್ತು. ಕಾಂಗ್ರೆಸ್ ಅಂದು ವಿವಿಧ ಸಮುದಾಯ, ಜಾತಿಗಳ ನಡುವೆ ಕೋಮು ದ್ವೇಷವನ್ನು ಪ್ರಚೋದಿಸುತ್ತಿತ್ತು. ಇಂತಹ ಘಟನೆಗಳಿಂದ ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಅನ್ನು ಭದ್ರಪಡಿಸಿಕೊಂಡಿತ್ತು. ಮತ್ತು ಸಮಾಜದಲ್ಲಿನ ಬಹುಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಎಸಗುತ್ತಿತ್ತು ಎಂದು ಶಾ ಹೇಳಿದರು.
ಕಾಂಗ್ರೆಸ್ ಬೆಂಬಲದಿಂದ ಇಂತಹ ಸಮಾಜಘಾತುಕರು ಗುಜರಾತ್ ನಲ್ಲಿ ಹಿಂಸಾಚಾರ ನಡೆಸುತ್ತಿದ್ದರು. ಆದರೆ 2002ರ ಕೋಮುಗಲಭೆಯಲ್ಲಿ ತಕ್ಕ ಪಾಠ ಕಲಿಸುವ ಮೂಲಕ ಗುಜರಾತ್ ನಲ್ಲಿ ಶಾಂತಿ ನೆಲೆಸುವಂತಾಗಿದೆ ಎಂದು ಶಾ ತಿಳಿಸಿದ್ದಾರೆ.